ಬೆಟ್ಟತ್ತೂರು: ಕೊಡವರ ಹೊಸ ವರ್ಷ ಎಡಮ್ಯಾರ್ ಆಚರಣೆ

KannadaprabhaNewsNetwork | Published : Apr 16, 2024 1:08 AM

ಸಾರಾಂಶ

ಪ್ರಕೃತಿ ಆರಾಧಕರಾದ ಕೊಡವರ ವಿಶಿಷ್ಟವಾದ ಆಚರಣೆಯನ್ನು ವಿಶ್ವಮಟ್ಟಕ್ಕೆ ಪರಿಚಯಿಸುವ ಸಲುವಾಗಿ ಎಡಮ್ಯಾರ್‌ ಅನ್ನು ಸಿಎನ್‌ಸಿ ಸಂಘಟನೆ ಸಾರ್ವತ್ರಿಕವಾಗಿ ಆಚರಿಸಿಕೊಂಡು ಬರುತ್ತಿದೆ. ಇದು 30ನೇ ವರ್ಷದ ಕಾರ್ಯಕ್ರಮವಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡವರ ಹೊಸ ವರ್ಷ ಎಡಮ್ಯಾರನ್ನು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮದೆನಾಡಿನ ಬೆಟ್ಟತ್ತೂರು ಗ್ರಾಮದಲ್ಲಿ ಆಚರಿಸಲಾಯಿತು.

ಗ್ರಾಮದ ಕೂಪದಿರ ಎನ್.ಮೋಹನ್ ಅವರ ಗದ್ದೆಯಲ್ಲಿ ಭೂತಾಯಿಗೆ ವಿಧಿವತ್ತಾಗಿ ಪೂಜೆ ಸಲ್ಲಿಸಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ಕೆಂಪಯ್ಯ, ಕರಿಯಣ್ಣ ಜೋಡೆತ್ತುಗಳ ಮೂಲಕ ಉಳುಮೆ ಮಾಡಿದರು. ಭೂತಾಯಿ ಹಾಗೂ ಆದಿಮಸಂಜಾತ ಕೊಡವ ಬುಡಕಟ್ಟು ಜನರ ನಡುವಿನ ಅವಿನಾಭಾವ ಸಂಬಂಧವನ್ನು ಪ್ರತಿಪಾದಿಸಿದರು. ಗಾಳಿಯಲ್ಲಿ ಗುಂಡು ಹಾರಿಸಿದರು, ಊರು ಮಂದ್‌ನಲ್ಲಿ ಹಿರಿಯರನ್ನು ಸ್ಮರಿಸಿದರು.

ಪ್ರಕೃತಿ ಆರಾಧಕರಾದ ಕೊಡವರ ವಿಶಿಷ್ಟವಾದ ಆಚರಣೆಯನ್ನು ವಿಶ್ವ ಮಟ್ಟಕ್ಕೆ ಪರಿಚಯಿಸುವ ಸಲುವಾಗಿ ಹೊಸ ವರ್ಷ ‘ಎಡಮ್ಯಾರ್’ ಅನ್ನು ಸಿಎನ್‌ಸಿ ಸಂಘಟನೆ ಪ್ರತಿವರ್ಷ ಸಾರ್ವತ್ರಿಕವಾಗಿ ಆಚರಿಸಿಕೊಂಡು ಬರುತ್ತಿದ್ದು, ಇದು 30ನೇ ವರ್ಷದ ಕಾರ್ಯಕ್ರಮವಾಗಿದೆ ಎಂದರು.

ನಮ್ಮ ಸಂಸ್ಕೃತಿ, ಪರಂಪರೆಯನ್ನು ಈ ರೀತಿಯಲ್ಲಿ ಪ್ರತಿಬಿಂಬಿಸುವುದರಿಂದ ಕೊಡವರ ಅಸ್ತಿತ್ವದ ಬಗ್ಗೆ ಇಡೀ ವಿಶ್ವಕ್ಕೆ ತಿಳಿಯಲಿದೆ. ಅತ್ಯಂತ ಸೂಕ್ಷ್ಮ ಆದಿಮಸಂಜಾತ ಕೊಡವರ ಸ್ಥಿತಿಗತಿಯ ಬಗ್ಗೆ ಅರಿವು ಮೂಡಲಿದ್ದು, ಹಕ್ಕು ಮತ್ತು ಸಂಸ್ಕೃತಿಯ ರಕ್ಷಣೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದ ಎನ್.ಯು.ನಾಚಪ್ಪ, ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮಂಡಿಸಿದರು.

ಕೊಡವ ಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ಮತ್ತು ಸಂವಿಧಾನದ ಆರ್ಟಿಕಲ್ 244 ಆರ್/ಡಬ್ಲ್ಯೂ 6ನೇ ಮತ್ತು 8ನೇ ಶೆಡ್ಯೂಲ್ ಅಡಿಯಲ್ಲಿ ಸ್ವ-ಆಡಳಿತ ಹಾಗೂ ಕೊಡವ ಜನಾಂಗದ ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕುಗಳು ದೊರೆಯಬೇಕು. ಕೊಡವ ಬುಡಕಟ್ಟಿನ ಜನರನ್ನು ಕೊಡವ ಸೀಮೆಯ ಆದಿಮ ಬುಡಕಟ್ಟು ಜನಾಂಗ ಎಂದು ಗುರುತಿಸಬೇಕು. ಕೊಡವರ ಸಮಗ್ರ ಸಬಲೀಕರಣಕ್ಕಾಗಿ ಕೊಡವ ಬುಡಕಟ್ಟು ಜನಾಂಗವನ್ನು ಸಂವಿಧಾನದ 340 ಮತ್ತು 342ನೇ ವಿಧಿಯಡಿಯಲ್ಲಿ ಎಸ್ಟಿ ಪಟ್ಟಿಗೆ ಸೇರಿಸಬೇಕು.

ಶಾಸ್ತ್ರೀಯ ಪ್ರಾಚೀನ ‘ಕೊಡವ ಥಕ್ಕ್’ ಅಂದರೆ ಕೊಡವ ಬುಡಕಟ್ಟಿನ ಮಾತೃಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್‌ನಲ್ಲಿ ಅಳವಡಿಸಬೇಕು. ಕೊಡವ ಸಂಸ್ಕೃತಿ ಮತ್ತು ಜಾನಪದ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಗಳ ಪಟ್ಟಿಯಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಿದ ಎನ್.ಯು.ನಾಚಪ್ಪ, ಡಾ.ಅಂಬೇಡ್ಕರ್ ಅವರನ್ನು ಸ್ಮರಿಸುವುದು ಮತ್ತು ಜಯಂತಿಯನ್ನು ಆಚರಿಸುವುದು ಸಂವಿಧಾನದ ಮಹಾನ್ ಶಿಲ್ಪಿಯ ಆತ್ಮಕ್ಕೆ ಸಲ್ಲಿಸುವ ಗೌರವವಾಗಿದೆ ಎಂದರು.

ಹೊಸ ವರ್ಷ ಎಡಮ್ಯಾರ್ ಆಚರಣೆ ಸಂದರ್ಭ ಕೂಪದಿರ ಮೋಹನ್, ಕೂಪದಿರ ಪುಷ್ಪಾ ಮುತ್ತಪ್ಪ, ಕೂಪದಿರ ಗಂಗವ್ವ, ಕೂಪದಿರ ಭವ್ಯ ಮಾಚಯ್ಯ, ಕೊಂಪ್ಳಿರ ಯಶವಂತ ಕುಮಾರ್, ಕೊಂಪ್ಳಿರ ನಯನಾ ಯಶವಂತ, ಕೂಪದಿರ ಸಾಬು, ಕೂಪದಿರ ಕಾವೇರಮ್ಮ, ಕೂಪದಿರ ವಿಹಾನ್, ವಿನು, ಪ್ರಣಮ್ ಕುಮಾರ್, ಕೆ.ಇರಾ ಜಗತ್ ಮತ್ತಿತರರು ಹಾಜರಿದ್ದರು.

Share this article