ಬಂಡೀಪುರದಲ್ಲಿ ಹೊಸ ವರ್ಷದ ಸಂಭ್ರಮಕ್ಕೆ ಅರಣ್ಯ ಇಲಾಖೆ ಬ್ರೇಕ್ ಹಾಕಿದ್ದು ಡಿ.31 ಮತ್ತು ಜ.1 ರಂದು ಪ್ರವಾಸಿಗರಿಗೆ ವಸತಿ ಗೃಹಗಳು ನೀಡದಿರಲು ಅರಣ್ಯ ಇಲಾಖೆ ಮುಂದಾಗಿದೆ.
ಗುಂಡ್ಲುಪೇಟೆ : ಬಂಡೀಪುರದಲ್ಲಿ ಹೊಸ ವರ್ಷದ ಸಂಭ್ರಮಕ್ಕೆ ಅರಣ್ಯ ಇಲಾಖೆ ಬ್ರೇಕ್ ಹಾಕಿದ್ದು ಡಿ.೩೧ ಮತ್ತು ಜ.೧ ರಂದು ಪ್ರವಾಸಿಗರಿಗೆ ವಸತಿ ಗೃಹಗಳು ನೀಡದಿರಲು ಅರಣ್ಯ ಇಲಾಖೆ ಮುಂದಾಗಿದೆ.
ಆದರೆ ಬಂಡೀಪುರದ ವಸತಿ ಗೃಹಗಳಿಗೆ ಮಾತ್ರ ನಿರ್ಬಂಧ ಹೇರಿದೆ. ಆದರೆ ಸಫಾರಿಗೆ ಅರಣ್ಯ ಇಲಾಖೆ ನಿರ್ಬಂಧ ವಿಧಿಸಿಲ್ಲ. ಕಳೆದ ಕೆಲ ವರ್ಷಗಳಿಂದ ಹೊಸ ವರ್ಷದ ಹಿಂದಿನ ದಿನ (ಡಿ.31) ರಂದು ಬಂಡೀಪುರ ವಸತಿ ಗೃಹಗಳನ್ನು ಪ್ರವಾಸಿಗರಿಗೆ ನೀಡುತ್ತಿಲ್ಲ. ನಿರ್ಬಂಧ ಹೇರಿಕೊಂಡು ಬಂದಿದೆ. ಕಳೆದ ಮೂರು ವರ್ಷದಿಂದ ಎರಡು ದಿನಕ್ಕೆ ವಿಸ್ತರಿಸಲಾಗಿದ್ದು ವಾರದ ರಜಾ ದಿನಗಳು ಹಾಗು ವಿಶೇಷ ದಿನಗಳಲ್ಲಿ ಬಂಡೀಪುರ ವಸತಿ ಗೃಹಗಳಿಗೆ ಬಾರಿ ಬೇಡಿಕೆ ಇರುತ್ತದೆ.
ಬಂಡೀಪುರ ವಲಯ ಅರಣ್ಯಧಿಕಾರಿ ಮಹದೇವು ಮಾತನಾಡಿ, ಬಂಡೀಪುರ ಹೊರ ವಲಯದ ಮೇಲುಕಾಮಹಳ್ಳಿ ಬಳಿಯ ಸಫಾರಿ ಕೇಂದ್ರದಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಿಲ್ಲ. ಬಂಡೀಪುರ ವಸತಿ ಗೃಹಗಳಿಗೆ ಮಾತ್ರ ಡಿ.31 ಮತ್ತು ಜ.1ರಂದು ನಿರ್ಬಂಧವನ್ನು ಕಳೆದ ಮೂರು ವರ್ಷಗಳಿಂದಲೂ ಹೇರಲಾಗಿದೆ. ಅರಣ್ಯ ಇಲಾಖೆ ಈ ವರ್ಷವೂ ವಸತಿ ಗೃಹಗಳಿಗೆ ನಿರ್ಬಂಧ ಹೇರಲಿದೆ. ಆದರೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸುತ್ತಲಿರುವ ಖಾಸಗಿ ರೆಸಾರ್ಟ್‌ಗೆ ನಿರ್ಬಂಧ ಹೇರಲು ಅರಣ್ಯ ಇಲಾಖೆಗೆ ಬರುವುದಿಲ್ಲ ಎಂದರು.
ಖಾಸಗಿ ರೆಸಾರ್ಟ್: ವಾಸ್ತವ್ಯಕ್ಕೆ ಕಡಿವಾಣ ಹಾಕಿ: ಬಂಡೀಪುರದ ವಸತಿ ಗೃಹಗಳಿಗೆ ಅರಣ್ಯ ಇಲಾಖೆ ಹೊಸ ವರ್ಷದ ಮೋಜು, ಮಸ್ತಿಗೆ ಡಿ.31 ಮತ್ತು ಜ.1 ರಂದು ವಸತಿ ಗೃಹಗಳಿಗೆ ನಿರ್ಬಂಧ ಹೇರಿದೆ. ಆದರೆ ಬಂಡೀಪುರ ಕಾಡಿನೊಳಗೆ ಇರುವ ಖಾಸಗಿ ರೆಸಾರ್ಟ್, ಹೋಂ ಸ್ಟೇಗಳಿಗೆ ನಿರ್ಬಂಧವಿಲ್ಲವೇಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. ಬಂಡೀಪುರ ವಸತಿ ಗೃಹಗಳಲ್ಲಿ ಪ್ರವಾಸಿಗರು ವಾಸ್ತವ್ಯ ಹೂಡಲು ಅವಕಾಶವಿಲ್ಲದ ಮೇಲೆ ಬಂಡೀಪುರ ಕಾಡಿನೊಳಗಿರುವ ಖಾಸಗಿ ರೆಸಾರ್ಟ್, ಹೋಂ ಸ್ಟೇಗಳಿಗೆ ರಾತ್ರಿ ವಾಸ್ತವ್ಯ ಹೂಡಲು ಅವಕಾಶ ಸರಿಯೇ?. ಹೊಸ ವರ್ಷದ ಹಿಂದಿನ ರಾತ್ರಿ ಸಂಭ್ರಮಾಚರಣೆ ಹಿನ್ನೆಲೆ ಮಧ್ಯರಾತ್ರಿ ತನಕ ಧ್ವನಿ ವರ್ಧಕ, ಸಂಗೀತ ಕಾರ್ಯಕ್ರಮ, ಪ್ಲಡ್‌ಲೈಟ್, ಫೋಕಾಸ್ ಲೈಟ್, ಫೈರ್ ಕ್ಯಾಂಪ್ ಹಾಕಲಿದ್ದಾರೆ.
ಬಂಡೀಪುರ ವಸತಿ ಗೃಹದಲ್ಲಿ ವಾಸ್ತವ್ಯಕ್ಕೆ ಬಂಡೀಪುರ ಅರಣ್ಯ ಇಲಾಖೆ ಅವಕಾಶ ನೀಡಿಲ್ಲ. ಆದರೆ ಖಾಸಗಿ ರೆಸಾರ್ಟ್, ಹೋಂ ಸ್ಟೇಗಳಲ್ಲಿ ರಾತ್ರಿಯಿಂದ ಮಧ್ಯರಾತ್ರಿಯ ತನಕ ಮೋಜು, ಮಸ್ತಿಗೆ ನಡೆಸುವುದಕ್ಕೆ ಅವಕಾಶ ಇರುವುದು ಎಷ್ಟು ಸರಿ?. ಕಾಡಿನೊಳಗಿರುವ ಖಾಸಗಿ ರೆಸಾರ್ಟ್ ಮತ್ತು ಹೋಂ ಸ್ಟೇಗಳಲ್ಲಿ ಮಧ್ಯರಾತ್ರಿಯ ತನಕ ಮೋಜು, ಮಸ್ತಿ, ಡ್ಯಾನ್ಸ್, ಧ್ವನಿವರ್ಧಕ ಬಳಕೆಯಿಂದ ವನ್ಯಜೀವಿಗಳಿಗೆ ಧಕ್ಕೆ ಆಗುವುದಿಲ್ಲವೇ?.
ಚಾಮರಾಜನಗರ ಜಿಲ್ಲಾಧಿಕಾರಿಗಳು ಬಂಡೀಪುರ ಸುತ್ತಲಿರುವ ಖಾಸಗಿ ರೆಸಾರ್ಟ್ ಮತ್ತು ಹೋಂ ಸ್ಟೇಗಳಿಗೆ ಡಿ.೩೧ ಮತ್ತು ಜ.೧ ರ ತನಕ ವಾಸ್ತವ್ಯಕ್ಕೆ ಬ್ರೇಕ್ ಹಾಕಬೇಕು ಎಂದು ಪರಿಸರ ಪ್ರಿಯರು ಆಗ್ರಹಿಸಿದ್ದಾರೆ.