
ಕನ್ನಡಪ್ರಭ ವಾರ್ತೆ ಕಾರವಾರ
ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ರಾತ್ರಿ ಸುಮಾರು 8.30ರಿಂದಲೇ ಜನರ ಆಗಮನ ಆರಂಭವಾಗಿದ್ದು, ತಮ್ಮ ಕಾರು, ಬೈಕ್‌ಗಳಲ್ಲಿ ಕಡಲತೀರದ ಮಯೂರ ವರ್ಮ ವೇದಿಕೆಯೆದುರಿನ ಪ್ರದೇಶದಲ್ಲಿ ಜಮಾವಣೆಗೊಂಡರು. ಸಾಕಷ್ಟು ಮಂದಿ ಅಡುಗೆ ತಯಾರಿಸಿಕೊಂಡು ಕುಟುಂಬ ಸಮೇತ ಕಡಲತೀರಕ್ಕೆ ಆಗಮಿಸಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ, ಯುವಕರ ತಂಡಗಳು ಸ್ಪೀಕರ್‌ಗಳಲ್ಲಿ ಹಾಡು ಹಾಕಿಕೊಂಡು ಡ್ಯಾನ್ಸ್ ಮಾಡಿದರು. ಈ ಬಾರಿ ಕಾರವಾರದಲ್ಲೂ ತಾಪಮಾನ ತೀವ್ರ ಇಳಿಕೆಯಾಗಿದ್ದು, ಚಳಿಯ ವಾತಾವರಣ ಉಂಟಾಗಿದ್ದ ಹಿನ್ನೆಲೆ ಅಲ್ಲಲ್ಲಿ ಜನರು ಕ್ಯಾಂಪ್ ಫೈರ್ ಹಾಕಿಕೊಂಡು ಕುಣಿದು, ಕುಪ್ಪಳಿಸಿದರು.
ಹೊಸ ವರ್ಷಾಚರಣೆಗೆ ಬಹುತೇಕರು ಗೋವಾದತ್ತ ಮುಖ ಮಾಡಿದ್ದರಾದರೂ ಕಾರವಾರದ ಕಡಲತೀರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾವಣೆಗೊಂಡಿದ್ದು, ಕುಟುಂಬಸ್ಥರು, ಸ್ನೇಹಿತರು, ಆಪ್ತರೊಂದಿಗೆ ಒಟ್ಟಾಗಿ ಹೊಸ ವರ್ಷವನ್ನು ತಮ್ಮದೇ ರೀತಿಯಲ್ಲಿ ಬರಮಾಡಿಕೊಳ್ಳಲು ಆಸಕ್ತಿ ವಹಿಸಿದಂತಿತ್ತು. ಗೋವಾ ಕಡಲತೀರಗಳಲ್ಲಿ ವಿವಿಧೆಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುವುದರಿಂದ ಬಹುತೇಕ ಬೀಚ್‌ಗಳು ಜನರಿಂದ ತುಂಬಿ ತುಳುಕುತ್ತಿರುತ್ತವೆ. ಹೀಗಾಗಿ ಜನಸಂದಣಿಯ ಕಿರಿಕಿರಿ ಬಯಸದವರು ಕಾರವಾರದ ಕಡಲತೀರದಲ್ಲೇ ಕುಳಿತು ಯಾವುದೇ ಅಬ್ಬರವಿಲ್ಲದೇ ಸರಳವಾಗಿ ಹೊಸ ವರ್ಷಕ್ಕೆ ಸ್ವಾಗತ ಕೋರಿದರು.12 ಗಂಟೆಯಾಗುತ್ತಲೇ ಕಡಲತೀರದಾದ್ಯಂತ ಪಟಾಕಿಗಳ ಅಬ್ಬರದೊಂದಿಗೆ ಹೊಸ ವರ್ಷದ ಶುಭಾಶಯಗಳ ಸದ್ದು ಜೋರಾಗಿತ್ತು. ಪರಸ್ಪರ ಶುಭಾಶಯಗಳ ವಿನಿಮಯ ಮಾಡಿಕೊಂಡ ಜನರು ಹೊಸವರ್ಷವನ್ನು ಬರಮಾಡಿಕೊಂಡ ಖುಷಿಯಲ್ಲಿ ಹಾಡಿ ಕುಣಿದು ಸಂಭ್ರಮಿಸಿದರು. ಈ ವೇಳೆ ಹಲವರು ಬಿಸಿಗಾಳಿ ತುಂಬಿದ ಬಲೂನ್‌ಗಳನ್ನು ಹಾರಿಬಿಡುವ ಮೂಲಕ ಕಳೆದ ವರ್ಷದ ದುಃಖಗಳು ದೂರಾಗಿ, ಈ ವರ್ಷ ಉತ್ತಮವಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಇನ್ನು ಕಡಲತೀರದಲ್ಲಿ ಸಾರ್ವಜನಿಕರ ಸಂಭ್ರಮಾಚರಣೆ ಹಿನ್ನೆಲೆ ಪೊಲೀಸ್ ಇಲಾಖೆಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಪುರುಷ ಹಾಗೂ ಮಹಿಳಾ ಪೊಲೀಸ್ ಸಿಬ್ಬಂದಿಯೊಂದಿಗೆ ಹೋಂಗಾರ್ಡ್ ಸಿಬ್ಬಂದಿಯನ್ನೂ ಸಹ ಕಡಲತೀರದಲ್ಲಿ ಸಾರ್ವಜನಿಕರ ಭದ್ರತೆ ಹಿತದೃಷ್ಟಿಯಿಂದ ನಿಯೋಜನೆ ಮಾಡಲಾಗಿತ್ತು. ಜೊತೆಗೆ ಹೆದ್ದಾರಿ ಫ್ಲೈಓವರ್ ಮೇಲೂ ಸಹ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿತ್ತು. ಕಡಲತೀರದಲ್ಲಿ 12.30ರವರೆಗೆ ಸಂಭ್ರಮಾಚರಣೆಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವಕಾಶ ನೀಡಿದ್ದು, ನಂತರ ಪೊಲೀಸರು ಕಡಲತೀರದಲ್ಲಿ ಇದ್ದವರನ್ನು ಮನೆಗೆ ಕಳುಹಿಸಿದರು.