ಹೊಸವರ್ಷದ ಸಡಗರ-ಸಂಭ್ರಮ; ದೇವಸ್ಥಾನಗಳಲ್ಲಿ ಪೂಜೆ ಕೈಂಕರ್ಯ

KannadaprabhaNewsNetwork |  
Published : Jan 02, 2025, 12:30 AM IST
ಹೊಸವರ್ಷದ ಹಿನ್ನಲೆಯಲ್ಲಿ ಬಳ್ಳಾರಿಯ ಶ್ರೀಕನಕ ದುರ್ಗಮ್ಮ ದೇವಸ್ಥಾನದಲ್ಲಿ ಬುಧವಾರ ಬೆಳಿಗ್ಗೆ ದೇವರ ದರ್ಶನಕ್ಕಾಗಿ ಭಕ್ತರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು.  | Kannada Prabha

ಸಾರಾಂಶ

ಮಂಗಳವಾರ ಸಂಜೆಯಿಂದ ಶುರುಗೊಂಡ ಹೊಸವರ್ಷದ ಸಂಭ್ರಮಾಚರಣೆ ಬುಧವಾರ ಬೆಳಗಿನ ಜಾವದವರೆಗೆ ಮುಂದುವರಿದಿತ್ತು.

ಬಳ್ಳಾರಿ: ನಗರವೂ ಸೇರಿದಂತೆ ಜಿಲ್ಲಾದ್ಯಂತ ಜನರು ಹೊಸ ವರ್ಷವನ್ನು ಸಡಗರದಿಂದ ಬರಮಾಡಿಕೊಂಡರು.

ಮಂಗಳವಾರ ಸಂಜೆಯಿಂದ ಶುರುಗೊಂಡ ಹೊಸವರ್ಷದ ಸಂಭ್ರಮಾಚರಣೆ ಬುಧವಾರ ಬೆಳಗಿನ ಜಾವದವರೆಗೆ ಮುಂದುವರಿದಿತ್ತು. ಮಹಿಳೆಯರು, ಮಕ್ಕಳು, ವೃದ್ಧರೂ ಹೊಸವರ್ಷದ ಸಂತಸದಲ್ಲಿ ಭಾಗಿಯಾಗಿದ್ದರು. ನಗರದ ಆಯಾ ಬಡಾವಣೆಗಳ ಮಹಿಳೆಯರು ಹಾಗೂ ಮಕ್ಕಳು ಕೇಕ್‌ ಕತ್ತರಿಸಿ, ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಿಕೊಂಡು ಇಡೀ ರಾತ್ರಿ ಹಾಡು, ಕುಣಿತಗಳೊಂದಿಗೆ ಸಂಭ್ರಮಿಸಿದರು. ಪುರುಷರು ಹೋಟೆಲ್, ಫಾರಂ ಹೌಸ್‌ಗಳಲ್ಲಿ ಸೇರಿಕೊಂಡು ಹೊಸವರ್ಷದ ಸಡಗರ ಅನುಭವಿಸಿದರು. ಹೊಸವರ್ಷದ ನೆಪದಲ್ಲಿ ನಗರದ ಅನೇಕ ಕಡೆಗಳಲ್ಲಿ ಇಸ್ಪೀಟ್, ಜೂಜಾಟಗಳು ನಡೆದವು ಎಂದು ತಿಳಿದುಬಂದಿದೆ.

ಹೊಸವರ್ಷದ ಸೂರ್ಯನ ದರ್ಶನಕ್ಕಾಗಿ ಯುವಕ-ಯುವತಿಯರು ಹಾಗೂ ಟ್ರಕ್ ಪ್ರಿಯರು ನಗರದ ಸಂಗನಕಲ್ಲುಗುಡ್ಡ, ಬಳ್ಳಾರಿಯ ಬೆಟ್ಟ, ಮಿಂಚೇರಿಗುಡ್ಡವನ್ನು ಹತ್ತಿ ನೂತನ ವರ್ಷಕ್ಕೆ ಸೂರ್ಯನನ್ನು ಸ್ವಾಗತಿಸಿಕೊಂಡರು.

ನೂತನ ವರ್ಷವು ಒಳಿತಾಗಲಿ ಎಂದು ನಗರದ ಪ್ರಮುಖ ದೇವಸ್ಥಾನಗಳಲ್ಲಿ ಬೆಳ್ಳಂಬೆಳಿಗ್ಗೆಯೇ ಪೂಜೆ ಸಲ್ಲಿಸುವ ದೃಶ್ಯಗಳು ಕಂಡು ಬಂದವು. ಇಲ್ಲಿನ ಶ್ರೀಕನಕ ದುರ್ಗಮ್ಮ ದೇವಸ್ಥಾನ, ಕೋಟೆ ಮಲ್ಲೇಶ್ವರಸ್ವಾಮಿ ದೇವಸ್ಥಾನ, ಬಾಲಾಜಿ ಕ್ಯಾಂಪ್ ಶಿವ ದೇವಸ್ಥಾನ, ಪಾರ್ವತಿನಗರದ ಅನಾದಿಲಿಂಗೇಶ್ವರ ಸ್ವಾಮಿ, ಬೆಂಗಳೂರು ರಸ್ತೆಯ ನಗರೇಶ್ವರಸ್ವಾಮಿ, ವಾಸವಿ ದೇವಾಲಯ, ಅಯ್ಯಪ್ಪಸ್ವಾಮಿ, ಸಾಯಿಬಾಬಾ ದೇವಾಲಯಗಳಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು.

ಶ್ರೀಕನಕ ದುರ್ಗಮ್ಮ ದೇವಸ್ಥಾನದಲ್ಲಿ ಬೆಳಗಿನ ಜಾವ 5 ಗಂಟೆಯಿಂದಲೇ ಭಕ್ತರ ದಂಡು ಕಂಡು ಬಂತು. ಸಾವಿರಾರು ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ಸಾಲಲ್ಲಿ ನಿಂತು ದೇವರ ದರ್ಶನ ಪಡೆದರು. ಹೊಸವರ್ಷದ ವಿಶೇಷ ದಿನವಾದ್ದರಿಂದ ಶ್ರೀಕನಕ ದುರ್ಗಮ್ಮ ದೇವಿಗೆ ವಿವಿಧ ಗಂಧ-ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ದೇವಸ್ಥಾನಗಳಲ್ಲಿ ವಿಶೇಷ ಪೂಜಾ ವಿಧಿ ವಿಧಾನಗಳಿಗೆ ಅವಕಾಶವಿತ್ತು.

ನೂತನ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆಯಿಂದಲೇ ನಗರದ ಪ್ರಮುಖ ಬೇಕರಿಗಳ ಮುಂದೆ ಕೇಕ್‌ಗಳ ಖರೀದಿ ನಡೆದಿತ್ತು. ಬುಧವಾರ ಸಂಜೆವರೆಗೂ ಕೇಕ್ ಖರೀದಿಯ ಉತ್ಸಾಹವಿತ್ತು. ಶಾಲಾ-ಕಾಲೇಜುಗಳು, ಮನೆಗಳಲ್ಲಿ ಕೇಕ್ ಕತ್ತರಿಸಿ ಹೊಸವರ್ಷದ ಸ್ವಾಗತ ಕಾರ್ಯಕ್ರಮಗಳು ನಡೆದವು. ಬೇಕರಿಗಳ ಮಾಲೀಕರು ವಿವಿಧ ಬಗೆಯ ಕೇಕ್‌ಗಳನ್ನು ತಯಾರಿಸಿ ಮಾರಾಟಕ್ಕೆ ಇರಿಸಿದ್ದರು. ಹೀಗಾಗಿ ಬೇಕರಿಗಳ ವ್ಯಾಪಾರ ಭರ್ಜರಿಯಾಗಿತ್ತು. ನೂತನ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಆಟೋಗಳು, ಬಸ್‌ಗಳು ಹಾಗೂ ವಾಣಿಜ್ಯ ಮಳಿಗೆಗಳಲ್ಲಿ ಹೂವಿನ ಅಲಂಕಾರ ಕಂಡು ಬಂತು. ನಗರದ ಹೂವಿನ ಮಾರುಕಟ್ಟೆಗೆ ಬೆಳ್ಳಂಬೆಳಿಗ್ಗೆಯ ಆಗಮಿಸಿದ್ದ ಜನರು ವಿವಿಧ ಬಗೆಯ ಹೂವುಗಳು ಹಾಗೂ ಹೂವಿನ ತೋರಣಗಳನ್ನು ಖರೀದಿಸಿದರು. ತಡರಾತ್ರಿವರೆಗೆ ಹೊಸವರ್ಷ ಸ್ವಾಗತ ಸಡಗರ ನಡೆದಿದ್ದರಿಂದ ನಗರದ ರಸ್ತೆಗಳಲ್ಲಿ ಎಂದಿನ ದಟ್ಟಣೆ ಇರಲಿಲ್ಲ. ಮಧ್ಯಾಹ್ನ 1 ಗಂಟೆ ಬಳಿಕವಷ್ಟೇ ಜನರ ಓಡಾಟ ಕಂಡು ಬಂತು. ಇನ್ನು ಹೊಸವರ್ಷಕ್ಕೆಂದು ಗೋವಾ, ಮಡಿಕೇರಿ, ಮಂಗಳೂರು ಸೇರಿದಂತೆ ನಾನಾ ಕಡೆಗಳಿಗೆ ಪ್ರವಾಸಕ್ಕೆ ತೆರಳಿದ್ದವರು ಬುಧವಾರ ಸಂಜೆ ವೇಳೆಗೆ ಊರಿಗೆ ಮರಳಿದರು. ಬಳ್ಳಾರಿ ನಗರ ಸೇರಿದಂತೆ ತಾಲೂಕು ಕೇಂದ್ರಗಳಲ್ಲೂ ಹೊಸವರ್ಷದ ಸಂಭ್ರಮ ಜೋರಾಗಿಯೇ ನಡೆದಿದೆ. ನಗರದ ನಾನಾ ಕಡೆ ರಾಜಕೀಯ ನಾಯಕರು ಹಾಗೂ ಚುನಾಯಿತ ಪ್ರತಿನಿಧಿಗಳು ಹೊಸವರ್ಷದ ಶುಭಾಶಯಗಳನ್ನು ಕೋರಿರುವ ಕಟೌಟ್‌ಗಳು ನಗರದ ನಾನಾ ಕಡೆ ರಾರಾಜಿಸುತ್ತಿವೆ. ಸ್ನೇಹಿತರು ಹಾಗೂ ಕುಟುಂಬ ಸದಸ್ಯರು ನೂತನ ವರ್ಷದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವ ದೃಶ್ಯಗಳು ಎಲ್ಲೆಡೆ ಕಂಡು ಬಂದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!