ಸವಾಲುಗಳ ನಡುವೆಯೂ ಪತ್ರಿಕೆಗಳು ಜೀವಂತ: ಕೆ.ಟಿ.ಹನುಮಂತು

KannadaprabhaNewsNetwork |  
Published : Nov 17, 2025, 12:30 AM IST
15ಕೆಎಂಎನ್‌ಡಿ-1ಮಂಡ್ಯದ ಸೇವಾಕಿರಣ ಸಭಾಂಗಣದಲ್ಲಿ ನಂಜಮ್ಮ ಮೋಟೇಗೌಡ ಚಾರಿಟಬಲ್‌ ಟ್ರಸ್ಟ್‌ ನಿಂದ ಪತ್ರಕರ್ತ ಕೆ.ಶ್ರೀನಿವಾಸ್‌ ಅವರಿಗೆ ಪತ್ರಿಕೋದ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. | Kannada Prabha

ಸಾರಾಂಶ

ಮೊಬೈಲ್ ಯುಗದಲ್ಲಿ ಪತ್ರಿಕೆಗಳನ್ನು ಓದುವವರ ಸಂಖ್ಯೆ ಕಡಿಮೆಯಾಗಿದ್ದರೂ ಪತ್ರಿಕೆಗಳು ಇನ್ನೂ ಓದುಗರನ್ನು ಹಿಡಿದಿಟ್ಟುಕೊಂಡು ಮುನ್ನಡೆಯುತ್ತಿವೆ. ಸಮಾಜಮುಖಿ ಬರವಣಿಗೆಗಳಿಂದ ಜನರ ಗಮನಸೆಳೆಯುತ್ತಿವೆ. ಸಮಾಜದ ನಾಲ್ಕನೇ ಅಂಗವಾಗಿ ಪತ್ರಿಕಾರಂಗ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ದೃಶ್ಯ ಮಾಧ್ಯಮಗಳ ಅಬ್ಬರ, ಸಾಮಾಜಿಕ ಜಾಲ ತಾಣಗಳ ಹಾವಳಿಗಳ ನಡುವೆಯೂ ಪತ್ರಿಕೆಗಳು ಇಂದಿಗೂ ಗಟ್ಟಿತನವನ್ನು ಉಳಿಸಿಕೊಂಡಿರುವುದು ಲೇಖನಿಗಿರುವ ಶಕ್ತಿಗೆ ಸಾಕ್ಷಿಯಾಗಿದೆ ಎಂದು ನಂಜಮ್ಮ ಮೋಟೇಗೌಡ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಕೆ.ಟಿ.ಹನುಮಂತು ಅಭಿಪ್ರಾಯಪಟ್ಟರು.

ನಗರದ ಸೇವಾಕಿರಣ ಸಭಾಂಗಣದಲ್ಲಿ ಭಾನುವಾರ ನಂಜಮ್ಮ ಮೋಟೇಗೌಡ ಚಾರಿಟಬಲ್‌ ಟ್ರಸ್ಟ್‌ನಿಂದ ರಾಷ್ಟ್ರೀಯ ಪತ್ರಿಕಾ ದಿನದ ಅಂಗವಾಗಿ ಆಯೋಜಿಸಿದ್ದ ಪತ್ರಕರ್ತ ಕೆ.ಶ್ರೀನಿವಾಸ್ ಅವರಿಗೆ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮೊಬೈಲ್ ಯುಗದಲ್ಲಿ ಪತ್ರಿಕೆಗಳನ್ನು ಓದುವವರ ಸಂಖ್ಯೆ ಕಡಿಮೆಯಾಗಿದ್ದರೂ ಪತ್ರಿಕೆಗಳು ಇನ್ನೂ ಓದುಗರನ್ನು ಹಿಡಿದಿಟ್ಟುಕೊಂಡು ಮುನ್ನಡೆಯುತ್ತಿವೆ. ಸಮಾಜಮುಖಿ ಬರವಣಿಗೆಗಳಿಂದ ಜನರ ಗಮನಸೆಳೆಯುತ್ತಿವೆ. ಸಮಾಜದ ನಾಲ್ಕನೇ ಅಂಗವಾಗಿ ಪತ್ರಿಕಾರಂಗ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದರು.

ಪ್ರಸ್ತುತ ಪತ್ರಿಕಾರಂಗ ಹಲವಾರು ಸವಾಲು ಎದುರಿಸುತ್ತಿದೆ. ಈ ಸವಾಲುಗಳ ನಡುವೆಯೂ ಪತ್ರಕರ್ತರು ತಮ್ಮ ಅಸ್ತಿತ್ವ ಕಾಪಾಡಿಕೊಂಡು ಪತ್ರಿಕಾರಂಗದ ಧ್ಯೇಯ ಎತ್ತಿ ಹಿಡಿಯುತ್ತಿದ್ದಾರೆ. ವಸ್ತುನಿಷ್ಠ ವರದಿ ಪ್ರಕಟಿಸುತ್ತಾ ಸಮಾಜಕ್ಕೆ ಮಾದರಿಯಾಗುತ್ತಿರುವುದು ಶ್ಲಾಘನೀಯ ಎಂದರು.

ಮುಂದಿನ ವರ್ಷದಿಂದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ ಪರಿಸರ ಪ್ರಶಸ್ತಿ ಸ್ಥಾಪಿಸಲಾಗುವುದು. ಪರಿಸರ ಸಂರಕ್ಷಣೆಯಲ್ಲಿ ತೊಡಗಿರುವವರನ್ನು ಸನ್ಮಾನಿಸಿ ಗೌರವಿಸಲು ನಿರ್ಧರಿಸಿರುವುದಾಗಿಯೂ ಇದೇ ಸಂದರ್ಭದಲ್ಲಿ ತಿಳಿಸಿದರು.

ಅಭಿನಂದನಾ ನುಡಿಗಳನ್ನಾಡಿದ ಹಿರಿಯ ಪತ್ರಕರ್ತ ಡಿ.ಎನ್‌.ಶ್ರೀಪಾದು, ಕೆ.ಶ್ರೀನಿವಾಸ್‌ ಜೀವನದಲ್ಲಿ ಕಷ್ಟಪಟ್ಟು ಪತ್ರಿಕಾರಂಗದಲ್ಲಿ ಬೆಳೆದುಬಂದಿದ್ದಾರೆ. ಪ್ರಾಮಾಣಿಕತೆ, ಸಮಯಪ್ರಜ್ಞೆ, ಕರ್ತವ್ಯಪರತೆಯಿಂದ ಇಂದಿಗೂ ಕಾರ್ಯನಿರ್ವಹಿಸುತ್ತಾ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಯಾರನ್ನೂ ದ್ವೇಷಿಸದೆ ಎಲ್ಲರ ಜೊತೆಗೂಡಿಕೊಂಡು ಸಾಗುವ ಅವರ ಸ್ನೇಹಪರ ವ್ಯಕ್ತಿತ್ವ ಇತರರಿಗೆ ಮಾದರಿಯಾಗಬೇಕು ಎಂದರು.

ಪತ್ರಿಕೆಗಳನ್ನು ಅಚ್ಚು ಹಾಕುತ್ತಿದ್ದ ಕಾಲದಿಂದ ಬೆಳೆದುಬಂದಿರುವ ಶ್ರೀನಿವಾಸ್‌, ಬದಲಾದ ಕಾಲಕ್ಕೆ ಹೊಂದಿಕೊಂಡು ಬೆಳೆದುಬಂದವರು. ಪೌರವಾಣಿ ಪತ್ರಿಕೆಯಿಂದ ಆರಂಭವಾದ ಅವರ ಕರ್ತವ್ಯನಿಷ್ಠ ಈಗ ಹೊಸದಿಗಂತದವರೆಗೆ ಬೆಳೆದುಬಂದಿದೆ. ಎಲ್ಲ ಕೆಲಸಗಳನ್ನೂ ಮಾಡುವುದಕ್ಕೆ ತೋರುವ ಉತ್ಸಾಹ, ಯಶಸ್ಸಿಗೆ ಪಡುವ ಶ್ರಮ ಇವೆಲ್ಲವೂ ಅವರನ್ನು ಬೆಳವಣಿಗೆಗೆ ಕಾರಣವಾಗಿವೆ ಎಂದರು.

ಮಂಡ್ಯ ಅನೇಕ ರಂಗಗಳಲ್ಲಿ ಮೊದಲ ಸ್ಥಾನದಲ್ಲಿ ನಿಂತಿದೆ. ಆದರೆ, ಜಿಲ್ಲೆಯ ಮಹತ್ವ, ಗಳಿಸಿರುವ ಹೆಗ್ಗಳಿಕೆ, ಹಲವು ದಾಖಲೆಗಳು ಸ್ಥಳೀಯರಿಗೇ ಗೊತ್ತಿಲ್ಲ. ಇಂದಿನವರಿಗೆ ಜಿಲ್ಲೆಯ ಇತಿಹಾಸ, ವಿಶೇಷತೆಗಳನ್ನು ಪುಸ್ತಕಗಳನ್ನು ಓದಿ ತಿಳಿದುಕೊಳ್ಳುವ ಅಥವಾ ತಿಳಿದವರಿಂದಲಾದರೂ ಕೇಳಿ ತಿಳಿಯಬೇಕೆಂಬ ಆಸಕ್ತಿ ಇಲ್ಲ. ಇಂದಿನ ಯುವಕರು ಪುಸ್ತಕಗಳು, ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಇತಿಹಾಸವನ್ನು ತಿಳಿಯದವರು ಎಂದಿಗೂ ಇತಿಹಾಸವನ್ನು ನಿರ್ಮಿಸಲಾರರು. ಅದಕ್ಕಾಗಿ ದೇಶ, ರಾಜ್ಯ ಮತ್ತು ಜಿಲ್ಲೆಯ ಇತಿಹಾಸವನ್ನು ತಿಳಿಯುವ ಆಸಕ್ತಿ ಬೆಳೆಸಿಕೊಳ್ಳಬೇಕು. ಮಕ್ಕಳಿಗೂ ಅದನ್ನು ಮನದಟ್ಟು ಮಾಡಿಕೊಡುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಕೆ.ಶ್ರೀನಿವಾಸ್‌ ಅವರಿಗೆ ನಂಜಮ್ಮ ಮೋಟೇಗೌಡ ಪತ್ರಿಕೋದ್ಯಮ ಪ್ರಶಸ್ತಿಯನ್ನು ಅಭಿನಂದನಾ ಪತ್ರ ಹಾಗೂ 5 ಸಾವಿರ ನಗದು ಜೊತೆ ಪ್ರದಾನ ಮಾಡಲಾಯಿತು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಕೆ.ಎನ್‌.ರಾಘವೇಂದ್ರ ಅವರನ್ನೂ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ವಿ.ನಾಗರಾಜು, ಸೌತ್‌ ಮಲ್ಟಿಪಲ್‌ ಅಲೈಯನ್ಸ್‌ನ ಒಂದನೇ ಜಿಲ್ಲಾ ರಾಜ್ಯಪಾಲ ಕೆ.ಆರ್‌.ಶಶಿಧರ ಈಚಗೆರೆ, ಎರಡನೇ ಜಿಲ್ಲಾ ಉಪರಾಜ್ಯಪಾಲ ಕೆ.ಎಸ್‌.ಚಂದ್ರಶೇಖರ್‌, ಪತ್ರಕರ್ತ ಕೆ.ಎನ್‌.ಮಂಜುನಾಥ, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿಯ ಪ್ರತಿಭಾಂಜಲಿ ಡೇವಿಡ್‌ ಹಾಜರಿದ್ದರು.

PREV

Recommended Stories

ಗಿಡ ನೆಟ್ಟು ಸಾಲು ಮರದ ತಿಮ್ಮಕ್ಕನಿಗೆ ಶ್ರದ್ಧಾಂಜಲಿ
ವೀರ ಬಲ್ಲಾಳರಾಯನ ಕೆರೆಯಲ್ಲಿ ತೆಪ್ಪೋತ್ಸವ