ಪತ್ರಕರ್ತರ ಸಮ್ಮಿಲನ-ಪತ್ರಿಕಾ ದಿನಾಚರಣೆ
ಕನ್ನಡಪ್ರಭ ವಾರ್ತೆ, ಬೀರೂರುಹಲವು ಏಳು ಬೀಳುಗಳ ನಡುವೆ ಪತ್ರಿಕೆಗಳು ಸಮಾಜದ ದನಿ ಹಾಗೂ ಕಣ್ಗಾವಲಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಕಡೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಗುರುಭವನದಲ್ಲಿ ಬುಧವಾರ ನಡೆದ ಪತ್ರಕರ್ತರ ಸಮ್ಮಿಲನ ಮತ್ತು ಪತ್ರಿಕಾ ದಿನಾಚರಣೆಯಲ್ಲಿ ಡಿ.ವಿ.ಗುಂಡಪ್ಪನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಸ್ವಾತಂತ್ರ‍್ಯ ಹೋರಾಟದ ಸಂದರ್ಭದಲ್ಲಿ ಜನ ಜಾಗೃತಿಗೆ ಮಹಾತ್ಮಗಾಂಧಿ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಪತ್ರಿಕೆಗಳನ್ನು ಹುಟ್ಟುಹಾಕಿ ಪತ್ರಕರ್ತರಾಗಿಯೂ ಕೆಲಸ ಮಾಡಿದರು ಎಂದರು.ಸತ್ಯಶೋಧನೆ ಕರ್ತವ್ಯದಿಂದ ಸಮಾಜವನ್ನು ಎಚ್ಚರಿಸುವ ಮೂಲಕ ವೃತ್ತಿಗೆ ನ್ಯಾಯ ಒದಗಿಸುವ ಪತ್ರಿಕೆಗಳು ಮತ್ತು ಪತ್ರಕರ್ತರ ವರದಿಗಳಿಂದ ಸರ್ಕಾರಗಳು ಹಲವಾರು ಬಾರಿ ತಮ್ಮ ಆದೇಶಗಳನ್ನೇ ಮಾರ್ಪಾಡಗಿವೆ. ಜನರು ದೃಶ್ಯ ಮಾಧ್ಯಮಗಳನ್ನು ಎಷ್ಟೇ ನೋಡಿದರೂ ಸತ್ಯ ಅರಿಯಲು ಪತ್ರಿಕೆಗಳನ್ನೇ ಅವಲಂಭಿಸಿದ್ದಾರೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಕರ್ತರಿಗೆ ವೃತ್ತಿ ಬದ್ಧತೆ ಇರಬೇಕು, ಸಮಾಜದಲ್ಲಿ ಬದಲಾವಣೆಗೆ ಪತ್ರಿಕೆಗಳು ಅವಿರತವಾಗಿ ಶ್ರಮಿಸುತ್ತಿವೆ. ಪೈಪೋಟಿ ಹಾಗೂ ಹಲವಾರು ಸವಾಲುಗಳ ನಡುವೆ ನೈಜ ಸುದ್ದಿ ಹೆಕ್ಕಬೇಕಾದ ಸನ್ನಿವೇಶ ಇಂದು ಇದೆ ಎಂದು ಹೇಳಿದರು.ಜನರಿಗೆ ಪತ್ರಿಕೆಗಳ ಬಗ್ಗೆ ವಿಶ್ವಾಸವಿದ್ದು ಅದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾವೆಲ್ಲಾ ಶ್ರಮಿಸೋಣ. ರಾಜ್ಯ ಸರ್ಕಾರ ಗ್ರಾಮೀಣ ಪತ್ರಕರ್ತರಿಗೆ ಬಸ್‌ಪಾಸ್ ಮತ್ತು ವೈದ್ಯ ಸಂಜೀವಿನಿ ಆರೋಗ್ಯ ಸೌಲಭ್ಯ ಕಲ್ಪಿಸಿದ್ದು ಮುಖ್ಯಮಂತ್ರಿ ಮತ್ತು ಅವರ ಮಾಧ್ಯಮ ಸಲಹೆಗಾರರನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದರು.
ಸಾಧಕರಿಗೆ ಸನ್ಮಾನ ನೆರವೇರಿಸಿ ಮಾತನಾಡಿದ ಕಡೂರು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಕಾವಲುಗಾರನಾಗಿ ಪತ್ರಿಕೆಗಳು ಕೆಲಸ ನಿರ್ವಹಿಸುತ್ತಿವೆ. ಸತ್ಯ ಎತ್ತಿ ಹಿಡಿದು ಸಮಾಜ ಹಾಗೂ ಜನರನ್ನು ಎಚ್ಚರಿಸುವ ಜವಾಬ್ದಾರಿ ಪತ್ರಕರ್ತರದ್ದಾಗಿದೆ. ಮಾಧ್ಯಮಗಳಿಂದಾಗಿ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳು ಎಚ್ಚರಿಕೆ ನಡೆ ಅನುಸರಿಸುತ್ತವೆ. ಪತ್ರಕರ್ತರು ಸಂಘಟಿತರಾಗಿ ಕೆಲಸ ಮಾಡಿ, ಕಡೂರಿನಲ್ಲಿ ಎಲ್ಲರ ಸಹಕಾರದಿಂದ ಪತ್ರಿಕಾಭವನ ನಿರ್ಮಾಣ ಮಾಡೋಣ ಎಂದು ಸಲಹೆ ನೀಡಿದರು.ಕೆಯುಡಬ್ಲ್ಯುಜೆ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಬಿ. ಮದನ್‌ಗೌಡ ಮಾತನಾಡಿ, ಡಿಜಿಟಲ್ ಯುಗದಲ್ಲಿ ಸುದ್ದಿಗಳು ವೇಗವಾಗಿ ಹರಡುತ್ತವೆ, ಆದರೆ, ಅದರಲ್ಲಿ ಸತ್ಯಾಸತ್ಯತೆ ಕೊರತೆ ಕಾಣುತ್ತಿದೆ. ಎಲ್ಲ ಅಡೆತಡೆಗಳ ನಡುವೆಯೂ ಮುದ್ರಣ ಮಾಧ್ಯಮ ಜೀವಂತಿಕೆ ಉಳಿಸಿಕೊಂಡಿದೆ. ಬದಲಾವಣೆ ಕಾಲಘಟ್ಟದಲ್ಲಿ ಪತ್ರಿಕೋದ್ಯಮದಲ್ಲೂ ವಿಫುಲ ಅವಕಾಶವಿದ್ದು ಯುವ ಜನರು ಪತ್ರಿಕೋದ್ಯಮಕ್ಕೆ ಬರಬೇಕು ಎಂದು ಕರೆ ನೀಡಿದರು.
ಕೆಯುಡಬ್ಲ್ಯುಜೆ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಸಾಧಕರ ಪರವಾಗಿ ಹಿರಿಯ ವಕೀಲ ಎಂ.ಎಸ್.ಹೆಳವರ್, ಕಡೂರು ತಹಶೀಲ್ದಾರ್ ಸಿ.ಎಸ್.ಪೂರ್ಣಿಮಾ, ಬೀರೂರು ಪುರಸಭೆ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಮೋಹನ್, ಮಾಜಿ ಅಧ್ಯಕ್ಷೆ ವನಿತಾ ಮಧು ಬಾವಿಮನೆ, ಸವಿತಾ ರಮೇಶ್, ಡಾ.ಗವಿರಂಗಪ್ಪ, ಕನ್ನಡ ಸಂಘದ ಅಧ್ಯಕ್ಷ ಎಚ್.ಸಿ.ವಿಶ್ವನಾಥಗೌಡ ಮಾತನಾಡಿದರು. ತಾಲ್ಲೂಕು ಸಂಘದ ಅಧ್ಯಕ್ಷ ಎನ್.ಗಿರೀಶ್ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿ ಎಚ್.ಆರ್.ದೇವರಾಜ್, ಹಾಸನ ಹಾಲು ಒಕ್ಕೂಟದ ನಿರ್ದೇಶಕ ಬಿದರೆ ಜಗದೀಶ್, ಪುರಸಭೆ ಸದಸ್ಯರಾದ ಜ್ಯೋತಿ ಸಂತೋಷ್, ಗಂಗಾಧರ್, ಮಾನಿಕ್ ಬಾಷಾ, ಶಶಿಧರ್, ಕಡೂರು ಸರ್ಕಲ್ ಇನ್‌ಸ್ಪೆಕ್ಟರ್ ಎಂ.ರಫೀಕ್, ಬೀರೂರು ಪಿಎಸ್‌ಐ ಡಿ.ವಿ.ತಿಪ್ಪೇಶ್, ಲೋಕೇಶ್ವರ್, ಖಂಡುಗದಹಳ್ಳಿ ಸೋಮೇಶ್ವರ ದೇವಾಲಯದ ಕನ್ವೀನರ್ ಕೆ.ಬಿ.ಸೋಮೇಶ್, ಶಿಕ್ಷಕರ ಸಂಘದ ಜಗದೀಶ್, ಕುಂದೂರು ಹರೀಶ್, ಹಿರೇನಲ್ಲೂರು ಶ್ರೀನಿವಾಸ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನೆನಪಿನ ಸಂಚಿಕೆ ಬಿಡುಗಡೆ ಮಾಡಲಾಯಿತು. 6 ಕೆಸಿಕೆಎಂ 2ಕಡೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಬೀರೂರಿನ ಗುರುಭವನದಲ್ಲಿ ಬುಧವಾರ ನಡೆದ ಪತ್ರಕರ್ತರ ಸಮ್ಮಿಲನ ಮತ್ತು ಪತ್ರಿಕಾ ದಿನಾಚರಣೆಯನ್ನು ಶಿವಾನಂದ ತಗಡೂರು ಉದ್ಘಾಟಿಸಿದರು.