ಪ್ರಚಲಿತ ವಿದ್ಯಮಾನಗಳ ಜ್ಞಾನ ನೀಡುವ ವೃತ್ತ ಪತ್ರಿಕೆಗಳು

KannadaprabhaNewsNetwork |  
Published : Jul 19, 2024, 12:49 AM IST
ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಸವಣೂರು ತಾಲೂಕು ಮಟ್ಟದ ಭಾಷಣ ಹಾಗೂ ಪ್ರಬಂಧ ಸ್ಪರ್ಧೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಫ್. ಬಾರ್ಕಿ ಉದ್ಘಾಟಿಸಿದರು. | Kannada Prabha

ಸಾರಾಂಶ

ವೃತ್ತಪತ್ರಿಕೆಗಳು ಪ್ರಚಲಿತ ವಿದ್ಯಮಾನಗಳ ವಿಮರ್ಶಾತ್ಮಕ, ತಾರ್ಕಿಕ ಜ್ಞಾನ ನೀಡುತ್ತವೆ. ವಿದ್ಯಾರ್ಥಿ ಪತ್ರಿಕೆಗಳನ್ನು ಓದುವ ಹವ್ಯಾಸಗಳನ್ನು ಇಟ್ಟುಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಫ್. ಬಾರ್ಕಿ ಹೇಳಿದ್ದಾರೆ.

ಸವಣೂರು: ಪತ್ರಿಕಾ ದಿನಾಚರಣೆ ಅಂಗವಾಗಿ ಪಟ್ಟಣದ ಶ್ರೀ ಗುರು ರಾಚೋಟೇಶ್ವರ ಪ್ರೌಢಶಾಲೆಯಲ್ಲಿ ಗುರುವಾರ ಸಮಾಜದಲ್ಲಿ ವೃತ್ತ ಪತ್ರಿಕೆಗಳ ಮಹತ್ವ ಹಾಗೂ ಪರಿಣಾಮ ವಿಷಯ ಕುರಿತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಭಾಷಣ ಹಾಗೂ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಫ್. ಬಾರ್ಕಿ, ವೃತ್ತಪತ್ರಿಕೆಗಳು ಪ್ರಚಲಿತ ವಿದ್ಯಮಾನಗಳ ವಿಮರ್ಶಾತ್ಮಕ, ತಾರ್ಕಿಕ ಜ್ಞಾನ ನೀಡುತ್ತವೆ. ವಿದ್ಯಾರ್ಥಿ ಪತ್ರಿಕೆಗಳನ್ನು ಓದುವ ಹವ್ಯಾಸಗಳನ್ನು ಇಟ್ಟುಕೊಳ್ಳಬೇಕು. ಉತ್ತಮ ಬದುಕು ಕಟ್ಟಿಕೊಳ್ಳಲು ಪತ್ರಿಕೆ ಅವಶ್ಯವಾಗಿರುತ್ತದೆ. ಪತ್ರಿಕೆಗಳು ಸಾಮಾಜಿಕ ಬದುಕಿನಲ್ಲಿ ತುಂಬಾ ಅವಶ್ಯಕ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಇವುಗಳ ಅಂಕು-ಡೊಂಕುಗಳನ್ನು ತಿದ್ದಿ-ತಿಡಿ ಒಂದು ಉತ್ತಮ ಸರ್ಕಾರವನ್ನು ನೀಡಲು ಪತ್ರಿಕಾ ಅಂಗ ಅವಶ್ಯಕವಾಗಿದೆ ಎಂದು ಹೇಳಿದರು.

ಶ್ರೀ ಗುರು ರಾಚೋಟೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಕೆ.ಎಸ್ .ಗಾಣಿಗೇರ್ ಮಾತನಾಡಿ, ವೃತ್ತ ಪತ್ರಿಕೆಗಳು ಸಮಾಜದಲ್ಲಿ ನಡೆಯುವ ದುರಾಡಳಿತ, ಜ್ವಲಂತ ಸಮಸ್ಯೆಗಳು, ಸಮಾಜದ ಏಳು-ಬೀಳಿನ ಕೊಂಡಿಯಾಗಿ, ಸಮಾಜದ ಪರವಾಗಿ ನ್ಯಾಯಯುತವಾಗಿ ಕೆಲಸ ಮಾಡುತ್ತದೆ. ಪತ್ರಿಕೆಗಳು ಪ್ರಚಲಿತ ವಿದ್ಯಮಾನಕ್ಕೆ ಸಾಕ್ಷಿಯಾಗಿ ಕಾರ್ಯನಿರ್ವಹಿಸುತ್ತದೆ. ಜನರಿಗೆ ತಲುಪಿಸಬೇಕಾದ ಮಾಹಿತಿಯನ್ನು ಸಂಗ್ರಹಿಸಿ ಸರಳವಾದ ಭಾಷೆಯಲ್ಲಿ ತಲುಪಿಸುತ್ತದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಆನಂದ್ ಮತ್ತಿಕಟ್ಟಿ ಮಾತನಾಡಿ, ವೃತ್ತ ಪತ್ರಿಕೆಗಳ ಅವಶ್ಯಕತೆ ಹಾಗೂ ಪ್ರಚಲಿತ ಘಟನೆಗಳ ಅವಶ್ಯಕತೆ ಶಾಲಾ ಮಕ್ಕಳ ಹಂತದಲ್ಲಿ ಯಾವ ರೀತಿಯ ಸದ್ಬಳಕೆ ಮಾಡಿಕೊಳ್ಳಬೇಕು ಎಂಬುದರ ಕುರಿತು ಮಾಹಿತಿ ನೀಡಿದರು.

ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಹಾಗೂ ಕೆಪಿಎಸ್ ಶಾಲೆಯ ಉಪ ಪ್ರಾಂಶುಪಾಲ ಮಲ್ಲಿಕಾರ್ಜುನ್ ಬಿ. ಶಾಂತಿಗಿರಿ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ವೃತ್ತಪತ್ರಿಕೆಗಳು ದಾಖಲೀಕರಣಕ್ಕೆ ಸಹಕಾರಿಯಾಗಿವೆ. ಡಿಜಿಟಲ್ ಮಾಧ್ಯಮಗಳು ಯಾವಾಗಾದರೂ ಅಳಿಸಿ ಹೋಗಬಹುದು. ವೃತ್ತ ಪತ್ರಿಕೆಗಳು ಪುರಾವೆ ಇಟ್ಟುಕೊಳ್ಳಲು ಅವಶ್ಯವಾಗಿರುವಂತಹ ಸಾಧನವಾಗಿದೆ ಎಂದು ಹೇಳಿದರು.

ತಾಲೂಕು ಮಟ್ಟದ ಭಾಷಣ ಸ್ಪರ್ಧೆಯಲ್ಲಿ 18 ವಿದ್ಯಾರ್ಥಿಗಳು ಹಾಗೂ ಪ್ರಬಂಧ ಬರವಣಿಗೆಯಲ್ಲಿ 27 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪತ್ರಕರ್ತರಾದ ನಿಂಗನಗೌಡ ದೊಡ್ಡಗೌಡ್ರು, ಪವನಕುಮಾರ ಎಸ್. ಲಮಾಣಿ ಹಾಗೂ ಬಿಆರ್‌ಸಿ ಡಿ.ಎಚ್. ತೋಟಗೆರ ಅವರು ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.

ಶ್ರೀ ಗುರು ರಾಜೇಶ್ವರ ಶಾಲೆಯ ಶಿಕ್ಷಕರಾದ ಶ್ರೀನಿವಾಸ ನಾಯಕ, ಆರ್.ಡಿ. ನದಾಫ್, ಡಿ.ಎಚ್. ಗೋನಿಯರ್, ಎನ್.ಎನ್. ಬಸನಾಳ, ಡಿ.ಎಸ್. ಬಳಿಕಾಯಿ, ಪತ್ರಕರ್ತರಾದ ಗಣೇಶಗೌಡ ಪಾಟೀಲ, ಶಂಕರಯ್ಯ ಹಿರೇಮಠ, ರಾಜಶೇಖರಯ್ಯ ಗುರುಸ್ವಾಮಿಮಠ, ತಾಲೂಕಿನ ಪ್ರೌಢಶಾಲೆಯ ಶಿಕ್ಷಕ-ಶಿಕ್ಷಕಿಯರು ಉಪಸ್ಥಿತರಿದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌