ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ: ಎಂಎಲ್ಸಿ ರವಿಕುಮಾರ್ ಆರೋಪ

KannadaprabhaNewsNetwork | Published : Jul 19, 2024 12:49 AM

ಸಾರಾಂಶ

ಕೋಲಾರ ಜಿಲ್ಲೆಯಲ್ಲಿ ೨೦೦೦ ದಿಂದ ೨೦೧೯ ರವರೆಗಿನ ೧೯ ವರ್ಷಗಳ ಅವಧಿಯಲ್ಲಿ ೪೧ ಸಿಎಲ್-೨, ಸಿಎಲ್- ಮದ್ಯದ ಮಳಿಗೆಗಳಿಗೆ ಅನುಮತಿ ನೀಡಲಾಗಿತ್ತು. ಆದರೆ ೨೦೨೧ ರಿಂದ ೨೦೨೩ ರವರೆಗಿನ ಮೂರು ವರ್ಷಗಳ ಅವಧಿಗೆ ಸುಮಾರು ೬೪ ಮಳಿಗೆಗಳಿಗೆ ಅನುಮತಿ ನೀಡಲಾಗಿದೆ. ಪರೋಕ್ಷವಾಗಿ ಸರಕಾರದ ಸದುದ್ದೇಶ ಹಾಳು ಮಾಡಲು ಹೊರಟಿದೆ.

ಕನ್ನಡಪ್ರಭ ವಾರ್ತೆ ಕೋಲಾರ

ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯಿಂದ ಸಿಎಲ್-೭ ಮಳಿಗೆಯ ಅನುಮತಿ ಪಡೆಯಲು ಕನಿಷ್ಠ ೮೦ ರಿಂದ ೮೫ ಲಕ್ಷ ರು.ಗಳ ಪ್ಯಾಕೇಜ್ ನೀಡಬೇಕಾಗಿದೆ ಎಂದು ವಿಧಾನ ಪರಿಷತ್ ನಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಸದಸ್ಯ ಎಂ.ಎಲ್. ಅನಿಲ್ ಕುಮಾರ್ ಅಬಕಾರಿ ಇಲಾಖೆಯ ವಿರುದ್ದ ಗಂಭೀರ ಆರೋಪ ಮಾಡಿದರು.

ಗುರುವಾರ ವಿಧಾನ ಪರಿಷತ್ ಅಧಿವೇಶನದ ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿದ ಅವರು, ಕೋಲಾರ ಜಿಲ್ಲೆಯಲ್ಲಿ ೨೦೦೦ ದಿಂದ ೨೦೧೯ ರವರೆಗಿನ ೧೯ ವರ್ಷಗಳ ಅವಧಿಯಲ್ಲಿ ೪೧ ಸಿಎಲ್-೨, ಸಿಎಲ್- ಮದ್ಯದ ಮಳಿಗೆಗಳಿಗೆ ಅನುಮತಿ ನೀಡಲಾಗಿತ್ತು. ಆದರೆ ೨೦೨೧ ರಿಂದ ೨೦೨೩ ರವರೆಗಿನ ಮೂರು ವರ್ಷಗಳ ಅವಧಿಗೆ ಸುಮಾರು ೬೪ ಮಳಿಗೆಗಳಿಗೆ ಅನುಮತಿ ನೀಡಲಾಗಿದೆ. ಪರೋಕ್ಷವಾಗಿ ಸರಕಾರದ ಸದುದ್ದೇಶ ಹಾಳು ಮಾಡಲು ಹೊರಟಿದೆ ಎಂದು ಆರೋಪಿಸಿದರು.

ಅಬಕಾರಿ ಇಲಾಖೆಯಿಂದ ಯಾವುದೇ ಷರತ್ತುಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡುತ್ತಿಲ್ಲ, ಒಂದು ಮಳಿಗೆ ಪ್ರಾರಂಭಿಸಲು ನಗರ ಪ್ರದೇಶದಲ್ಲಿ ೫.೭೫ ಲಕ್ಷ ರು. ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ೪.೬೦ ಲಕ್ಷ ರು.ಗಳನ್ನು ಸರಕಾರವೇ ನಿಗದಿಪಡಿಸಿದೆ. ಆದರೆ ರಾಜಾರೋಷವಾಗಿ ಪ್ಯಾಕೇಜ್ ರೂಪದಲ್ಲಿ ೮೦ ರಿಂದ ೮೫ ಲಕ್ಷ ರು.ಗಳನ್ನು ಒಂದು ಮಳಿಗೆ ಪ್ರಾರಂಭಿಸಲು ವಸೂಲಿ ಮಾಡುತ್ತಾರೆ. ಜೊತೆಗೆ ನವೀಕರಣಕ್ಕೆ ಪ್ರತ್ಯೇಕವಾಗಿ ಒಂದು ಲಕ್ಷ ರು. ಕೊಡಬೇಕಾಗಿದೆ. ಇದರೊಂದಿಗೆ ಪ್ರತಿ ತಾಲೂಕಿನಲ್ಲೂ ತಿಂಗಳ ಮಾಮೂಲಿಯನ್ನು ಕೊಡಬೇಕಾಗಿದೆ, ಕೋಲಾರದಲ್ಲಿ ೧೫ ಸಾವಿರ ರು., ಶ್ರೀನಿವಾಸಪುರ ೧೮ ಸಾವಿರ ರು., ಮುಳಬಾಗಿಲು ೨೨ ಸಾವಿರ ರು., ಮಾಲೂರು ೨೮ ಸಾವಿರ ರು., ಬಂಗಾರಪೇಟೆ ಮತ್ತು ಕೆಜಿಎಫ್ ತಾಲೂಕಿನಲ್ಲಿ ೩೦ ಸಾವಿರ ರು.ಗಳನ್ನು ಪ್ರತಿ ಮಳಿಗೆಯಿಂದ ನೀಡಬೇಕಾಗಿದೆ ಎಂದು ಆರೋಪಿಸಿದರು.

ಎಂಎಲ್‌ಸಿ ಅನಿಲ್ ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಅಬಕಾರಿ ಸಚಿವರು, ಸಿಎಲ್ ೭ಗೆ ಅನುಮತಿ ಕೊಡಿಸಲು ಪ್ಯಾಕೇಜ್ ಮತ್ತು ತಾಲೂಕುವಾರು ತಿಂಗಳಿಗೆ ಮಾಮೂಲಿ ಫಿಕ್ಸ್ ಮಾಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ, ಅದಕ್ಕೆ ಉತ್ತರ ಕೊಡುವುದಕ್ಕೆ ಆಗುವುದಿಲ್ಲ. ಸಾಕ್ಷಿ ಕೊಟ್ಟರೆ ಸಂಬಂಧಪಟ್ಡ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.

ಸಚಿವರ ಹೇಳಿಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅನಿಲ್ ಕುಮಾರ್, ನಾನು ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಸದನದಲ್ಲಿ ಗಂಭೀರ ಆರೋಪ ಮಾಡುತ್ತಿದ್ದೇನೆ. ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ನಾನು ಮಾಡುತ್ತಿಲ್ಲ. ಸ್ಪಷ್ಟವಾಗಿ ಮಾಹಿತಿ ತೆಗೆದುಕೊಂಡು ಮಾತನಾಡುತ್ತಿದ್ದೇನೆ ಎಂದು ಹೇಳಿದರು.

ಕೋಲಾರ ಅಬಕಾರಿ ಇಲಾಖೆಯಲ್ಲಿನ ಎಫ್.ಡಿ.ಸಿಯಾಗಿರುವ ಗೋಪಿ ಅವರು ಸೇವೆಗೆ ಸೇರಿ ಸೇರ್ಪಡೆಯಾಗಿ ೧೪ ವರ್ಷಗಳಾಗಿವೆ. ಅದರಲ್ಲೂ ೧೨ ವರ್ಷಗಳಿಂದ ಕೋಲಾರದ ಜಿಲ್ಲಾ ಕೇಂದ್ರದಲ್ಲಿಯೇ ಇದ್ದಾರೆ. ಇವರು ಬಂಗಾರಪೇಟೆಯಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿತ್ತು. ಭ್ರಷ್ಟಾಚಾರಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? ಎಂದು ವಿಧಾನ ಪರಿಷತ್ ನಲ್ಲಿ ಅಬಕಾರಿ ಸಚಿವರ ಗಮನಕ್ಕೆ ತಂದಾಗ ಈ ಕೂಡಲೇ ಈ ಬಗ್ಗೆ ಗಮನ ಹರಿಸಿ ವರ್ಗಾವಣೆ ಮಾಡುವುದಾಗಿ ಹೇಳಿದರು.

Share this article