ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜ್ಞಾನವ್ಯಾಪಿ ಮಸೀದಿ ವಿಷಯದಲ್ಲಿ ನ್ಯಾಯಾಲಯ ನೀಡಿದ ಆದೇಶವನ್ನು ನಿಂದನೆ ಮಾಡುವ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವ ಚಾಂದ್ ಪಾಷಾ ಎಂಬಾತನನ್ನು ಬಂಧಿಸಿ, ಆತನ ವಿರುದ್ಧ ಎನ್‌ಐಎ ತನಿಖೆ ನಡೆಸಬೇಕು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಒತ್ತಾಯಿಸಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನದಲ್ಲಿ ನಂಬಿಕೆ ಇಲ್ಲದವರು ಇಂತಹ ಕೃತ್ಯವನ್ನು ಎಸಗುತ್ತಾರೆ. ದೇಶವನ್ನು ಅಸ್ಥಿರಗೊಳಿಸುವ ಇಂತಹ ವ್ಯಕ್ತಿ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುವ ವಿಶ್ವಾಸವಿಲ್ಲ. ಈ ಹಿನ್ನೆಲೆಯಲ್ಲಿ ಎನ್‌ಐಎ ತನಿಖೆಯೇ ಸೂಕ್ತ ಎಂದರು.
ಈತನ ವಿರುದ್ಧ ಸ್ಥಳೀಯ ವಕೀಲರು ದೂರು ನೀಡಿದರೆ ಠಾಣೆಯ ಎಸ್‌ಐ ತನ್ವೀರ್ ಅಹಮ್ಮದ್ ಎಂಬಾತ ಬೇಜವಾಬ್ದಾರಿತನದಿಂದ ನಡೆದುಕೊಂಡಿದ್ದಾರೆ. ಪಾಷಾ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ದುರಂತವೆಂದರೆ, ದೂರು ಕೊಟ್ಟವರ ಮೇಲೆಯೇ ಬೆದರಿಕೆ ಹಾಕಲಾಗಿದೆ. ಪೊಲೀಸ್ ಅಧಿಕಾರಿಗಳು ಕಾಂಗ್ರೆಸ್ ಏಜೆಂಟ್‌ರಂತೆ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.ದೇಶದ್ರೋಹಿಗಳ ಬಗ್ಗೆ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರ ಪರೀಕ್ಷಾ ವೇಳಾಪಟ್ಟಿಯಲ್ಲಾದ ಸಮಯದ ಬದಲಾವಣೆಯನ್ನು ಏಕೆ ಎಂದು ಪ್ರಶ್ನಿಸಿದ ಚಕ್ರವರ್ತಿ ಸೂಲಿಬೆಲೆಯ ಮೇಲೆ ಪ್ರಕರಣ ದಾಖಲಿಸಿಕೊಳ್ಳುತ್ತದೆ. ಇದು ಕಾಂಗ್ರೆಸ್ಸಿನ ಮಾನಸಿಕತೆ ತೋರಿಸುತ್ತದೆ ಎಂದು ಹರಿಹಾಯ್ದರು.
ಕಾಂಗ್ರೆಸ್ ನಾಯಕರು ದೆಹಲಿಗೆ ಹೋಗಿ ನಮ್ಮ ಪಾಲನ್ನು ಕೊಡಿ ಎಂದು ಪ್ರತಿಭಟನೆ ಮಾಡಿದರು. ಅದೇನು ಇವರ ಅಪ್ಪನ ಮನೆಯ ಆಸ್ತಿಯೇ? ಕೇಂದ್ರದಲ್ಲಿ ಪಾಲನ್ನು ಕೇಳುವ ಕಾಂಗ್ರೆಸ್‌ನ ನಾಯಕರು ಕೇರಳದಲ್ಲಿ ಆನೆ ತುಳಿತಕ್ಕೆ ಒಳಗಾಗಿ ಸಾವು ಕಂಡ ಕುಟುಂಬಕ್ಕೆ ₹15 ಲಕ್ಷ ಪರಿಹಾರ ನೀಡುತ್ತಾರೆ. ಇದು ಕಾಂಗ್ರೆಸ್‌ನವರ ಸ್ವಂತ ಹಣವೇ ಅಥವಾ ಅರಣ್ಯ ಸಚಿವರು ತಮ್ಮ ಜೇಬಿನಿಂದ ನೀಡಿದರೆ ಎಂದು ಪ್ರಶ್ನಿಸಿದರು.ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದರು ಎಂಬ ಕಾರಣಕ್ಕೆ ಕೇರಳದ ಸಂತ್ರಸ್ಥನಿಗೆ ಪರಿಹಾರ ನೀಡಿದ್ದಾರೆ. ಇದು ರಾಜ್ಯದ ಜನರ ತೆರಿಗೆ ಹಣವಲ್ಲವೇ? ರಾಜ್ಯದಲ್ಲಿ ಆನೆ ತುಳಿತಕ್ಕೆ ಒಳಗಾದ ಕುಟುಂಬಕ್ಕೆ ₹7 ರಿಂದ ₹8 ಲಕ್ಷ ಪರಿಹಾರ ನೀಡಲಾಗುತ್ತದೆ. ಇದು ಕಾಂಗ್ರೆಸ್ ತಾರತಮ್ಯ ನೀತಿಯಾಗಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಮೋಹನ್ ರೆಡ್ಡಿ, ಸೂಡಾ ಮಾಜಿ ಅಧ್ಯಕ್ಷ ನಾಗರಾಜ್, ಹೊನ್ನಪ್ಪ ಉಪಸ್ಥಿತರಿದ್ದರು.- - - ಬಾಕ್ಸ್ ಶಾಲೆಗಳಲ್ಲಿ ಆಜಾನ್ ಕೂಗುತ್ತಾರೆಯೇ?ಕಾಂಗ್ರೆಸ್ ಸರ್ಕಾರದಿಂದ ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯ ಅಲ್ಲ ಎನ್ನುವುದಾದರೆ ಮುಂದಿನ ದಿನಗಳಲ್ಲಿ, ರಾಷ್ಟ್ರಗೀತೆಯೂ ಬೇಡ ಎನ್ನುತ್ತಾರೆ. ಹಾಗಾದರೆ, ಶಾಲೆಗಳಲ್ಲಿ ಆಜಾನ್ ಕೂಗುತ್ತಾರೆಯೇ ಎಂದು ಶಾಸಕ ಚನ್ನಬಸಪ್ಪ ಪ್ರಶ್ನಿಸಿದರು.
ಜ್ಞಾನ ದೇಗುಲವಿದು, ಕೈ ಮುಗಿದು ಒಳಗೆ ಬಾ ಎಂಬ ವಾಕ್ಯವನ್ನು ಬದಲಾಯಿಸಿರುವ ಮತ್ತು ನಾಡಗೀತೆ ಕಡ್ಡಾಯವಲ್ಲ ಎನ್ನುವ ಮೂಲಕ ರಾಜ್ಯ ಸರ್ಕಾರ ಕೇವಲ ಕುವೆಂಪು ಅವರಿಗಷ್ಟೇ ಅಲ್ಲ, ಇಡೀ ಕನ್ನಡಿಗರಿಗೆ ಅವಮಾನ ಮಾಡಿದೆ ಎಂದು ಕಿಡಿಕಾರಿದರು.- - - -21ಎಸ್‌ಎಂಜಿಕೆಪಿ06: ಎಸ್.ಎನ್.ಚನ್ನಬಸಪ್ಪ