ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರಿನ ಕೆಫೆಯೊಂದರಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಶಿವಮೊಗ್ಗ ಮಾಡ್ಯುಲ್‌ನ ಐಸಿಸ್ ಶಂಕಿತ ಉಗ್ರರ ಸಂಪರ್ಕ ಜಾಲ ಪತ್ತೆಗೆ ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಮಂಗಳವಾರ ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ದಾಳಿ ನಡೆಸಿ ಜಾಲಾಡಿದೆ.ಬೆಂಗಳೂರಿನ ಬನಶಂಕರಿ, ಕುಮಾರಸ್ವಾಮಿ ಲೇಔಟ್, ತೆಲಂಗಾಣ, ತಮಿಳುನಾಡು ಹಾಗೂ ಆಂಧ್ರಪ್ರದೇಶಗಳ 11 ಸ್ಥಳಗಳಲ್ಲಿ ಎನ್‌ಐಎ ಕಾರ್ಯಾಚರಣೆ ನಡೆಸಿದ್ದು, ಕೆಫೆ ಬಾಂಬ್ ಸ್ಫೋಟದಲ್ಲಿ 11 ಮಂದಿ ಪಾಲ್ಗೊಂಡಿರುವ ಬಗ್ಗೆ ಎನ್‌ಐಎ ಶಂಕೆ ವ್ಯಕ್ತಪಡಿಸಿದೆ. ದಾಳಿ ವೇಳೆ ಕೆಲವು ಡಿಜಿಟಲ್ ಪುರಾವೆಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎಂದು ಗೊತ್ತಾಗಿದೆ.
ಮಾ.1ರಂದು ಕುಂದಲಹಳ್ಳಿಯ ಐಟಿಪಿಎಲ್ ರಸ್ತೆಯ ಕೆಫೆಯಲ್ಲಿ ಬಾಂಬ್ ಸ್ಫೋಟವಾಗಿತ್ತು. ಈ ಕೃತ್ಯದಲ್ಲಿ ಶಿವಮೊಗ್ಗ ಐಸಿಎಸ್ ಮಾಡ್ಯುಲ್‌ನ ಶಂಕಿತ ಉಗ್ರರಾದ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಅಬ್ದುಲ್ ಮತೀನ್ ತಾಹ, ಮುಸಾಬೀರ್ ಹುಸೇನ್ ಹಾಗೂ ಮಾಝ ಮುನೀರ್ ಸೇರಿದಂತೆ ಐವರನ್ನು ಎನ್‌ಐಎ ಬಂಧಿಸಿತ್ತು. ಈ ಕೃತ್ಯದ ತನಿಖೆ ಮುಂದುವರೆಸಿದ ಎನ್‌ಐಎ ಅಧಿಕಾರಿಗಳು, ಕರ್ನಾಟಕ ಸೇರಿ ಮೂರು ರಾಜ್ಯಗಳಲ್ಲಿ ಶಂಕಿತ ಉಗ್ರರ ಸಂಪರ್ಕ ಜಾಲಾಡಿದೆ. ಈ ದಾಳಿಯಲ್ಲಿ 2012ರ ಬೆಂಗಳೂರು-ಹುಬ್ಬಳ್ಳಿಯಲ್ಲಿ ವಿಧ್ವಂಸಕ ಕೃತ್ಯದ ಸಂಚು ಪ್ರಕರಣದ ಎಲ್‌ಇಟಿ ಶಂಕಿತ ಉಗ್ರರಿಗೆ ಸೇರಿ ಸ್ಥಳಗಳು ಸೇರಿವೆ ಎಂದು ಎನ್‌ಐಎ ತಿಳಿಸಿದೆ.ಬನಶಂಕರಿ-ಕೆ.ಎಸ್.ಲೇಔಟ್‌ನಲ್ಲಿ ತಪಾಸಣೆ:
ಶಿವಮೊಗ್ಗ ಜಿಲ್ಲೆಯಲ್ಲಿ ಐಸಿಸ್ ಸಂಘಟನೆ ಕಟ್ಟುವ ಮುನ್ನ ಬೆಂಗಳೂರಿನಲ್ಲಿ ಐಸಿಸ್ ಮುಖಂಡರ ಜತೆ ಅಬ್ದುಲ್ ಮತೀನ್ ಹಾಗೂ ಮುಸಾಬೀರ್ ಸಂಪರ್ಕದಲ್ಲಿದ್ದರು. ಹೀಗಾಗಿ ಬನಶಂಕರಿ ಹಾಗೂ ಕುಮಾರಸ್ವಾಮಿ ಲೇಔಟ್ ವ್ಯಾಪ್ತಿಯಲ್ಲಿ ಈ ಎನ್‌ಐಎ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಈ ವೇಳೆ ಸಾಫ್ಟ್‌ವೇರ್ ಕಂಪನಿಯ ಉದ್ಯೋಗಿಯೊಬ್ಬನನ್ನು ಎನ್‌ಐಎ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.ತಮಿಳುನಾಡಿನಲ್ಲಿ ಮತೀನ್ ಸ್ನೇಹಿತರ ವಿಚಾರಣೆ
ತಮಿಳುನಾಡಿನ ಕೊಯಮತ್ತೂರಿನಲ್ಲಿ ಶಂಕಿತ ಉಗ್ರ ಮತೀನ್‌ನ ಸ್ನೇಹಿತರಾದ ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಎನ್‌ಐಎ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ ಎನ್ನಲಾಗಿದೆ. ಕೆಫೆ ಸ್ಫೋಟಕ್ಕೂ ಮುನ್ನ ಕೊಯಮತ್ತೂರಿನಲ್ಲಿ ಮತೀನ್ ಹಾಗೂ ಮುಸಾಬೀರ್ ಆಶ್ರಯ ಪಡೆಯಲು ಈ ಸ್ನೇಹಿತರು ನೆರವಾಗಿದ್ದರು ಎಂದು ತಿಳಿದು ಬಂದಿದೆ.ಬೆಂಗಳೂರಿನ ಕೆಫೆಯಲ್ಲಿ ಮಾ.1ರಂದು ಸಂಭವಿಸಿದ್ದ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಶಿವಮೊಗ್ಗದ ಮೂವರನ್ನು ಬಂಧಿಸಿದ್ದ ಎನ್‌ಐಎ, ಇದೀಗ ಈ ಶಂಕಿತ ಉಗ್ರರ ಜಾಲ ಪತ್ತೆಗೆ 4 ರಾಜ್ಯಗಳಲ್ಲಿ ಶೋಧ ಆರಂಭಿಸಿದೆ. ಜೊತೆಗೆ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬನನ್ನು ಕೂಡ ವಿಚಾರಣೆ ಮಾಡಿದೆ. ವಿದೇಶಿಗರ ಕೈವಾಡ?ಕೆಫೆ ಬಾಂಬ್ ಸ್ಫೋಟ ಕೃತ್ಯದಲ್ಲಿ ವಿದೇಶಿ ವ್ಯಕ್ತಿಗಳ ಕೈವಾಡವಿರುವ ಬಗ್ಗೆ ಎನ್ಐಎ ಶಂಕಿಸಿದೆ. ಈ ವಿಧ್ವಂಸಕ ಕೃತ್ಯದ ಸಂಚಿನಲ್ಲಿ ವಿದೇಶದಲ್ಲಿ ನೆಲೆಸಿರುವ ವ್ಯಕ್ತಿ ಪಾತ್ರ ವಹಿಸಿರುವ ಮಾಹಿತಿ ಇದೆ. ಈ ಬಗ್ಗೆ ತನಿಖೆ ನಡೆದಿದೆ ಎಂದು ಹೇಳಲಾಗಿದೆ.