ಎನ್‌ಐಸಿ ಸರ್ವರ್‌ ಸಮಸ್ಯೆ, ಮುದ್ರಣಗೊಳ್ಳದ ಬಸ್‌ ಪಾಸ್

KannadaprabhaNewsNetwork |  
Published : Jun 13, 2025, 07:33 AM ISTUpdated : Jun 13, 2025, 07:34 AM IST
ಪೋಟೊ10ಕೆಎಸಟಿ1: ಕುಷ್ಟಗಿ ಪಟ್ಟಣದ ಕರ್ನಾಟಕ ಒನ್‌ ಮುಂದೆ ಜಮಾಯಿಸಿರುವ ವಿದ್ಯಾರ್ಥಿಗಳು.  ಹಾಗೂ ತಪ್ಪಾಗಿ ಮುದ್ರಣಗೊಂಡ ಬಸ್‌ ಪಾಸ್. | Kannada Prabha

ಸಾರಾಂಶ

ಎನ್‌ಐಸಿ ಸರ್ವರ್‌ ಅಪ್‌ಗ್ರೇಡ್‌ ಆಗಿರುವ ಪರಿಣಾಮ ವಿದ್ಯಾರ್ಥಿಗಳ ಬಸ್‌ ಪಾಸ್‌ ಅರ್ಜಿಯನ್ನು ಸಾರಿಗೆ ನಿಗಮದ ಅಧಿಕಾರಿಗಳು ಅನುಮೋದನೆ ಕೊಟ್ಟರೂ ಸಹಿತ ಕರ್ನಾಟಕ ಒನ್‌ನಲ್ಲಿ ಬಸ್‌ ಪಾಸ್‌ ಮುದ್ರಣಗೊಳ್ಳದಿರುವುದು ಸಮಸ್ಯೆಯಾಗಿದೆ.

ಪರಶಿವಮೂರ್ತಿ ದೋಟಿಹಾಳ

ಕುಷ್ಟಗಿ:

ಸರ್ವರ್‌ ಸಮಸ್ಯೆಯಿಂದ ವಿದ್ಯಾರ್ಥಿಗಳಿಗೆ ಬಸ್‌ಪಾಸ್‌ ಸಕಾಲಕ್ಕೆ ಸಿಗದೆ ಪರದಾಡುತ್ತಿದ್ದು ಶಾಲಾ-ಕಾಲೇಜುಗಳಿಂದ ವಂಚಿತರಾಗುತ್ತಿದ್ದಾರೆ. ಶಾಲಾ-ಕಾಲೇಜುಗಳು ಆರಂಭವಾಗಿ 10 ದಿನಗಳು ಕಳೆದರೂ ಸಹಿತ ವಿದ್ಯಾರ್ಥಿಗಳ ಕೈಗೆ ಬಸ್‌ಪಾಸ್‌ ದೊರಕದ ಪರಿಣಾಮ ಕೆಲವರು ಬಸ್ಸಿಗೆ ಹಣ ನೀಡಿ ತರಗತಿಗೆ ಹಾಜರಾಗುತ್ತಿದ್ದು, ಬಡ ಮಕ್ಕಳ ಜೇಬಿಗೆ ಕತ್ತರಿ ಬೀಳುತ್ತಿದೆ.

ಏನಿದು ಸಮಸ್ಯೆ:

ಎನ್‌ಐಸಿ ಸರ್ವರ್‌ ಅಪ್‌ಗ್ರೇಡ್‌ ಆಗಿರುವ ಪರಿಣಾಮ ವಿದ್ಯಾರ್ಥಿಗಳ ಬಸ್‌ ಪಾಸ್‌ ಅರ್ಜಿಯನ್ನು ಸಾರಿಗೆ ನಿಗಮದ ಅಧಿಕಾರಿಗಳು ಅನುಮೋದನೆ ಕೊಟ್ಟರೂ ಸಹಿತ ಕರ್ನಾಟಕ ಒನ್‌ನಲ್ಲಿ ಬಸ್‌ ಪಾಸ್‌ ಮುದ್ರಣಗೊಳ್ಳದಿರುವುದು ಸಮಸ್ಯೆಯಾಗಿದೆ. ಪಿಯುಸಿ ಹಾಗೂ ಕೆಲ ಕೋರ್ಸ್‌ಗಳ ವಿದ್ಯಾರ್ಥಿಗಳ ಬಸ್‌ ಪಾಸ್‌ಗಳಲ್ಲಿ ಎಲ್ಲಿಂದ ಎಲ್ಲಿಗೆ ಎನ್ನುವ ಮಾರ್ಗ ಮತ್ತು ಊರುಗಳ ಹೆಸರು ಸಂಪೂರ್ಣವಾಗಿ ಮುದ್ರಣಗೊಳ್ಳದೆ ವಿದ್ಯಾರ್ಥಿಗಳು ಅಲೆದಾಡುವಂತಾಗಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಿ ಬಸ್‌ ಪಾಸ್‌ನ್ನು ಶೀಘ್ರದಲ್ಲಿ ವಿತರಿಸುವ ವ್ಯವಸ್ಥೆ ಮಾಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಒಂದು ವಾರದಿಂದ ವಿದ್ಯಾರ್ಥಿಗಳ ಬಸ್‌ಪಾಸ್‌ ಅರ್ಜಿ ಆರಂಭವಾಗಿದ್ದು ಗ್ರಾಮ ಒನ್‌ ಅಥವಾ ಕರ್ನಾಟಕ ಒನ್‌ಗಳಲ್ಲಿ ಆನ್‌ಲೈನ್‌ ಮೂಲಕ ಸಲ್ಲಿಸಿದ ನಂತರ ಸಾರಿಗೆ ನಿಗಮದ ಅಧಿಕಾರಿಗಳು ದಾಖಲಾತಿ ಪರಿಶೀಲಿಸಿ ಅನುಮೋದನೆ ನೀಡುತ್ತಾರೆ. ಬಳಿಕ ವಿದ್ಯಾರ್ಥಿಗಳು ಬಸ್‌ಪಾಸ್‌ನ್ನು ಕರ್ನಾಟಕ ಒನ್‌ ಕೇಂದ್ರಗಳಲ್ಲಿ ಹಣ ಪಾವತಿಸಿ ಪಡೆಯಬೇಕು.

ಮೊದಲಿನ ಪದ್ಧತಿಯಂತೆ ಶಾಲಾ ಮುಖ್ಯಸ್ಥರ ಮೂಲಕ ಬಸ್ ಪಾಸ್ ನೀಡಿದರೆ ಅಲೆದಾಟದ ಸಮಸ್ಯೆ ತಪ್ಪುತ್ತದೆ. ಈಗ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿರುವುದರಿಂದ ವಿದ್ಯಾರ್ಥಿಗಳು ತರಗತಿ ತಪ್ಪಿಸಿ ಸರತಿ ಸಾಲಿನಲ್ಲಿ ನಿಂತು ಅರ್ಜಿ ಸಲ್ಲಿಸಲು ಪರದಾಡುತ್ತಿದ್ದಾರೆ. ಮೊದಲಿನಂತೆ ಶಾಲಾ ಮುಖ್ಯಸ್ಥರಿಗೆ ಜವಾಬ್ದಾರಿ ಹೋರಿಸಿದರೆ ಅನೂಕುಲವಾಗಲಿದೆ ಎನ್ನುತ್ತಾರೆ ಶಾಲಾ ವಿದ್ಯಾರ್ಥಿಗಳು.

ಬಸ್‌ಪಾಸ್‌ಗಾಗಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳ ದಾಖಲೆ ಪರಿಶೀಲಿಸಿ ಅನುಮೋದನೆ ನೀಡುತ್ತಿದ್ದೇವೆ. ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ. ಬಸ್‌ಪಾಸ್‌ ಕೊಡುವ ವ್ಯವಸ್ಥೆಯನ್ನು ಕರ್ನಾಟಕ ಒನ್ ಸೆಂಟರ್‌ನಲ್ಲಿ ಮಾಡಲಾಗಿದ್ದು ಅಲ್ಲಿಯೇ ಪಡೆಯಬೇಕು.

ಸುಂದರಗೌಡ ಪಾಟೀಲ, ಡಿಪೋ ಮ್ಯಾನೇಜರ್‌, ಸಾರಿಗೆ ಸಂಸ್ಥೆ ಕುಷ್ಟಗಿ

ಎನ್‌ಐಸಿ ಸರ್ವರ್‌ ಅಪ್‌ಗ್ರೇಡ್‌ ಆಗಿರುವ ಪರಿಣಾಮ ಬಸ್‌ ಪಾಸ್‌ ಜನರೇಟ್‌ ಆಗುತ್ತಿಲ್ಲ. ಈ ಸಮಸ್ಯೆ ರಾಜ್ಯಾದ್ಯಂತ ಇದ್ದು ಎರಡು ದಿನಗಳಲ್ಲಿ ಅಂತಿಮಗೊಳ್ಳಲಿದೆ. 100 ಅರ್ಜಿ ಚೆಕ್‌ ಮಾಡಿದರೆ 10 ಪಾಸ್‌ಗಳು ಮಾತ್ರ ಮುದ್ರಣವಾಗುತ್ತಿದ್ದು ಅವುಗಳು ಸಹಿತ ಕೆಲ ಲೋಪಗಳಿಂದ ಕೂಡಿದ್ದು ಎರಡು ದಿನದ ನಂತರ ಪಾಸ್‌ಗಳು ಸಿಗಲಿವೆ.

ವೀರೇಶ ಕರಡಿ, ಕರ್ನಾಟಕ ಒನ್‌ ಸಿಬ್ಬಂದಿ ಕುಷ್ಟಗಿ

ಸಕಾಲಕ್ಕೆ ಬಸ್‌ ಪಾಸ್‌ ದೊರಕದ ಪರಿಣಾಮ ಶಾಲೆಗೆ ನಿತ್ಯ ಟಿಕೇಟ್‌ ಪಡೆದುಕೊಂಡು ಪ್ರಯಾಣಿಸುತ್ತಿದ್ದೇನೆ. ಇದಕ್ಕೊಂದು ಪರ್ಯಾಯ ವ್ಯವಸ್ಥೆ ಮಾಡಬೇಕು.

ಸಾತ್ವಿಕ್ ಕುಷ್ಟಗಿ, ಶಾಲಾ ವಿದ್ಯಾರ್ಥಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''