ಜೆಡಿಎಸ್‌ ಕಾರ್ಯಕರ್ತರು, ಮುಖಂಡರಿಗೆ ಧೈರ್ಯ ಹೇಳಿದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ

KannadaprabhaNewsNetwork |  
Published : Jan 08, 2025, 12:17 AM ISTUpdated : Jan 08, 2025, 12:18 PM IST
7ಕೆಆರ್ ಎಂಎನ್ 6.ಜೆಪಿಜಿಚನ್ನಪಟ್ಟಣ ತಾಲೂಕಿನ ಗ್ರಾಮವೊಂದರಲ್ಲಿ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರನ್ನು ನಿಖಿಲ್ ಕುಮಾರಸ್ವಾಮಿ ಭೇಟಿಯಾಗಿ ಮಾತುಕತೆ ನಡೆಸಿದರು. | Kannada Prabha

ಸಾರಾಂಶ

ರಾಮನಗರ ಮತ್ತು ಚನ್ನಪಟ್ಟಣ ತಾಲೂಕಿನ ವಿವಿಧ ಗ್ರಾಮದ ಕಾರ್ಯಕರ್ತರು ಹಾಗೂ ಮುಖಂಡರ ಮನೆಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿದರು.

 ರಾಮನಗರ : ರಾಮನಗರ ಮತ್ತು ಚನ್ನಪಟ್ಟಣ ತಾಲೂಕಿನ ವಿವಿಧ ಗ್ರಾಮದ ಕಾರ್ಯಕರ್ತರು ಹಾಗೂ ಮುಖಂಡರ ಮನೆಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿದರು.

ರಾಮನಗರ ಜೆಡಿಎಸ್ ಮುಖಂಡರಾದ ಕೆ.ಚಂದ್ರಣ್ಣ ಅವರ ತಾಯಿ ಚನ್ನಮ್ಮ ಅವರ ವೈಕುಂಠ ಸಮಾರಾಧನೆ ಕಾರ್ಯಕ್ರಮ ಮತ್ತು ಸಂತೆ ಮೊಗೇನಹಳ್ಳಿ ಮುಖಂಡರಾದ ಗುಂಡಪ್ಪ ಅವರ ಮನೆಗೆ, ಬೇವೂರು ಗ್ರಾಮದ ಲೈನ್ ಮೆನ್ ಕೆಂಗಲ್ ಅವರ ಮನೆಗೆ ವಳಗೆರೆ ದೊಡ್ಡಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದರು.

ನಂತರ ಚನ್ನಪಟ್ಟಣ ತಾಲೂಕಿನ ಇಗ್ಗಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷರ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ನೇರಳೂರು ಗ್ರಾಮದ ಶಿವಪ್ರಕಾಶ್ ಅವರ ನಿವಾಸಕ್ಕೆ ಭೇಟಿ ನೀಡಿ ಅಭಿನಂದನೆ ತಿಳಿಸಿದರು.

ಭಾನುವಾರ ಪಕ್ಷದ ಕಚೇರಿಯಲ್ಲಿ ಸಭೆ:

ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಸ್ವೀಕರಿಸುವ ಬಗ್ಗೆ ಸ್ಪಷ್ಟನೆ ನೀಡಿದ ನಿಖಿಲ್, ಇದು ನನಗೂ ಸಹ ಹೊಸ ಸುದ್ದಿ, ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪಕ್ಷದ ಚೌಕಟ್ಟಿನಲ್ಲಿ ಯಾವುದೇ ಚರ್ಚೆ ಆಗಿಲ್ಲ. ಜ. 12ರಂದು ಪಕ್ಷದ ಕಚೇರಿಯಲ್ಲಿ ಸಭೆ ಕರೆಯಲಾಗಿದೆ. ಶಾಸಕರು, ಮಾಜಿ ಶಾಸಕರು, ಮುಖಂಡರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಈ ವೇಳೆ ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

ಜಿಪಂ, ತಾಪಂ ಚುನಾವಣೆಗೆ ಸಿದ್ಧತೆ:

ಕುಮಾರಸ್ವಾಮಿಯವರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಈಗ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಕುಮಾರಸ್ವಾಮಿಯವರೇ ಮುಂದುವರಿಯುತ್ತಾರೆ. ಮುಂದೆ ನೋಡೋಣ, ಕಾರ್ಯಕರ್ತರು ಬಯಸಿದ ಹಾಗೆ ಆಗುತ್ತೆ. ಮಾರ್ಚ್, ಏಪ್ರಿಲ್‌ನಲ್ಲಿ ಜಿ.ಪಂ - ತಾ.ಪಂ. ಚುನಾವಣೆ ಬರಬಹುದು. ಆಗ ನಾನೇ ಕಾರ್ಯಕರ್ತರು, ಮುಖಂಡರ ಜೊತೆಗೆ ಚರ್ಚೆ ಮಾಡುತ್ತೇನೆ. ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದರು.

ಗ್ಯಾರಂಟಿ ಹೆಸರಲ್ಲಿ ಕಾಂಗ್ರೆಸ್ ಗಿಮಿಕ್:

ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ನಿಖಿಲ್ ಅವರು, ರಾಜ್ಯ ಸರ್ಕಾರ ಬಸ್ ದರ, ಹಾಲಿನ ದರ ಏರಿಕೆ ಮಾಡಿದೆ. ಗ್ಯಾರಂಟಿ ಹೆಸರಲ್ಲಿ ಗಿಮಿಕ್ ಮಾಡುತ್ತಿದ್ದಾರೆ. ಎಂಪಿ ಚುನಾವಣೆಯಲ್ಲಿ 4 ತಿಂಗಳದ್ದು ಹಣ ಹಾಕಿದ್ದರು. ನನ್ನ ಚುನಾವಣೆಯಲ್ಲಿ 3 ತಿಂಗಳಿದ್ದಾಗ ಹಣ ಹಾಕಿದರು. ಜಿ.ಪಂ., ತಾ.ಪಂ. ಚುನಾವಣೆಯಲ್ಲಿ 6 ತಿಂಗಳದ್ದು ಹಾಕುತ್ತಾರೆ. ಇದು ಯಾರ ದುಡ್ಡು, ರಾಜ್ಯದ ಸಂಪತ್ತು. ಇದಕ್ಕೆಲ್ಲ ಜನ ಕಾಲಬಂದಾಗ ಉತ್ತರ ಕೊಡುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಯಾರು ಧೃತಿಗೆಡಬಾರದು:

ಇದೇ ವೇಳೆ ಕಾರ್ಯಕರ್ತರೇ ನಮ್ಮ ಪಕ್ಷದ ಶಕ್ತಿ, ಎಲ್ಲರೂ ಪಕ್ಷದ ಜತೆ ನಿಂತು ಹೋರಾಟ ಮಾಡೋಣ, ನಾನು ಸೋತಿದ್ದೇನೆ ಎಂದು ಮನೆಯಲ್ಲಿ ಕೂರುವುದಿಲ್ಲ. ನಿಮ್ಮ ಜತೆ ನಾನು ಇರ್ತಿನಿ, ಪಕ್ಷ ಇರುತ್ತದೆ ಎಂದು ಕಾರ್ಯಕರ್ತರಿಗೆ ನಿಖಿಲ್ ಅವರು ಧೈರ್ಯ ತುಂಬಿದರು.

ಜೆಡಿಎಸ್ ಚನ್ನಪಟ್ಟಣ ತಾಲೂಕು ಅಧ್ಯಕ್ಷ ಜಯಮುತ್ತು, ಕುಕ್ಕೂರ ದೊಡ್ಡಿ ಜಯರಾಮ್, ನಿಡಗೋಡಿ ಬಾಬು, ಗೋವಿಂದಹಳ್ಳಿ ನಾಗರಾಜು, ಇಗ್ಗಲೂರು ಕುಮಾರ್, ಗರಕಹಳ್ಳಿ ಕೃಷ್ಣೆಗೌಡ ಸೇರಿದಂತೆ ಅನೇಕ ಪ್ರಮುಖ ಮುಖಂಡರು ಹಾಜರಿದ್ದರು.

PREV

Recommended Stories

ಅಭಿಮಾನ್‌ ಸ್ಟುಡಿಯೋ ಬಳಿಯೇ ವಿಷ್ಣು ದರ್ಶನ ಕೇಂದ್ರ : ಕಿಚ್ಚ ಸುದೀಪ್‌ ಅವರಿಂದ ಜಾಗ ಖರೀದಿ
ಮುಸುಕುಧಾರಿಯು ಕಿಂದರಿ ಜೋಗಿ, ಎಸ್‌ಐಟಿ ಇಲಿ ಆಗದಿರಲಿ : ಸುರೇಶ್‌