ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಟಿಎಪಿಸಿಎಂಎಸ್ ನಿರ್ದೇಶಕ ಹಾಗೂ ಶಾಸಕ ಎಚ್.ಟಿ.ಮಂಜು ಸಹೋದರ ಎಚ್.ಟಿ.ಲೋಕೇಶ್ ನೇತೃತ್ವದಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಆಗಮಿಸಿದ ನೂರಾರು ಜೆಡಿಎಸ್ ಕಾರ್ಯಕರ್ತರು ಒಳರೋಗಿಗಳಿಗೆ ಹಣ್ಣು ಹಂಪಲು ಹಂಚಿದರು. ನಂತರ ಆಸ್ಪತ್ರೆಯ ಹೊರ ಭಾಗದಲ್ಲಿ ಕೇಕ್ ಕತ್ತರಿಸಿ ಸಿಹಿ ಜೆಡಿಎಸ್ ಯುವ ನಾಯಕನಿಗೆ ಹುಟ್ಟುಹಬ್ಬದ ಶುಭ ಕೋರಿದರು.
ಈ ವೇಳೆ ಎಚ್.ಟಿ.ಲೋಕೇಶ್ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕಟ್ಟಿ ಬೆಳೆಸಿದ ಜೆಡಿಎಸ್ ಪಕ್ಷ ರಾಜ್ಯದ ರೈತರು, ದೀನ ದಲಿತರ ಧ್ವನಿಯಾಗಿ ಕೆಲಸ ಮಾಡುತ್ತಿದೆ ಎಂದರು.ಜೆಡಿಎಸ್ ಪಕ್ಷದ ಆಶಯಗಳಿಗೆ ಯುವ ನಾಯಕ ನಿಖಿಲ್ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ. ನಿಖಿಲ್ ಭವಿಷ್ಯದ ರಾಜಕೀಯ ಶಕ್ತಿಯಾಗಿದ್ದು, ಅವರ ನಾಯಕತ್ವದಲ್ಲಿ ಜೆಡಿಎಸ್ ರಾಜ್ಯದ ಜನರ ಆಶಯ ಈಡೇರಿಸಲಿದೆ. ಭಗವಂತ ಅವರಿಗೆ ಆಯಸ್ಸು ಮತ್ತು ಆರೋಗ್ಯ ನೀಡಲಿ ಎಂದು ಆಶಿಸಿದರು.
ಕನ್ನಡಪ್ರಭ ವಾರ್ತೆ ಮೇಲುಕೋಟೆ
ಸ್ಥಾನೀಕಂ ನಾಗರಾಜ ಅಯ್ಯಂಗಾರ್ ಸಾಂಸ್ಕೃತಿಕ ವೇದಿಕೆ ಹಮ್ಮಿಕ್ಕೊಂಡಿರುವ ರಸಸಂಜೆ ಕಾರ್ಯಕ್ರಮವನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಉದ್ಘಾಟಿಸಲಿದ್ದಾರೆ. ಕಲಾವಿದರನ್ನು ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಸನ್ಮಾನಿಸಲಿದ್ದಾರೆ. ಮೇಲುಕೋಟೆ ಗ್ರಾಪಂ ಅಧ್ಯಕ್ಷೆ ಭವಾನಿ ಹರಧರ ಅಧ್ಯಕ್ಷತೆ ವಹಿಸಲಿದ್ದಾರೆ. ಇಸ್ರೋ ವಿಜ್ಞಾನಿ ಡಾ.ಶ್ರೀನಾಥ್, ಕುಲಸಚಿವ ಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ
ಇದೇ ವೇಳೆ ಜಾನಪದ ಕ್ಷೇತ್ರದಲ್ಲಿ ಗಣನೀಯ ಸೇವೆಸಲ್ಲಿಸಿದ ಹುಲಿವಾನ ತಮಟೆ ಕಲಾವಿದ ಭೈರಯ್ಯ, ಕೊತ್ತತ್ತಿ ದೊಣ್ಣೆವರೆಸೆ ಕಲಾವಿದ ಜೋಗಯ್ಯ, ಲಕ್ಷ್ಮೀಸಾಗರ ಡೊಳ್ಳುಕುಣಿತ ಕಲಾವಿದ ಕುಮಾರ್‌ರನ್ನು ಸನ್ಮಾನಿಸಲಾಗುವುದು. ಪುತಿನ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸನ್ಮಾನಿತ ಕಲಾವಿದರು, ಗಣ್ಯರನ್ನು ದೇವಾಲಯದ ವೇದಿಕೆಗೆ ಕರೆತರಲು ನಡೆಯುವ ಶೋಭಾಯಾತ್ರೆಯಲ್ಲಿ ಡೊಳ್ಳುಕುಣಿತ, ಮೈಸೂರುನಗಾರಿ, ಚಂಡೆ, ತಮಟೆಮೇಳ, ನಾಸಿಕ್ ಡೋಲ್, ಕೋಲಾಟ, ವಿದ್ಯಾರ್ಥಿಗಳ ಬ್ಯಾಂಡ್ ಸೇರಿದಂತೆ ಹಲವು ಪ್ರಮುಖ ತಂಡಗಳ ಜಾನಪದ ಕಲಾತಂಡಗಳು ಭಾಗವಹಿಸಲಿವೆ.
ರಾತ್ರಿ 10 ಗಂಟೆಗೆ ಕೊತ್ತತ್ತಿ ಪುಟ್ಟಸ್ವಾಮಿ ತಂಡದಿಂದ ಬೆಂಕಿಭರಾಟೆ, ರಥಸಪ್ತಮಿಗೆ ಸಾಂಪ್ರದಾಯಿಕ ಎಳೆ ರಂಗೋಲೆ ಹಾಕಲು ಅವಕಾಶವಿದೆ. ಮಹಿಳೆಯರು ಹೆಸರು ನೊಂದಾಯಿಸಿ ಸ್ವಯಂಪ್ರೇರಿತವಾಗಿ ಭಾಗವಹಿಸಲು ಅವಕಾಶವಿದೆ ಎಂದು ಸಂಘಟಕರಾದ ಸೌಮ್ಯಸಂತಾನಂ ಮತ್ತು ಕದಲಗೆರೆ ಶಿವಣ್ಣಗೌಡ ತಿಳಿಸಿದ್ದಾರೆ.