ಕೆಫೆ ಬಾಂಬ್‌: ಗಾಯಾಳುಗಳಿಗೆ ಮುಂದುವರಿದ ಚಿಕಿತ್ಸೆ

KannadaprabhaNewsNetwork | Updated : Mar 03 2024, 11:38 AM IST

ಸಾರಾಂಶ

ನಗರದ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟದಿಂದ ಗಾಯಗೊಂಡವರಿಗೆ ಎರಡು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ತೀವ್ರವಾಗಿ ಗಾಯಗೊಂಡ ಒಬ್ಬರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟದಿಂದ ಗಾಯಗೊಂಡವರಿಗೆ ಎರಡು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ತೀವ್ರವಾಗಿ ಗಾಯಗೊಂಡ ಒಬ್ಬರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬ್ರೂಕ್‌ ಫೀಲ್ಡ್‌ ಆಸ್ಪತ್ರೆಯಲ್ಲಿ ಫಾರುಖ್‌, ಸ್ವರ್ಣಾಂಭಾ ಮತ್ತು ದೀಪಾಂಶುಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ದೀಪಾಂಶುಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಶನಿವಾರ ಸಂಜೆ ಡಿಸ್ಚಾರ್ಜ್‌ ಮಾಡಲಾಗಿದೆ. ಇನ್ನು ಫಾರುಖ್‌ಗೆ ಜನರಲ್‌ ವಾರ್ಡ್‌ ಮತ್ತು ಸ್ವರ್ಣಾಂಭಾ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬ್ರೂಕ್‌ಫೀಲ್ಡ್‌ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ। ಪ್ರದೀಪ್ ಕುಮಾರ್‌, ಸ್ವರ್ಣಾಂಭಾ ಅವರಿಗೆ ಶುಕ್ರವಾರ ರಾತ್ರಿ ಪ್ಲಾಸ್ಟಿಕ್‌ ಸರ್ಜರಿ ಮಾಡಲಾಗಿದೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ಸದ್ಯಕ್ಕೆ ಅವರನ್ನು ಮೈಸೂರಿಗೆ ಸ್ಥಳಾಂತರಿಸಲು ಸಾಧ್ಯವಿಲ್ಲ. ಅವರ ಕುಟುಂಬದವರಿಗೆ ಸದ್ಯದ ಆರೋಗ್ಯ ಸ್ಥಿತಿಗತಿಯ ಬಗ್ಗೆ ಮಾಹಿತಿ ನೀಡಲಾಗಿದೆ. ಸಂಪೂರ್ಣ ಚೇತರಿಸಿಕೊಳ್ಳುವವರೆಗೆ ಆಸ್ಪತ್ರೆಯಲ್ಲೇ ನಿಗಾ ವಹಿಸಲಾಗುವುದು. ಗಾಯಾಳುಗಳಿಗೆ ಐದು ಜನ ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.

ಫಾರುಖ್‌ ಅವರನ್ನು ಮೂರು ದಿನಗಳ ಬಳಿಕ ಡಿಸ್ಚಾರ್ಜ್‌ ಮಾಡಲಾಗುವುದು. ಗಾಯಾಳು ದೀಪಾಂಶು ಮಾನಸಿಕವಾಗಿ ಗಟ್ಟಿಯಾಗಿದ್ದು, ಚೇತರಿಸಿಕೊಂಡಿದ್ದಾರೆ. ಅವರನ್ನು ಇಂದೇ (ಶನಿವಾರ) ಡಿಸ್ಚಾರ್ಜ್‌ ಮಾಡಲಾಗುವುದು ಎಂದು ತಿಳಿಸಿದರು.ತನಿಖೆಗೆ ಸಹಕಾರ

ಪೊಲೀಸರ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಿದ್ದೇವೆ. ವಿಧಿವಿಜ್ಞಾನ ಪ್ರಯೋಗಾಲಯದವರು ಗಾಯಾಳುಗಳ ಬಟ್ಟೆಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಗಾಯಾಳುಗಳ ಚಿಕಿತ್ಸಾ ವೆಚ್ಚದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. 

ಮೊದಲು ಚಿಕಿತ್ಸೆ ನೀಡುವುದರತ್ತ ಗಮನ ನೀಡಿದ್ದೇವೆ. ರಾಜ್ಯ ಸರ್ಕಾರ ಮತ್ತು ರಾಮೇಶ್ವರಂ ಕೆಫೆ ಕಡೆಯಿಂದ ನಮಗೆ ಸಹಕಾರ ಸಿಕ್ಕಿದೆ ಎಂದು ಪ್ರಶ್ನೆಯೊಂದಕ್ಕೆ ಡಾ। ಪ್ರದೀಪ್‌ ಪ್ರತಿಕ್ರಿಯಿಸಿದರು.ದೃಷ್ಟಿ ಬರುವ ಸಾಧ್ಯತೆಕಡಿಮೆ: ಡಾ। ಸೀಮಾ

ವೈದೇಹಿ ಆಸ್ಪತ್ರೆಯ ವೈದ್ಯೆ ಸೀಮಾ ಸುದ್ದಿಗಾರರೊಂದಿಗೆ ಮಾತನಾಡಿ, ಆಸ್ಪತ್ರೆಯಲ್ಲಿ ಗಾಯಾಳುಗಳಾದ ನವ್ಯ, ನಾಗಶ್ರೀ, ಶಂಕರ, ಬಾಲಮುರುಳಿಗೆ ಚಿಕಿತ್ಸೆ ಮುಂದುವರೆದಿದೆ. ಸ್ಫೋಟದಲ್ಲಿ ನಾಗಶ್ರೀ ಅವರ ಕಣ್ಣಿನ ಗುಡ್ಡೆಗೆ ಜೋರಾಗಿ ಪೆಟ್ಟು ಬಿದ್ದಿದೆ. 

ಕಣ್ಣಿನ ಗುಡ್ಡೆ ಕಿತ್ತು ಹೊರಗೆ ಬಂದಿದ್ದು, ಸದ್ಯಕ್ಕೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಇಂತಹ ಪ್ರಕರಣಗಳಲ್ಲಿ ಕಣ್ಣಿನ ದೃಷ್ಟಿ ಬರುವ ಸಾಧ್ಯತೆ ತೀರಾ ಕಡಿಮೆಯಿದೆ. ಕನಿಷ್ಠ ಒಂದು ವಾರದವರೆಗೆ ಚಿಕಿತ್ಸೆ ಮುಂದುವರೆಸುತ್ತೇವೆ. ಬಳಿಕ ಅವರ ಕಣ್ಣಿನ ದೃಷ್ಟಿ ಬಗ್ಗೆ ತಿಳಿಯಲಿದೆ ಎಂದು ಹೇಳಿದರು.

Share this article