ಜನವರಿ 22 ರಂದು ಶಿವಮೊಗ್ಗದ ಕೃಷಿ ವಿವಿ 9ನೇ ಘಟಿಕೋತ್ಸವ

KannadaprabhaNewsNetwork |  
Published : Jan 21, 2025, 12:33 AM IST
ಪೋಟೋ: 20ಎಸ್‌ಎಂಜಿಕೆಪಿ01ಶಿವಮೊಗ್ಗದ ನವುಲೆಯಲ್ಲಿರುವ ಕೃಷಿ ವಿವಿಯಲ್ಲಿ ಸೋಮವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಸಿ.ಜಗದೀಶ್ ಮಾತನಾಡಿದರು. | Kannada Prabha

ಸಾರಾಂಶ

ಸಾಗರ ತಾಲೂಕಿನ ಇರುವಕ್ಕಿಯಲ್ಲಿರುವ ವಿಶ್ವವಿದ್ಯಾಲಯದ ಆವರಣದಲ್ಲಿ ಮಧ್ಯಾಹ್ನ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವವನ್ನು ಆಯೋಜಿಸಲಾಗಿದೆ ಎಂದು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಸಿ.ಜಗದೀಶ್ ತಿಳಿಸಿದರು.

ಕುಲಪತಿ ಡಾ. ಆರ್.ಸಿ.ಜಗದೀಶ್ ಮಾಹಿತಿ । ರಾಜ್ಯಪಾಲ ಗೆಹ್ಲೋಟ್‌ ಚಾಲನೆ । 994 ಅಭ್ಯರ್ಥಿಗಳಿಗೆ ಪದವಿ । ಕಾಗೋಡುವಿಗೆ ಡಾಕ್ಟರೇಟ್‌

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಾಗರ ತಾಲೂಕಿನ ಇರುವಕ್ಕಿಯಲ್ಲಿರುವ ವಿಶ್ವವಿದ್ಯಾಲಯದ ಆವರಣದಲ್ಲಿ ಜ.22ರಂದು ಮಧ್ಯಾಹ್ನ 2ಕ್ಕೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವವನ್ನು ಆಯೋಜಿಸಲಾಗಿದೆ ಎಂದು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಸಿ.ಜಗದೀಶ್ ತಿಳಿಸಿದರು.

ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವಕ್ಕೆ ರಾಜ್ಯಪಾಲರು, ವಿಶ್ವವಿದ್ಯಾಲಯದ ಕುಲಾಧಿಪತಿ, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಚಾಲನೆ ನೀಡುವರು. ಈ ವೇಳೆ ಪದವಿ ಪೂರ್ಣಗೊಳಿಸಿದ ಪ್ರತಿಭಾವಂತರಿಗೆ ಪದವಿ ಪ್ರದಾನ ಮಾಡಲಿದ್ದಾರೆ ಎಂದರು.

ಸಮಾರಂಭದಲ್ಲಿ ರಾಜ್ಯ ಕೃಷಿ ಮತ್ತು ತೋಟಗಾರಿಕೆ ಸಚಿವ ಹಾಗೂ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಎಸ್.ಚೆಲುವರಾಯಸ್ವಾಮಿ ಅವರು ಭಾಗವಹಿಸುವರು. ಇದೇ ಸಂದರ್ಭದಲ್ಲಿ ಬೆಂಗಳೂರಿನ ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರದ ನಿರ್ದೇಶಕರಾದ ಪ್ರೊ.ಎಲ್.ಎಸ್ ಶಶಿಧರ್ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದರು.

ಈ ಘಟಕೋತ್ಸವದಲ್ಲಿ 994 ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. 793 ವಿದ್ಯಾರ್ಥಿಗಳು ಕೃಷಿ ಮತ್ತು ತೋಟಗಾರಿಕೆ, ಅರಣ್ಯ ವಿಭಾಗಗಳಲ್ಲಿ ಪದವಿ ಹಾಗೂ 176 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಹಾಗೂ 25ವಿದ್ಯಾರ್ಥಿಗಳು ಪಿಎಚ್‌ಡಿ ಪದವಿ ಪಡೆಯುತ್ತಿದ್ದಾರೆ. ಇವರಲ್ಲಿ ಅತ್ಯುತ್ತಮ ಶೈಕ್ಷಣಿಕ ಸಾಧನೆ ಮಡಿದ 17 ಪದವಿ ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಅವರಿಗೆ ಒಟ್ಟು 31 ಚಿನ್ನದ ಪದಕಗಳನ್ನು ನೀಡಲಾಗುವುದು. 28 ಎಂ.ಎಸ್ಸಿ., ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಬಾಜನರಾಗಿದ್ದಾರೆ. ಅವರಿಗೆ ಒಟ್ಟು 33 ಚಿನ್ನದ ಪದಕಗಳು ನೀಡಲಾಗುತ್ತಿದೆ. ಅಲ್ಲದೇ 10 ಪಿಎಚ್‌ಡಿ ವಿದ್ಯಾರ್ಥಿಗಳಿಗೆ 12 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುತ್ತಿದೆ ಎಂದರು.

ಪ್ರಸಕ್ತ ಸಾಲಿನಲ್ಲಿ 5 ತಳಿಗಳ ಬಿಡುಗಡೆಗೆ ಶಿಫಾರಸ್ಸು ಮಾಡಲಾಗಿದೆ. ಹಲಸಂದಿಯ ಸಹ್ಯಾದ್ರಿ ಸಮೃದ್ಧಿ, ತಂಬಾಕು-ಸಹ್ಯಾದ್ರಿ ಸ್ವರ್ಣ ತಳಿಗಳು ಪ್ರಮುಖವಾಗಿವೆ. ಇವಲ್ಲದೆ ಸೇಂಗಾ-ಸಹ್ಯಾದ್ರಿ ದುರ್ಗ, ರಾಗಿ ತಳಿ ಹಾಗೂ ಭತ್ತದ ತಳಿಗಳನ್ನು ಬಿಡುಗಡೆಗೆ ಶಿಫಾರಸ್ಸು ಮಾಡಲಾಗಿದೆ ಎಂದ ಅವರು, ವಿಶ್ವವಿದ್ಯಾಲಯದ ಭತ್ತ, ಹೆಸರು, ರಾಗಿ, ನೆಲಗಡಲೆ ಮತ್ತು ತಂಬಾಕಿನ ಐದು ಹೊಸ ತಳಿಗಳನ್ನು ಸಮಿತಿಯಿಂದ ಬಿಡುಗಡೆಗೊಳಿಸಲು ಅನುಮೋದಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ವೇಳೆ ಶಿಕ್ಷಣ ನಿರ್ದೇಶಕ ಡಾ.ಹೇಮ್ಲಾನಾಯ್ಕ್, ವಿಸ್ತರಣಾ ನಿರ್ದೇಶಕ ಡಾ.ಕೆ.ಟಿ.ಗುರುಮೂರ್ತಿ, ಕುಲಸಚಿವರ ಡಾ.ಶಶಿಧರ್, ವಿದ್ಯಾರ್ಥಿ ಕಲ್ಯಾಣ ನಿರ್ದೇಶಕ ಡಾ.ನಾರಾಯಣ ಎಸ್.ಮಾವರ್ಕರ್, ಸಂಶೋಧನಾ ನಿರ್ದೇಶಕ ಡಾ. ದುಶ್ಯಂತ್ ಮತ್ತು ಗ್ರಂಥಪಾಲರಾದ ಶಿವಣ್ಣ ಹಾಜರಿದ್ದರು.

ಕಾಗೋಡು ಅವರಿಗೆ ಕೃಷಿ ವಿವಿ ಡಾಕ್ಟರೇಟ್

ಸಮಾಜವಾದಿ ಚಿಂತಕ, ಮುತ್ಸದ್ದಿ ರಾಜಕಾರಣಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುತ್ತಿದೆ. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಿದ್ದಾರೆ ಎಂದು ಕುಲಪತಿ ಡಾ. ಆರ್.ಸಿ.ಜಗದೀಶ್ ತಿಳಿಸಿದರು.

ಕಾಗೋಡು ತಿಮ್ಮಪ್ಪನವರು ಗ್ರಾಮೀಣ ಜನರ ಬದುಕನ್ನು ಹಸನುಗೊಳಿಸುವಲ್ಲಿ ಮಾಡಿದ ಸೇವೆ, ಹಾಗೂ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ಅಭಿವೃದ್ಧಿಪಡಿಸುವಲ್ಲಿ ಅವರು ತೋರಿದ ಕಾಳಜಿ ಹಾಗೂ ಶ್ರಮವನ್ನು ಪರಿಗಣಿಸಿ, ಪದವಿ ಇವರನ್ನು ಆಯ್ಕೆ ಮಾಡಲಾಗಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು