ಹೊಸಪೇಟೆ: ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಕೊಲೆಯಾದ ಯುವತಿ ನೇಹಾ ಹಿರೇಮಠ ತಂದೆ ನಿರಂಜನ್ ಹಿರೇಮಠ ವೀರಶೈವ ಲಿಂಗಾಯತ ಜಂಗಮದವರಾಗಿದ್ದು, ಇವರು ಬೇಡ ಜಂಗಮ ಎಂಬ ಸುಳ್ಳು ಜಾತಿ ಪ್ರಮಾಣಪತ್ರ ಪಡೆದಿದ್ದು, ಈ ಸುಳ್ಳು ಜಾತಿ ಪ್ರಮಾಣಪತ್ರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಬುಡ್ಜಜಂಗಮ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಸಣ್ಣಮಾರೆಪ್ಪ ಒತ್ತಾಯಿಸಿದರು.
ಅಲೆಮಾರಿ ಅನುಸೂಚಿತ ಕ್ರಮಸಂಖ್ಯೆ 19ರಲ್ಲಿ ಬರುವ ನಾವು ಬೇಡ, ಬುಡ್ಗ ಜಂಗಮದವರಾಗಿ ಮಾಂಸಹಾರಿಗಳಾಗಿರುತ್ತೇವೆ. ನಮ್ಮ ಆಚಾರ, ವಿಚಾರಗಳಾದ ಗುಡ್ಡಗಾಡಿನಲ್ಲಿ, ಗುಡಾರ, ಗುಡಿಸಲು, ಶಾಲೆ ಆವರಣ, ಹಾಳುಬಿದ್ದ ಮಂಟಪದಲ್ಲಿ ವಾಸವಾಗಿರುತ್ತೇವೆ. ಒಂದು ಕಡೆ ನೆಲೆ ಇಲ್ಲದೇ ನಿರಂತರವಾಗಿ ಅಲೆಮಾರಿಗಳಾಗಿ ಸಂಚರಿಸುತ್ತಾ ಜೀವನ ಸಾಗಿಸುತ್ತೇವೆ. ಹಗಲುವೇಷ, ಬುರ‍್ರಕಥ, ಗಂಗೆ-ಗೌರಿ ಕಥೆ, ಕಾವ್ಯ ಅನೇಕ ವೇಷಗಳನ್ನು ಪ್ರದರ್ಶಿಸಿ ಜನರಿಗೆ ಜಾತಿಗೊಂದು ಕಥೆಗಳನ್ನು ಹೇಳುತ್ತೇವೆ. ಇನ್ನು ಕೆಲವರು ಚಿಂದಿ ಆರಿಸುತ್ತಾ, ಸ್ಟೇಷನರಿ ವ್ಯಾಪಾರ, ಕೊಡದ ವ್ಯಾಪಾರ, ಇತರೆ ವ್ಯಾಪಾರ ಮಾಡುತ್ತಾ, ಮನೆಕೆಲಸ, ಮುಸುರೆ ತೊಳೆಯುವುದು ಇತರೆ ಕೆಲಸಗಳನ್ನು ಮಾಡಿ ಜೀವನ ಮಾಡುತ್ತೇವೆ. ವೀರಶೈವ ಲಿಂಗಾಯತ ಜಂಗಮರು ನಮ್ಮ ಸಂಸ್ಕೃತಿಯವರಲ್ಲ, ಅವರು ಮೇಲ್ವರ್ಗದವರು ಎಂದರು.