ನಿತ್ಯಾನಂದ ಹಳದೀಪುರಗೆ ಷಡಕ್ಷರಿ ಗವಾಯಿ ರಾಷ್ಟ್ರೀಯ ಪುರಸ್ಕಾರ ಪ್ರದಾನ

KannadaprabhaNewsNetwork |  
Published : Jan 06, 2026, 02:30 AM IST
ಕುಮಟಾ ತಾಲೂಕಿನ ಕೂಜಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂ. ಷಡಕ್ಷರಿ ಗವಾಯಿ ಅಕಾಡೆಮಿ ವತಿಯಿಂದ ಪಂ. ನಿತ್ಯಾನಂದ ಹಳದೀಪುರ ಅವರಿಗೆ ಷಡಕ್ಷರಿ ರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡಲಾಯಿತು. | Kannada Prabha

ಸಾರಾಂಶ

ಖ್ಯಾತ ಹಿಂದುಸ್ತಾನಿ ಬಾನ್ಸುರಿ (ಕೊಳಲು) ವಾದಕ, ಮುಂಬೈನ ನಿತ್ಯಾನಂದ ಹಳದೀಪುರ ಅವರಿಗೆ ಪಂ. ಷಡಕ್ಷರಿ ಗವಾಯಿ ಅಕಾಡೆಮಿ ವತಿಯಿಂದ ನೀಡುವ ಷಡಕ್ಷರಿ ರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡಲಾಯಿತು.

ಕೂಜಳ್ಳಿಯಲ್ಲಿ ಮೇರು ಕಲಾವಿದರಿಂದ ದಿನವಿಡೀ ಗಾಯನ-ವಾದನ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಕುಮಟಾ

ಖ್ಯಾತ ಹಿಂದುಸ್ತಾನಿ ಬಾನ್ಸುರಿ (ಕೊಳಲು) ವಾದಕ, ಮುಂಬೈನ ನಿತ್ಯಾನಂದ ಹಳದೀಪುರ ಅವರಿಗೆ ಪಂ. ಷಡಕ್ಷರಿ ಗವಾಯಿ ಅಕಾಡೆಮಿ ವತಿಯಿಂದ ನೀಡುವ ಷಡಕ್ಷರಿ ರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡಲಾಯಿತು.

ತಾಲೂಕಿನ ಕೂಜಳ್ಳಿಯ ಕುಳಿಹಕ್ಕಲಿನ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದ ಅವರು, ಪಂ. ಷಡಕ್ಷರಿ ಗವಾಯಿಗಳ ಮೇರು ವ್ಯಕ್ತಿತ್ವ ಸ್ಮರಿಸಿ, ಅಕಾಡೆಮಿ ಕಾರ್ಯ ಶ್ಲಾಘಿಸಿದರು.

ಮುಖ್ಯ ಅತಿಥಿ, ನಿವೃತ್ತ ಉಪನ್ಯಾಸಕ ಶಂಕರ ಭಟ್ಟ ಧಾರೇಶ್ವರ ಮಾತನಾಡಿ, ಸಂಗೀತವೆಂದರೆ ಒಂದು ತಪಸ್ಸು. ಪ್ರಕೃತಿ ಹಾಗೂ ದೇಹದ ಮೇಲೆ ಸಂಗೀತ ಉಂಟುಮಾಡುವ ಪರಿಣಾಮ ಗಾಢವಾದುದು. ಅಧ್ಯಾತ್ಮ ಸಾಧನೆಗೆ ಸಂಗೀತ ಉತ್ತಮ ಮಾರ್ಗ. ಸಂಗೀತ ನಾಡಿ ಗತಿಯ ಮೇಲೆಯೂ ಪರಿಣಾಮ ಬೀರುತ್ತದೆ. ಪ್ರಕೃತಿಯ ಪ್ರತಿಯೊಂದು ಕಣದಲ್ಲೂ ನಾದ ಬೆರೆತಿದೆ. ಸಂಗೀತ ಉಳಿಸಿ ಬೆಳೆಸಲು ನಿರಂತರ ಸಾಧನೆ ಅಗತ್ಯ. ಗುರು-ಶಿಷ್ಯರ ಸಂಬಂಧ ಉಳಿದಿರುವುದಕ್ಕೆ ಈ ಕಾರ್ಯಕ್ರಮ ಸಾಕ್ಷಿ ಎಂದರು.

ನಿವೃತ್ತ ಉಪನ್ಯಾಸಕ ಎಂ.ಟಿ. ಗೌಡ ಮಾತನಾಡಿ, ಸಂಗೀತಕ್ಕೆ ಅಗಾಧವಾದ ಶಕ್ತಿಯಿದೆ. ಸಂಗೀತ ಪರಮ ಪವಿತ್ರವಾದುದು. ವೇದಗಳಲ್ಲಿಯೂ ಸಂಗೀತಕ್ಕೆ ಪ್ರಮುಖ ಸ್ಥಾನವಿದೆ. ಷಡಕ್ಷರಿ ಗವಾಯಿಗಳು ಸಂಗೀತ ಕ್ಷೇತ್ರಕ್ಕೆ ಸುದೀರ್ಘ ಕಾಲ ನಿಸ್ವಾರ್ಥ ಸೇವೆ ಮಾಡಿದವರು. ಇಂತಹ ಪುಟ್ಟ ಹಳ್ಳಿಯಲ್ಲಿ ಅಂತಹ ಗುರುವಿನ ಸ್ಮರಿಸುವ ಕಾರ್ಯಕ್ರಮವನ್ನು ನಿರಂತರ ಮಾಡುತ್ತಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಬೇಕು ಎಂದರು.

ವೇದ ಅಧ್ಯಾಪಕ ಮನೋಜ ಕೃಷ್ಣ ಭಟ್ಟ ಮಾತನಾಡಿ, ಗುರು-ಶಿಷ್ಯರ ಪರಂಪರೆ ಉಳಿಸುವ ನಿಟ್ಟಿನಲ್ಲಿ 17 ವರ್ಷಗಳಿಂದ ನಿರಂತರವಾಗಿ ಇಂತಹ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ. ಈಗ ಸದ್ಯಕ್ಕೆ ಗುರು ಶಿಷ್ಯ ಪರಂಪರೆಯಲ್ಲಿ ಶಿಕ್ಷಣ ಪದ್ಧತಿ ಸಂಗೀತದಲ್ಲಿ ಮಾತ್ರ ಉಳಿದುಕೊಂಡಿದೆ ಎಂದರು.

ಅಕಾಡೆಮಿ ಅಧ್ಯಕ್ಷ ವಸಂತರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೂಜಳ್ಳಿಯ ಸ್ವರ ಸಂಗಮದ ಅಧ್ಯಕ್ಷ ಎಸ್.ಜಿ. ಭಟ್ಟ, ಷಡಕ್ಷರಿ ಗವಾಯಿ ಅಕಾಡೆಮಿ ಖಜಾಂಚಿ ವಿ.ಜಿ. ಹೆಗಡೆ, ಗೌರೀಶ ಯಾಜಿ, ಎಸ್.ಎನ್. ಭಟ್ಟ ಉಪಸ್ಥಿತರಿದ್ದರು.

ಬೆಳಗ್ಗೆ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ರಘುಪತಿ ಯಾಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಶಿಕ್ಷಕ ಟಿ.ಎನ್. ಭಟ್ಟ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಇತ್ತೀಚೆಗೆ ನಿಧನರಾದ ಹಿರಿಯ ಸಂಗೀತ ಕಲಾವಿದ ಡಾ. ಅಶೋಕ ಹುಗ್ಗಣ್ಣವರ ಅವರಿಗೆ ಒಂದು ನಿಮಿಷ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಂಗೀತ ಕಾರ್ಯಕ್ರಮ:

ದಿನವಿಡೀ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಪಂ. ನಿತ್ಯಾನಂದ ಹಳದೀಪುರ ಅವರ ಬಾನ್ಸುರಿ ವಾದನ ಪ್ರಮುಖ ಆಕರ್ಷಣೆಯಾಗಿತ್ತು. ಶ್ರೀಪಾದ ಹೆಗಡೆ ಕಂಪ್ಲಿ, ಮುಂಬೈನ ಭಾಗ್ಯೇಶ ಮರಾಠೆ, ಕುಮಟಾದ ಕಿಶೋರ ಕೊಂಡದಕುಳಿ, ಶಿರಸಿಯ ಡಾ. ಸಂಧ್ಯಾ ಭಟ್ಟ ಹಾಗೂ ಕವಲಕ್ಕಿಯ ವಿ. ಶಾರದಾ ಹೆಗಡೆ, ಗಾಯನ ಕಾರ್ಯಕ್ರಮ ಶ್ರೋತೃಗಳ ಮನ ತಣಿಸಿತು. ತಬಲಾದಲ್ಲಿ ಗೋಪಾಲಕೃಷ್ಣ ಹೆಗಡೆ ಕಲಭಾಗ, ಮುಂಬೈನ ಸ್ವಪ್ನಿಲ್ ಭಿಸೆ, ವಿದ್ವಾನ್ ಪರಮೇಶ್ವರ ಹೆಗಡೆ ಮೈಸೂರು, ಅಕ್ಷಯ ಭಟ್ಟ ಅಂಸಳ್ಳಿ, ಭರತ ಹೆಗಡೆ ಕವಲಕ್ಕಿ ಸಾಥ್ ನೀಡಿದರು. ವಿದ್ವಾನ್‌ ಗೌರೀಶ ಯಾಜಿ, ಅಜಯ ಹೆಗಡೆ ವರ್ಗಾಸರ ಹಾರ್ಮೋನಿಯಂನಲ್ಲಿ ಸಾಥ್ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ