ಮುಂಬರುವ ತಾಪಂ ಮತ್ತು ಜಿಪಂ ಚುನಾವಣೆಗಳಲ್ಲಿ ಬಿಜೆಪಿ ಜತೆ ಹೊಂದಾಣಿಕೆ ಕುರಿತು ಇನ್ನೂ ಚರ್ಚೆಯಾಗಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಹಗರಿಬೊಮ್ಮನಹಳ್ಳಿ: ಮುಂಬರುವ ತಾಪಂ ಮತ್ತು ಜಿಪಂ ಚುನಾವಣೆಗಳಲ್ಲಿ ಬಿಜೆಪಿ ಜತೆ ಹೊಂದಾಣಿಕೆ ಕುರಿತು ಇನ್ನೂ ಚರ್ಚೆಯಾಗಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ ಜನರೊಂದಿಗೆ ಜನತಾದಳ ಸಮಾವೇಶದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯದಾದ್ಯಂತ ಜೆಡಿಎಸ್ ಕುರಿತಂತೆ ಜನರಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಎರಡೂ ಚುನಾವಣೆಗಳಿಗೆ ಜೆಡಿಎಸ್ ಸಿದ್ಧವಾಗಿದೆ. ಚುನಾವಣೆಗಳಲ್ಲಿ ಪಕ್ಷದ ಪರ ಕೆಲಸ ಮಾಡಿರುವವರನ್ನು ಗುರುತಿಸಿ ಟಿಕೆಟ್ ನೀಡಲಾಗುತ್ತದೆ ಎಂದು ಹೇಳಿದರು.
ಕಳೆದ ವರ್ಷ ಅತಿವೃಷ್ಟಿಯಿಂದ ಕಲ್ಯಾಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಬೆಳೆ ನಷ್ಟ ಉಂಟಾದರೂ ಮುಖ್ಯಮಂತ್ರಿ, ಕೃಷಿ ಸಚಿವರು ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಿಲ್ಲ. ಕೇಂದ್ರ ಸರ್ಕಾರ ಒದಗಿಸಿದ್ದ ಪರಿಹಾರ ಹಂಚಲಿಲ್ಲ. ಆದರೆ ಪರಿಹಾರ ನೀಡಲಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧವೇ ಸುಳ್ಳು ಆರೋಪ ಮಾಡಿ, ಜನ ಬೆಂಬಲ ಪಡೆಯುವ ನಾಟಕ ಮಾಡಿದರು ಎಂದು ದೂರಿದರು.
ಕಲ್ಯಾಣ ಕರ್ನಾಟಕದ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಪ್ರಭಾವಿ ಶಾಸಕರು, ಸಚಿವರು ಇದ್ದರೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮತ್ತು ಕಲ್ಯಾಣ ಕಾಗದದಲ್ಲಿಯೇ ಉಳಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೆಲೆ ಏರಿಕೆ ಮತ್ತು ಲೂಟಿ ಕಾಂಗ್ರೆಸ್ ಕೊಡುಗೆಯಾಗಿದೆ. ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯ ₹೩೭ಸಾವಿರ ಕೋಟಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ₹೮೭ ಕೋಟಿ, ಗೃಹಲಕ್ಷ್ಮಿ ಯೋಜನೆಯಲ್ಲಿ ₹೧೫ ಸಾವಿರ ಕೋಟಿ ಲೂಟಿಯಾಗಿದೆ ಎಂದು ಆರೋಪಿಸಿದರು.
ದೇವೇಗೌಡರು ಪ್ರಧಾನಿಯಾಗಿದ್ದಾಗ, ಕೃಷ್ಣಾ ಮೇಲ್ದಂಡೆ ಯೋಜನೆಯ ಎರಡೂ ಹಂತದ ಕಾಮಗಾರಿಗಳನ್ನು ಪೂರ್ಣಗೊಳಿಸಿದರು. ಆದರೆ, ಅಧಿಕಾರಕ್ಕಾಗಿ ಕಾಂಗ್ರೆಸ್ ನಡಿಗೆ ಕೃಷ್ಣಾ ಕಡೆಗೆ ಪಾದಯಾತ್ರೆ ನಡೆಸಿದ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೆಯ ಹಂತದ ಕಾಮಗಾರಿಯನ್ನು ಇವತ್ತಿಗೂ ಪೂರ್ಣಗೊಳಿಸಲಾಗಿಲ್ಲ. ಪ್ರಾರಂಭಿಕ ಹಂತದ ₹೧೭ ಸಾವಿರ ಕೋಟಿ ಯೋಜನೆಯ ವೆಚ್ಚ ಈಗ ₹೮೭ ಸಾವಿರ ಕೋಟಿಗೇರಿದೆ. ಲೂಟಿಯ ನಡುವೆ ರೈತರ ಯೋಜನೆಗಳು ಕಾಂಗ್ರೆಸ್‌ಗೆ ನೆನಪಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಶಾಸಕ ಕೆ. ನೇಮರಾಜ್ ನಾಯ್ಕ್, ಜಿಲ್ಲಾಧ್ಯಕ್ಷ ಬದಾಮಿ ಮೃತ್ಯುಂಜಯ, ಮಾಜಿ ಸಚಿವ ಎಂ.ಪಿ. ನಾಡಗೌಡ, ಹರಿಹರದ ಮಾಜಿ ಶಾಸಕ ಶಿವಶಂಕರ, ಮಾಜಿ ಸಂಸದ ಅನಿಲ್ ಲಾಡ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.