ಸ್ವಾರ್ಥಕ್ಕಾಗಿ ಬಿಜೆಪಿ ಜತೆ ಮೈತ್ರಿ ಮಾಡಿಲ್ಲ: ಶಾಸಕ ಎಚ್‌.ಡಿ.ರೇವಣ್ಣ

KannadaprabhaNewsNetwork |  
Published : Mar 23, 2024, 01:00 AM IST
22ಎಚ್ಎಸ್ಎನ್20 : ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ಮುಖಂಡ ಎಚ್‌.ಡಿ.ರೇವಣ್ಣ. | Kannada Prabha

ಸಾರಾಂಶ

ರಾಜ್ಯದ ಜನತೆಯ ಒಳಿತಿಗಾಗಿ ಹಾಗೂ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ತೆಗೆಯುವ ಉದ್ದೇಶದಿಂದ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು. ಹಾಸನದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದರು.

ಭ್ರಷ್ಟ ಸರ್ಕಾರ ಕಿತ್ತೊಗೆಯುವ ಉದ್ದೇಶ । ವಿರೋಧಿ ಪಕ್ಷಗಳ ಮುಗಿಸಲು ಕಾಂಗ್ರೆಸ್‌ ಹುನ್ನಾರ

ಕನ್ನಡಪ್ರಭ ವಾರ್ತೆ ಹಾಸನ

ಕೇವಲ ರಾಜಕೀಯ ಮಾಡುವುದಕ್ಕಾಗಿ ಬಿಜೆಪಿ ಜೊತೆ ಕೈಜೋಡಿಸಿಲ್ಲ. ರಾಜ್ಯದ ಜನತೆಯ ಒಳಿತಿಗಾಗಿ ಹಾಗೂ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ತೆಗೆಯುವ ಉದ್ದೇಶದಿಂದ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮದೊಂದಿಗೆ ಮಾತನಾಡಿ, ಪ್ರಧಾನಿ ಆಗಿದ್ದ ವೇಳೆ ದೇವೇಗೌಡರನ್ನು ಕೆಳಗಿಳಿಸಲು ಕುತಂತ್ರ ಮಾಡಿದ ಕಾಂಗ್ರೆಸ್ ಸರ್ಕಾರ ಅಂದಿನಿಂದಲೂ ವಿರೋಧಿ ಪಕ್ಷಗಳನ್ನು ಮುಗಿಸಲು ಹುನ್ನಾರ ಮಾಡುತ್ತಿದೆ. ಕಳೆದ ೬೦ ವರ್ಷಗಳಿಂದ ರಾಜಕೀಯ ಮಾಡಿಕೊಂಡು ಬಂದಿರುವ ಕಾಂಗ್ರೆಸ್ ರಾಜ್ಯಕ್ಕೆ ನೀಡಿರುವ ಕೊಡುಗೆ ಏನು? ಈ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

‘ಜೆಡಿಎಸ್ ವತಿಯಿಂದಲೂ ಈಗಾಗಲೇ ಲೋಕಸಭಾ ಚುನಾವಣೆಗೆ ಎಲ್ಲಾ ರೀತಿಯ ತಯಾರಿ ನಡೆಸಲಾಗುತ್ತಿದ್ದು, ನೆನ್ನೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಭೇಟಿ ಮಾಡಿ ಮಾತುಕತೆ ಮಾಡಲಾಗಿದೆ. ಮೈತ್ರಿ ಅಭ್ಯರ್ಥಿಯ ಅಧಿಕೃತ ಘೋಷಣೆಯಾದ ನಂತರ ಎರಡು ಪಕ್ಷದ ಮುಖಂಡರು ಸೇರಿ ಪ್ರಚಾರಕ್ಕೆ ಆಗಮಿಸಿ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ’ ಎಂದು ಹೇಳಿದರು.

‘ದೇಶದಲ್ಲಿ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬುದು ಬಿಜೆಪಿ ಹಾಗೂ ದೇವೇಗೌಡರ ಉದ್ದೇಶವಾಗಿದೆ. ಇಂದು ದೇಶದಲ್ಲಿ ನೈಜ ಕಾಂಗ್ರೆಸ್ ಇಲ್ಲ. ಅವರದು ವಿಪಕ್ಷ ತುಳಿಯುವ ಉದ್ದೇಶ. ಭ್ರಷ್ಟ ಸರ್ಕಾರ ಕಿತ್ತೊಗೆಯುವುದು ನಮ್ಮೆಲ್ಲರ ಉದ್ದೇಶ. ದೇವೇಗೌಡರಿಗೆ ಪ್ರಧಾನಿ ಆಸೆ ತೋರಿಸಿ ಮೋಸ ಮಾಡಿದರು. ಇಲ್ಲದೇ ಹೋಗಿದ್ದರೆ ಹತ್ತಾರು ವರ್ಷ ಗೌಡರು ಪ್ರಧಾನಿಯಾಗಿರುತ್ತಿದ್ದರು’ ಎಂದು ತಿಳಿಸಿದರು.

‘ನಮ್ಮ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿರುವ ಕಾಂಗ್ರೆಸ್ ಜಿಲ್ಲೆಗೆ ಏನು ಎಂಬುದನ್ನು ಜನರ ಮುಂದಿಡಲಿ. ಗಂಗಾ ಕಲ್ಯಾಣ ಯೋಜನೆಯಡಿ ನನ್ನ ಕ್ಷೇತ್ರವೊಂದರಲ್ಲೇ ಪರಿಶಿಷ್ಟ ಜಾತಿ-ಪಂಗಡದವರಿಗೆ ೧ ಸಾವಿರ ಬೋರ್‌ವೆಲ್ ಕೊರೆಸಿದ್ದೇನೆ. ಇವರು ಅಧಿಕಾರಕ್ಕೆ ಬಂದು ೯ ತಿಂಗಳು ಕಳೆದಿದ್ದರೂ ಕೊಳವೆ ಬಾವಿಗಳಿಗೆ ಕರೆಂಟ್ ಸಂಪರ್ಕ ಕೊಡಲಾಗಿಲ್ಲ. ಎಸ್‌ಸಿ, ಎಸ್ಟಿ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ’ ಎಂದು ಕಿಡಿಕಾರಿದರು.

‘ನಮ್ಮ ಅಗತ್ಯವಿದ್ದಾಗ ನಮ್ಮನ್ನು ಬಳಸಿಕೊಂಡು ಅರ್ಧದಲ್ಲಿ ಕೈ ಬಿಟ್ಟು ಹೋಗುವ ಕಾಂಗ್ರೆಸ್‌ಗೆ ಈ ಬಾರಿ ರಾಜ್ಯದ ಜನ ತಕ್ಕ ಉತ್ತರ ನೀಡಬೇಕು. ಈ ಹಿಂದೆ ಕೂಡ ದೇವೇಗೌಡರು ಪ್ರಧಾನಿಯಾಗಿದ್ದ ವೇಳೆ ತನ್ನ ಕುತಂತ್ರ ಬುದ್ಧಿಯಿಂದ ಅವರನ್ನು ಕೆಳಗಿಳಿಸುವ ಕೆಲಸ ಮಾಡಿರುವ ಕಾಂಗ್ರೆಸ್ ಈ ಬಾರಿ ಅಧಿಕಾರಕ್ಕೆ ಬಂದ ನಂತರ ವಿವಿಧ ಸಮಾಜಗಳಿಗೆ ಅನ್ಯಾಯ ಮಾಡಿದೆ’ ಎಂದು ದೂರಿದರು.

ಈಗಾಗಲೇ ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿದೆ. ಆದರೆ ಈವರೆಗೆ ರೈತರಿಗೆ ಪರಿಹಾರವಾಗಲೀ, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಯಾಗಲೀ ಆಗಿಲ್ಲ. ಜತೆಗೆ ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಿಟ್ಟಿದ್ದ ಹಣವನ್ನು ದುರ್ಬಳಕೆ ಮಾಡಿಕೊಂಡು ಅವರಿಗೆ ನೀಡಿರುವ ಗಂಗಾ ಕಲ್ಯಾಣ ಯೋಜನೆ ಅಡಿ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕೊಡುವಲ್ಲಿಯೂ ವಿಫಲವಾಗಿದೆ. ಪ್ರಜ್ವಲ್ ಸಂಸದ ಆದ ನಂತರ ಹಾಸನ ಜಿಲ್ಲೆಗೆ ಏನೇನು ಕೊಡುಗೆ ನೀಡಿದ್ದಾರೆ ಎಂಬುದನ್ನು ಇಡೀ ಜಿಲ್ಲೆಯ ಜನ ನೋಡಿದ್ದಾರೆ. ಆದರೆ ೬೦ ವರ್ಷ ಆಳ್ವಿಕೆ ನಡೆಸಿರುವ ಕಾಂಗ್ರೆಸ್ ನೀಡಿರುವ ಕೊಡುಗೆ ಏನು? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ಮುಖಂಡ ಎಚ್‌.ಡಿ.ರೇವಣ್ಣ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ