ಕನ್ನಡಪ್ರಭ ವಾರ್ತೆ ರಾಮನಗರ
ಬಿಡದಿ ಪುರಸಭೆಯಲ್ಲಿನ ಹೊರ ಗುತ್ತಿಗೆ ಸಿಬ್ಬಂದಿಯ ಕನಿಷ್ಠ ವೇತನ ವ್ಯತ್ಯಾಸದ ಹಣ ಬಿಡುಗಡೆಗಾಗಿ ಯಾರಿಗೂ ನಯಾ ಪೈಸೆ ಲಂಚ ಕೊಟ್ಟಿಲ್ಲ. ಆದರೆ, ಈ ಹಣ ಬಿಡುಗಡೆಗೆ ಸಹಕಾರ ನೀಡಿದವರ ವಿರುದ್ಧವೇ ಕೆಲವರು ಉದ್ದೇಶ ಪೂರ್ವಕವಾಗಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ವಾಟರ್ ಮ್ಯಾನ್ ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 10 ವರ್ಷಗಳ ನಿರಂತರ ಹೋರಾಟದ ಫಲವಾಗಿ ಹೊರ ಗುತ್ತಿಗೆ ಸಿಬ್ಬಂದಿಗೆ ಕನಿಷ್ಠ ವೇತನ ನಿಗದಿಯಾಗುವ ಜೊತೆಗೆ ಕನಿಷ್ಠ ವೇತನ ವ್ಯತ್ಯಾಸದ ಹಣವೂ ಪಾವತಿಯಾಗಿದೆ. ಇದಕ್ಕಾಗಿ ನಾವು ಯಾರಿಗೂ ಲಂಚ ಕೊಟ್ಟಿಲ್ಲ. ಹೋರಾಟ ಮಾಡಿ ಗೆದ್ದಿದ್ದೇವೆ ಎಂದರು.
ಶಾಸಕ ಬಾಲಕೃಷ್ಣ, ಮಾಜಿ ಶಾಸಕ ಎ.ಮಂಜುನಾಥ್ , ಪುರಸಭೆ ಮಾಜಿ ಅಧ್ಯಕ್ಷ ಹರಿಪ್ರಸಾದ್ , ವಿಪಕ್ಷ ನಾಯಕ ಸಿ.ಉಮೇಶ್ , ಸದಸ್ಯ ದೇವರಾಜು , ಮುಖ್ಯಾಧಿಕಾರಿ ಮೀನಾಕ್ಷಿ ಹಾಗೂ ಜಿಬಿಎ ಅಧ್ಯಕ್ಷ ಗಾಣಕಲ್ ನಟರಾಜ್ ಅವರೆಲ್ಲರೂ ಕನಿಷ್ಠ ವೇತನ ವ್ಯತ್ಯಾಸದ ಹಣ ಬಿಡುಗಡೆಗೆ ಸಹಕಾರ ನೀಡಿದರು. ಆದರೆ, ವಿನಾ ಕಾರಣ ಅವರೆಲ್ಲರ ಮೇಲೆ ಲಂಚದ ಆರೋಪ ಹೊರಿಸಿ ಅಪಪ್ರಚಾರ ಮಾಡುತ್ತಿರುವುದು ನಮಗೆಲ್ಲ ನೋವು ತರಿಸಿದೆ ಎಂದು ಹೇಳಿದರು.ಸಿಬ್ಬಂದಿ ಪರವಾಗಿ ನಿಲ್ಲಬೇಕಾದವರೇ ಹಣ ಬಿಡುಗಡೆ ಆಗಿರುವುದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಇದು ಸಿಬ್ಬಂದಿ ಬಗೆಗೆ ಅವರಲ್ಲಿರುವ ಭಾವನೆಗಳನ್ನು ತೋರಿಸುತ್ತದೆ. ನಾವೆಲ್ಲರೂ ಕಾನೂನು ಪ್ರಕಾರ ನಮ್ಮ ಹಕ್ಕನ್ನು ಪಡೆದುಕೊಂಡಿದ್ದೇವೆ. ಇದಕ್ಕೆ ಸಹಕಾರ ನೀಡಿದವರಿಗೆ ನಾವು ಋಣಿಯಾಗಿರುತ್ತೇವೆ ಎಂದು ತಿಳಿಸಿದರು.
ಬಿಡದಿಯು ಗ್ರಾಮ ಪಂಚಾಯಿತಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೇರಿದ ದಿನದಿಂದಲೂ 71 ಮಂದಿ ಸಿಬ್ಬಂದಿ 2300 ರುಪಾಯಿ ವೇತನಕ್ಕಾಗಿ ದುಡಿಯುತ್ತಿದ್ದೇವು. ಇದರಲ್ಲಿ 51 ಮಂದಿ ಮಾತ್ರ ಈಗ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕನಿಷ್ಠ ವೇತನಕ್ಕೆ ಒತ್ತಾಯಿಸಿ ಹೋರಾಟದ ಹಾದಿ ಹಿಡಿದಾಗ ಯಾರೂ ನಮ್ಮ ಬೆಂಬಲಕ್ಕೆ ಬರಲಿಲ್ಲ ಎಂದು ನೊಂದು ನುಡಿದರು.ಇಎಸ್ ಐ ಮತ್ತು ಪಿಎಫ್ ವಂತಿಕೆ ಕಡಿತಗೊಳಿಸಿ ಹಣ ಬಿಡುಗಡೆ :
ಕನಿಷ್ಠ ವೇತನ ಮತ್ತು ಕನಿಷ್ಠ ವೇತನ ವ್ಯತ್ಯಾಸದ ಹಣ ಪಾವತಿ ಆಗದಿರುವುದನ್ನು ಪ್ರಶ್ನಿಸಿ ಸಹಾಯಕ ಕಾರ್ಮಿಕ ಆಯುಕ್ತರು ವಿಭಾಗ 1 ಹಾಗೂ ಕನಿಷ್ಠ ವೇತನ ಪ್ರಾಧಿಕಾರದ ಮೊರೆ ಹೋದೆವು.ಮೂರುವರೆ ವರ್ಷಗಳ ಹಿಂದೆಯೇ ಪ್ರಾಧಿಕಾರ ಕನಿಷ್ಠ ವೇತನದ ಜೊತೆಗೆ ಕನಿಷ್ಠ ವೇತನ ವ್ಯತ್ಯಾಸದ ಹಣವನ್ನೂ ಪಾವತಿಸುವಂತೆ ಬಿಡದಿ ಪುರಸಭೆಗೆ ಆದೇಶಿಸಿತು.
ಇಷ್ಟಾದರೂ ಪುರಸಭೆ ಕೇಸ್ ವರ್ಕರ್ ಪ್ರಾಧಿಕಾರದ ಆದೇಶ ಮುಂದಿಟ್ಟುಕೊಂಡು ಹಣ ನೀಡಲು ಬರುವುದಿಲ್ಲ, ಇದಕ್ಕೆ ಜಿಲ್ಲಾಧಿಕಾರಿಗಳ ಅನುಮತಿ ಬೇಕೆಂದು ಮುಖ್ಯಾಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ ಕಡತ ರವಾನಿಸಿದರು. ಜಿಲ್ಲಾಧಿಕಾರಿಗಳು ಸಲ್ಲಿಸಿದ ಕಡತ ಪರಿಶೀಲಿಸಿದ ಪೌರಾಡಳಿತ ನಿರ್ದೇಶನಾಲಯ ಸಿಬ್ಬಂದಿಗೆ ಕನಿಷ್ಠ ವೇತನ ಕೊಡಲೇ ಬೇಕೆಂದು ಆದೇಶಿಸಿದರು. ಎರಡೂವರೆ ತಿಂಗಳಿಂದ ಪುರಸಭೆಯಲ್ಲಿ ಆದೇಶ ಪಾಲನೆ ಮಾಡಲೇ ಇಲ್ಲ.ಹೊಸದಾಗಿ ಬಂದ ಪುರಸಭೆ ಮುಖ್ಯಾಧಿಕಾರಿ ಮೀನಾಕ್ಷಿ ಅವರಲ್ಲಿ ನಮಗೆ ಆಗುತ್ತಿರುವ ಅನ್ಯಾಯವನ್ನು ಪ್ರಸ್ತಾಪ ಮಾಡಿದಾಗ ಇಎಸ್ ಐ ಮತ್ತು ಪಿಎಫ್ ವಂತಿಕೆ ಕಡಿತಗೊಳಿಸಿ 23 ಸಿಬ್ಬಂದಿಗೆ ಕನಿಷ್ಠ ವೇತನ ವ್ಯತ್ಯಾಸದ ಹಣ ಬಿಡುಗಡೆ ಮಾಡಿದ್ದಾರೆ. ಇದನ್ನು ಸಹಿಸದ ಕೆಲವರು, ಸಿಬ್ಬಂದಿ 20 ರಿಂದ 30 ಲಕ್ಷ ರುಪಾಯಿ ಲಂಚ ನೀಡಿ ಕನಿಷ್ಠ ವೇತನ ವ್ಯತ್ಯಾಸದ ಹಣ ಬಿಡುಗಡೆ ಮಾಡಿಸಿಕೊಂಡಿದ್ದಾರೆಂದು ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದರು.
ಸೇವೆ ಕಾಯಂ ಹೋರಾಟಕ್ಕೆ ಕೈಜೋಡಿಸಲಿ:ಸಾಮಾನ್ಯ ಸಭೆಗಳಲ್ಲಿ ಹೊರಗುತ್ತಿಗೆ ಸಿಬ್ಬಂದಿಯ ಕನಿಷ್ಠ ವೇತನ ಕುರಿತು ಚರ್ಚಿಸಿದ ತೀರ್ಮಾನಗಳು ಕಾರ್ಯಗತ ಆಗಲೇ ಇಲ್ಲ. ಕೇಸ್ ವರ್ಕರ್ ಗಳು ನಮಗೆ ಅನ್ಯಾಯ ಮಾಡುತ್ತಾ ಬಂದರೂ ಅದನ್ನು ಯಾರೂ ಕೂಡ ಪ್ರಶ್ನೆ ಮಾಡಲಿಲ್ಲ. ಈಗ ವಿರೋಧ ಮಾಡುತ್ತಿರುವ ವ್ಯಕ್ತಿಗಳು ಅಂದೇ ನಮ್ಮ ಬೆಂಬಲಕ್ಕೆ ನಿಂತಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದರು.
ಹೊರ ಗುತ್ತಿಗೆ ಸಿಬ್ಬಂದಿ 2300 ರುಪಾಯಿಗೆ ದುಡಿಯುತ್ತಿದ್ದಾಗ ಕನಿಷ್ಠ ವೇತನ ಕೊಡಬೇಕೆಂದು ಯಾರೂ ನಮ್ಮ ಬೆಂಬಲಕ್ಕೆ ನಿಲ್ಲಲಿಲ್ಲ. ಈಗ ಕನಿಷ್ಠ ವೇತನ ಮತ್ತು ಕನಿಷ್ಠ ವೇತನ ವ್ಯತ್ಯಾಸದ ಹಣಕ್ಕೂ ಕಲ್ಲು ಹಾಕಲು ಕೆಲವರು ಮುಂದಾಗಿದ್ದಾರೆ. ಇನ್ನಾದರೂ ಕಾಯಂಗಾಗಿ ನಾವು ನಡೆಸುತ್ತಿರುವ ಹೋರಾಟಕ್ಕೆ ಕೈ ಜೋಡಿಸಲಿ ಎಂದು ಶಿವಕುಮಾರ್ ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಹೊರಗುತ್ತಿಗೆ ಸಿಬ್ಬಂದಿ ನವೀನ್ , ಗಂಗಾಧರ್ , ಜಯರಾಮು, ಮುತ್ತುರಾಜು, ನಂಜಪ್ಪ, ನಾಗರಾಜು, ಚಿಕ್ಕೈದ ಮತ್ತಿತರರು ಇದ್ದರು.
-------ಗ್ರಾಮ ಪಂಚಾಯಿತಿಯಿಂದ ಮೇಲ್ದರ್ಜೆಗೇರಿರುವ ಬಿಡದಿ ಪುರಸಭೆಯಲ್ಲಿ ಗ್ರಾಪಂನಿಂದ ಹಸ್ತಾಂತರಗೊಂಡಿರುವ ಜಿಪಂನಿಂದ ಅನುಮೋದನೆಗೊಂಡಿರುವ - ಅನುಮೋದನೆಗೊಳ್ಳದಿರುವ ಸಿಬ್ಬಂದಿಗೆ ಕನಿಷ್ಠ ವೇತನದ ವ್ಯತ್ಯಾಸದ ಮೊತ್ತವನ್ನು ಪುರಸಭಾ ನಿಧಿಯಿಂದ ಪಾವತಿಸುವಂತೆ ಪೌರಾಡಳಿತ ನಿರ್ದೇಶನಾಲಯ ಸೂಚಿಸಿತ್ತು. ಅದರಂತೆ ಸಿಬ್ಬಂದಿಗೆ ಹಣ ಪಾವತಿ ಮಾಡಲಾಗಿದೆ.
- ಮೀನಾಕ್ಷಿ, ಮುಖ್ಯಾಧಿಕಾರಿಗಳು, ಪುರಸಭೆ, ಬಿಡದಿ.----- ಕಾರ್ಮಿಕ ಇಲಾಖೆಯಿಂದ ನಿಗದಿ ಪಡಿಸಲಾಗಿರುವ ಕನಿಷ್ಠ ದರಗಳ ಅನ್ವಯ ಹೊರ ಗುತ್ತಿಗೆ ಸಿಬ್ಬಂದಿಗೆ ಬಿಡದಿ ಪುರಸಭೆಯ ಸ್ವಂತ ನಿಧಿಯಿಂದಲೇ ಹಣ ಪಾವತಿಸಬೇಕು. ಇದು ಪೌರಾಡಳಿತ ನಿರ್ದೇಶನಾಲಯ ಆದೇಶವೂ ಆಗಿದೆ. ಕಳೆದ 10 ವರ್ಷಗಳಿಂದ ಸಿಬ್ಬಂದಿ ನಡೆಸುತ್ತಿದ್ದ ಹೋರಾಟಕ್ಕೆ ಮಾನವೀಯತೆ ದೃಷ್ಟಯಿಂದ ನಾವೆಲ್ಲರೂ ಬೆಂಬಲವಾಗಿ ನಿಂತಿದ್ದೇವು. ಯಾರು ಏನೇ ಅಪಪ್ರಚಾರ ಮಾಡಿಕೊಳ್ಳಲಿ ಅಭ್ಯಂತರ ಇಲ್ಲ. ಸಿಬ್ಬಂದಿಗೆ ನ್ಯಾಯ ಸಿಕ್ಕಿದ್ದಕ್ಕೆ ಖುಷಿ ಇದೆ.- ಸಿ.ಉಮೇಶ್ , ವಿಪಕ್ಷ ನಾಯಕರು, ಪುರಸಭೆ, ಬಿಡದಿ.