100 ಸಲ ಠಾಣೆಗೋದ್ರೂ ಕೇಸ್‌ ಹಾಕಲ್ಲ : ಕೋರ್ಟ್‌

KannadaprabhaNewsNetwork |  
Published : Apr 28, 2026, 01:45 AM IST
HighCourt

ಸಾರಾಂಶ

ಎರಡು ಹಸು ಕಳವಾಗಿವೆ ಎಂದು ಪ್ರಕರಣ ದಾಖಲಿಸುವ ಕರ್ನಾಟಕ ಪೊಲೀಸರು, ನೈಜ ಅಪರಾಧ ಕೃತ್ಯಕ್ಕೆ ನೂರು ಬಾರಿ ಠಾಣೆಯ ಮೆಟ್ಟಿಲೇರಿದರೂ ಪ್ರಕರಣ ದಾಖಲಿಸುವುದಿಲ್ಲ ಎಂದು ಪೊಲೀಸರ ಕಾರ್ಯನಿರ್ವಹಣೆಗೆ ಬಗ್ಗೆ ಹೈಕೋರ್ಟ್‌ ಮತ್ತೊಮ್ಮೆ ಅಸಮಾಧಾನ ಹೊರಹಾಕಿದೆ.

 ಬೆಂಗಳೂರು :  ಎರಡು ಹಸು ಕಳವಾಗಿವೆ ಎಂದು ಪ್ರಕರಣ ದಾಖಲಿಸುವ ಕರ್ನಾಟಕ ಪೊಲೀಸರು, ನೈಜ ಅಪರಾಧ ಕೃತ್ಯಕ್ಕೆ ನೂರು ಬಾರಿ ಠಾಣೆಯ ಮೆಟ್ಟಿಲೇರಿದರೂ ಪ್ರಕರಣ ದಾಖಲಿಸುವುದಿಲ್ಲ ಎಂದು ಪೊಲೀಸರ ಕಾರ್ಯನಿರ್ವಹಣೆಗೆ ಬಗ್ಗೆ ಹೈಕೋರ್ಟ್‌ ಮತ್ತೊಮ್ಮೆ ಅಸಮಾಧಾನ ಹೊರಹಾಕಿದೆ.

ಎರಡು ಹಸುಗಳನ್ನು ಕಳವು ಮಾಡಿದ ಆರೋಪದ ಮೇಲೆ ತಮ್ಮ ವಿರುದ್ಧ ಚನ್ನಪ್ಪಟ್ಟಣದ ಎಂ.ಕೆ.ದೊಡ್ಡಿ ಠಾಣಾ ಪೊಲೀಸರು ದಾಖಲಿಸಿರುವ ಪ್ರಕರಣ ರದ್ದು ಕೋರಿ ಮಂಗಳಮ್ಮ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಕಿಡಿಕಾರಿತು.

ಅರ್ಜಿದಾರರ ಪರ ವಕೀಲರು, 2024ರಲ್ಲಿ ಎರಡು ಹಸು ಕದ್ದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಚನ್ನಪಟ್ಟಣ ತಾಲ್ಲೂಕಿನ ಎಂ.ಕೆ. ದೊಡ್ಡಿ ಠಾಣೆಯಲ್ಲಿ 2026ರಲ್ಲಿ ಒಂದೇ ಕುಟುಂಬದ ನಾಲ್ವರ ವಿರುದ್ಧ (ಅರ್ಜಿದಾರರ) ಪೊಲೀಸರು ಕಳವು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿಸಿದರು.

ಅದಕ್ಕೆ ಪೀಠ, ಹಸುಗಳು ನಾಪತ್ತೆ. ಆರೋಪ ಪಟ್ಟಿ ಸಲ್ಲಿಕೆಯಾಗಿದೆಯೇ, ಅದಕ್ಕೂ ಪೊಲೀಸರು ಆರೋಪ ಪಟ್ಟಿ ಹಾಕಿ ಬಿಡ್ತಾರೆ ಎಂದು ನುಡಿಯಿತು.

ನಂತರ ಸರ್ಕಾರಿ ವಕೀಲರನ್ನು ಉದ್ದೇಶಿಸಿ, ನೀವು (ಪೊಲೀಸರು) ಹಸುಗಳ ತನಿಖೆ ಮಾಡುವುದನ್ನು ಬಿಡಿ. ನಿಜವಾದ ಅಪರಾಧದ ಹಿಂದೆ ಹೋಗಿ. ಎರಡು ವರ್ಷದ ಹಿಂದೆ ಹಸು ಕಾಣೆಯಾಗಿದೆ ಎಂದ ತಕ್ಷಣ ಅಪರಾಧ ದಾಖಲಿಸುವುದೇ? ಏನು ಬೇಕಾದರೂ ಮಾಡಿ ಬಿಡುತ್ತೀರಿ. ನಿಜವಾದ ಅಪರಾಧ ಪ್ರಕರಣವನ್ನು ನೀವು ದಾಖಲಿಸುವುದೇ ಇಲ್ಲ. ಅದಕ್ಕೆ ಜನರು ನೂರು ಬಾರಿ ಪೊಲೀಸ್‌ ಠಾಣೆ ಮೆಟ್ಟಿಲೇರಬೇಕು. ಎರಡು ವರ್ಷಗಳ ಹಿಂದೆ ಎರಡು ಹಸು ನಾಪತ್ತೆಯಾಗಿದ್ದಕ್ಕೆ ಪ್ರಕರಣ ದಾಖಲಿಸಿದ್ದೀರಿ ಎಂದು ಕಟುವಾಗಿ ನುಡಿಯಿತು.

ಅಂತಿಮವಾಗಿ 2024ರಲ್ಲಿ ಎರಡು ಹಸುಗಳು ನಾಪತ್ತೆಯಾಗಿದ್ದು, ಅವು ಪತ್ತೆಯಾಗಿಲ್ಲ ಎಂದು ಇಡೀ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದರ ತನಿಖೆಗೆ ಅನುಮತಿಸಿದರೆ, ಅದು ಕಾನೂನಿನ ದುರ್ಬಳಕೆಯಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗೆ ತಡೆ ನೀಡಲಾಗಿದೆ ಎಂದು ಮಧ್ಯಂತರ ಆದೇಶ ಮಾಡಿತು.

ಪ್ರಕರಣವೇನು?:

2026ರ ಮಾ.26ರಂದು ದಾಸಯ್ಯ ಎಂಬುವವರು ‘2024ರ ಆ.18ರಂದು ಮಧ್ಯಾಹ್ನ ತನ್ನ ಎರಡು ಸೀಮೆ ಹಸುಗಳನ್ನು ಮೇಯಲು ಕಟ್ಟಿ ಹಾಕಿ ಮನೆಗೆ ಊಟಕ್ಕೆ ಹೋಗಿದ್ದೆ. ನಂತರ ಬಂದು ನೋಡಿದಾಗ ಅವು ಇರಲಿಲ್ಲ. 2026ರ ಮಾ.25ರಂದು ತೌಟನಹಳ್ಳಿಯ ದಲ್ಲಾಡಿ ಶೇಖರನಿಗೆ ಈ ವಿಚಾರ ತಿಳಿಸಿದ್ದು, ಈತ ತಾನೇ ಆ ಹಸುಗಳನ್ನು ಮಾರಾಟ ಮಾಡಿಸಿದ್ದಾಗಿ ತಿಳಿಸಿದ್ದನು. ಈ ಹಸುಗಳನ್ನು ಮಂಗಳಮ್ಮ, ಚೇತನ್‌, ಚಂದನ್‌ ಮತ್ತು ಸೌಮ್ಯಾ ಎಂಬುವವರು ಮಾರಿಸಿಕೊಡುವಂತೆ ಕೋರಿದ್ದರು. ಒಂದು ಸಾವಿರ ರುಪಾಯಿ ಕಮಿಷನ್‌ ಪಡೆದು ಮೈಲನಾಯಕನಹೊಸಹಳ್ಳಿಯ ಹರೀಶನಿಗೆ ಮಾರಾಟ ಮಾಡಿಸಿದ್ದಾಗ ತಿಳಿಸಿದ್ದನು’ ಎಂದು ಎಂ.ಕೆ. ದೊಡ್ಡಿ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಅರ್ಜಿದಾರರ ವಿರುದ್ಧ ಬಿಎನ್‌ಎಸ್‌ 302 (2) ಅಡಿಯಲ್ಲಿ ಕಳವು ಪ್ರಕರಣ ದಾಖಲಿಸಿದ್ದರು. 

ಲೈಂಗಿಕ ಕೇಸ್‌ಗಳ ತನಿಖೆ ಬಗ್ಗೆ ಚಾಟಿ ಬೀಸಿತ್ತು ಪೀಠ:

ಈಚೆಗೆ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವಾಗ ಭದ್ರತೆ ಕಲ್ಪಿಸುವ ವಿಚಾರ ಪ್ರಸ್ತಾಪವಾದಾಗ ನ್ಯಾಯಾಲಯ, ಕರ್ನಾಟಕ ಪೊಲೀಸರು ಎಷ್ಟು ಬಲಶಾಲಿಗಳು ಎಂದರೆ ಅವರು ಲಿವ್‌ ಇನ್‌ ಸಂಬಂಧ, ದಂಪತಿಯ ಹಿಂದೆ ಹೋಗುತ್ತಾರೆ. ನೈಜ ಅಪರಾಧಗಳನ್ನು ಯಾರೂ ತನಿಖೆ ಮಾಡುತ್ತಿಲ್ಲ. ಎಲ್ಲರೂ ಬಿಎನ್‌ಎಸ್‌ ಸೆಕ್ಷನ್‌ 69ರ (ಮದುವೆ ನೆಪದಲ್ಲಿ ಲೈಂಗಿಕ ದುರ್ಬಳಕೆ ಸಂಬಂಧಿತ ಅಪರಾಧಗಳು) ಅಡಿ ಅಪರಾಧಗಳನ್ನು ಮಾತ್ರ ತನಿಖೆ ಮಾಡುತ್ತಾರೆ ಎಂದು ಕಿಡಿಕಾರಿದ್ದನ್ನು ಇಲ್ಲಿ ಸ್ಮರಿಸಬಹುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ದಕ್ಷತೆ, ಪಾರದರ್ಶಕತೆ ಇದ್ದರೆ ಸಂಘಟನೆ ಪ್ರಗತಿ: ಮಲ್ಲಿಕಾರ್ಜುನ ಬಳ್ಳಾರಿ
ಫಾಸ್ಟ್‌ಫುಡ್‌ ಬದಲು ತರಕಾರಿ, ಹಣ್ಣು ದೇಹಕ್ಕೆ ಉತ್ತಮ