ಡಾ। ಸುಧಾಕರ್‌ ವಿರುದ್ಧ ಬಲವಂತದ ಕ್ರಮ ಬೇಡ: ಕೋರ್ಟ್‌

KannadaprabhaNewsNetwork |  
Published : Aug 12, 2025, 12:30 AM ISTUpdated : Aug 12, 2025, 12:19 PM IST
Chikkaballapur MP Dr K Sudhakar

ಸಾರಾಂಶ

ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿಯ ಮುಖ್ಯ ಲೆಕ್ಕಾಧಿಕಾರಿಯ ಚಾಲಕ ಬಾಬು ಆತ್ಮಹ*ಗೆ ಸಂಬಂಧಿಸಿದ ಪ್ರಕರಣದಲ್ಲಿ ಸಂಸದ ಡಾ.ಕೆ.ಸುಧಾಕರ್‌ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಹೈಕೋರ್ಟ್‌ ಸೂಚನೆ ನೀಡಿದೆ. ಈ ಮೂಲಕ ಇದು ರಾಜಕೀಯ ಪ್ರೇರಿತವಾದ ದೂರು ಎಂಬುದು ಸಾಬೀತಾಗಿದೆ.

 ಬೆಂಗಳೂರು : ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿಯ ಮುಖ್ಯ ಲೆಕ್ಕಾಧಿಕಾರಿಯ ಚಾಲಕ ಬಾಬು ಆತ್ಮಹ*ಗೆ ಸಂಬಂಧಿಸಿದ ಪ್ರಕರಣದಲ್ಲಿ ಸಂಸದ ಡಾ.ಕೆ.ಸುಧಾಕರ್‌ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಹೈಕೋರ್ಟ್‌ ಸೂಚನೆ ನೀಡಿದೆ.

 ಈ ಮೂಲಕ ಇದು ರಾಜಕೀಯ ಪ್ರೇರಿತವಾದ ದೂರು ಎಂಬುದು ಸಾಬೀತಾಗಿದೆ. ಚಾಲಕ ಬಾಬು ಅವರ ಆತ್ಮಹ*ಗೆ  ಪ್ರಕರಣದಲ್ಲಿ ರಾಜಕೀಯ ಬೆರೆಸಿದ್ದ ಕಾಂಗ್ರೆಸ್‌ ಸರ್ಕಾರ, ಪೊಲೀಸರನ್ನು ಬಳಸಿಕೊಂಡು ಸಂಸದ ಡಾ.ಕೆ.ಸುಧಾಕರ್‌ ಅವರ ವಿರುದ್ಧ ದ್ವೇಷ ಸಾಧಿಸಿದೆ. ಯಾವುದೇ ನೇರವಾದ ಆರೋಪಗಳು ಇಲ್ಲದಿದ್ದರೂ ಸಂಸದರ ಹೆಸರನ್ನು ಎಫ್‌ಐಆರ್‌ನಲ್ಲಿ ಸೇರಿಸಿ ಎ1 ಆರೋಪಿ ಮಾಡಲಾಗಿದೆ. 

ಇದರ ನಡುವೆ ಸ್ಥಳೀಯ ಶಾಸಕ ಪ್ರದೀಪ್‌ ಈಶ್ವರ್‌ ಹಾಗೂ ಬೆಂಬಲಿಗರು ಸೇರಿಕೊಂಡು, ಚಿಕ್ಕಬಳ್ಳಾಪುರ ಸಂಸದರು ʼದಲಿತ ವಿರೋಧಿʼ ಎಂದು ಬಿಂಬಿಸಲು ಸಾರ್ವಜನಿಕ ಸ್ಥಳಗಳಲ್ಲಿ ಭಿತ್ತಿಪತ್ರಗಳನ್ನು ಅಂಟಿಸಲು ಮುಂದಾಗಿದ್ದರು. ಈಗ ಹೈಕೋರ್ಟ್‌ ನೀಡಿರುವ ನಿರ್ದೇಶನದಿಂದಾಗಿ, ಇದು ಸಂಪೂರ್ಣವಾಗಿ ರಾಜಕೀಯ ದ್ವೇಷದ ಪ್ರಕರಣ ಎಂಬುದು ಸಾಬೀತಾಗಿದೆ. ಈ ಪ್ರಕರಣದಲ್ಲಿ ಎಫ್‌ಐಆರ್‌ ರದ್ದುಗೊಳಿಸುವಂತೆ ಕೋರಿ ಸಂಸದ ಡಾ.ಕೆ.ಸುಧಾಕರ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಐ.ಅರುಣ್‌ ನೇತೃತ್ವದ ಪೀಠ ವಿಚಾರಣೆ ನಡೆಸಿದೆ.

 ಸಂಸದರ ಪರವಾಗಿ ವಾದ ಮಂಡಿಸಿದ ವಕೀಲ ಪ್ರಭುಲಿಂಗ ನಾವದಗಿ, ಮಂಜುನಾಥ್‌ ಹಾಗೂ ನಾಗೇಶ್‌ ಸಂಸದರಿಗೆ ಪರಿಚಿತರೇ ಅಲ್ಲ ಎಂದು ವಾದ ಮಾಡಿದರು. ಆಗ ಸರ್ಕಾರದ ವಿಶೇಷ ಅಭಿಯೋಜಕ ಬಿ.ಎ.ಬೆಳ್ಳಿಯಪ್ಪ ಪ್ರತಿವಾದ ಮಾಡಿ, ಅನುಮಾನದ ಮೇಲೆ ಎಫ್‌ಐಆರ್‌ ಆಗಿದ್ದು, ತನಿಖೆಗೆ ಅನುಮತಿ ನೀಡಬೇಕೆಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಹಾಗಾದರೆ ಸುಧಾಕರ್‌ ಅವರನ್ನು ಬಂಧಿಸಬಾರದು ಎಂದು ಹೇಳಿತು. 

ಹಾಗೆಯೇ, ಸರ್ಕಾರ ಮತ್ತು ದೂರುದಾರೆಗೆ ನೋಟಿಸ್‌ ಜಾರಿ ಮಾಡಿದ ನ್ಯಾಯಾಲಯ, ಸಂಸದ ಡಾ.ಕೆ.ಸುಧಾಕರ್‌ ವಿರುದ್ಧ ತನಿಖಾಧಿಕಾರಿಗಳು ಬಲವಂತದ ಕ್ರಮ ಕೈಗೊಳ್ಳಬಾರದು. ಸುಧಾಕರ್‌ ತನಿಖೆಗೆ ಸಹಕರಿಸಬೇಕು. ಹೈಕೋರ್ಟ್‌ನ ಅನುಮತಿ ಇಲ್ಲದೆಯೇ ಚಾರ್ಜ್‌ಶೀಟ್‌ ಸಲ್ಲಿಸಬಾರದು ಎಂದು ಸೂಚನೆ ನೀಡಿತು. ಕಾಂಗ್ರೆಸ್‌ ಸರ್ಕಾರದ ರಾಜಕೀಯ ಪ್ರೇರಿತ ಕ್ರಮಕ್ಕೆ ಹೈಕೋರ್ಟ್‌ನ ಈ ಸೂಚನೆ ತಡೆ ಒಡ್ಡಿದೆ.ತೀರ್ಪಿಗೆ ಸ್ವಾಗತ-ಸುಧಾಕರ್ ನ್ಯಾಯಾಲಯದ ಈ ತೀರ್ಪನ್ನು ಸ್ವಾಗತಿಸುತ್ತೇನೆ ಎಂದು ಸಂಸದ ಡಾ.ಕೆ.ಸುಧಾಕರ್‌ ಪ್ರತಿಕ್ರಿಯೆ ನೀಡಿದ್ದಾರೆ.

ನನ್ನ ವಿರುದ್ಧ ಕಾಂಗ್ರೆಸ್ ಸರ್ಕಾರ ದಾಖಲಿಸಿರುವ ಎಫ್ಐಆರ್ ರಾಜಕೀಯ ಪ್ರೇರಿತ ಎಂಬ ಅನುಮಾನ ಮಾನ್ಯ ನ್ಯಾಯಾಲಯಕ್ಕೂ ಬಂದಿದ್ದು, ಈ ಪ್ರಕರಣದಲ್ಲಿ ಇಂದು ಮಾನ್ಯ ಹೈಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇನೆ. ಈ ಪ್ರಕರಣದಲ್ಲಿ ಮೃತ ಬಾಬು ಹಾಗೂ ನನ್ನ ನಡುವೆ ಯಾವುದೇ ನೇರ ಸಂಬಂಧವಾಗಲಿ, ವ್ಯವಹಾರವಾಗಲಿ, ಹಣಕಾಸು ವಹಿವಾಟಾಗಲೀ ಇಲ್ಲ ಎನ್ನುವ ನನ್ನ ವಕೀಲರ ವಾದವನ್ನು ಮನ್ನಿಸಿರುವ ನ್ಯಾಯಪೀಠ, ನನ್ನ ಮೇಲೆ ತನಿಖಾಧಿಕಾರಿಗಳು ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು, ಬಂಧನ ಮಾಡಬಾರದು, ಮತ್ತು ಪ್ರಕರಣದ ಅಂತಿಮ ವರದಿಯನ್ನು ನ್ಯಾಯಾಲಯದ ಅನುಮತಿ ಇಲ್ಲದೆ ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಬಾರದು ಎಂದು ಆದೇಶ ನೀಡಿದೆ ಎಂದು ಅವರು ತಿಳಿಸಿದ್ದಾರೆ. 

ಕಾಂಗ್ರೆಸ್ ಸರ್ಕಾರದ ಇಬ್ಬರು ಸಚಿವರು ಮತ್ತು ಇಬ್ಬರು ಶಾಸಕರ ಮೇಲೆ ಇದೇ ರೀತಿಯ ಪ್ರಕರಣಗಳು ಕೇಳಿಬಂದಾಗ, ಅತ್ಯಂತ ಗಂಭೀರ ನೇರ ಆರೋಪಗಳು ಇದ್ದರೂ ಎಫ್ಐಆರ್ ಹಾಕದ ರಾಜ್ಯ ಸರ್ಕಾರ, ವಿರೋಧ ಪಕ್ಷಗಳ ಶಾಸಕರು, ಸಂಸದರ ಮೇಲೆ ಆರೋಪ ಬಂದಾಕ್ಷಣ ಟಾರ್ಗೆಟ್ ಮಾಡಿ ರಾಜಕೀಯ ಸೇಡು ತೀರಿಸಿಕೊಳ್ಳುವ ಹುನ್ನಾರ ನಡೆಸುತ್ತಿದೆ ಎಂದು ಅವರು ದೂರಿದ್ದಾರೆ. ಮೃತ ಬಾಬು ಬಗ್ಗೆ, ಅವರ ಕುಟುಂಬದ ಬಗ್ಗೆ ನನಗೆ ಸಹಾನುಭೂತಿ ಇದೆ. ಅವರ ಮನೆಯಲ್ಲಿ ನಡೆದ ಈ ದುರಂತದ ಬಗ್ಗೆ ವಿಷಾದವಿದೆ. ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕು ಎನ್ನುವುದು ನನ್ನ ಆಶಯ ಮತ್ತು ಹಂಬಲ ಕೂಡ. ಈ ಪ್ರಕರಣದಲ್ಲಿ ನಾನು ತನಿಖೆಗೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡುತ್ತೇನೆ. ಆದರೆ ರಾಜಕೀಯ ಕುತಂತ್ರಗಳಿಗೆ ಕಾನೂನಾತ್ಮಕವಾಗಿ, ರಾಜಕೀಯವಾಗಿ ಉತ್ತರ ಕೊಡುತ್ತೇನೆ. ಸತ್ಯಮೇವ ಜಯತೇ ಎಂದು ಅವರು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!