ಸಣ್ಣ ಹಳ್ಳದಿಂದ ಬೆಳೆಹಾನಿಯಾದರೆ ಸಿಗುತ್ತಿಲ್ಲ ಪರಿಹಾರ

KannadaprabhaNewsNetwork | Published : Jun 25, 2025 11:47 PM

ನರಗುಂದ ತಾಲೂಕಿನಲ್ಲಿ ಅತಿವೃಷ್ಟಿ ಸಂದರ್ಭದಲ್ಲಿ ಸಣ್ಣ ಹಳ್ಳದ ನೀರು ಉಕ್ಕಿ, ಅಕ್ಕಪಕ್ಕದ ಹೊಲಗಳಲ್ಲಿ ಬೆಳೆ ನಷ್ಟವಾದರೆ ಸರ್ಕಾರ ಪರಿಹಾರ ನೀಡುತ್ತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಸ್.ಜಿ. ತೆಗ್ಗಿನಮನಿ

ನರಗುಂದ: ತಾಲೂಕಿನಲ್ಲಿ ಬೆಳೆಹಾನಿ ಪರಿಹಾರ ವಿತರಣೆಯಲ್ಲಿ ತಾರಮ್ಯವಾಗುತ್ತಿದ್ದು, ಸಣ್ಣ ಹಳ್ಳದಿಂದ ಹಾನಿ ಉಂಟಾದರೆ ಪರಿಹಾರವೇ ಸಿಗುತ್ತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಅತಿವೃಷ್ಟಿಯಾದಾಗ ಬೆಣ್ಣೆಹಳ್ಳ ಹಾಗೂ ಮಲಪ್ರಭಾ ನದಿ ಪಕ್ಕದಲ್ಲಿರುವ ಹೊಲಗಳಲ್ಲಿ ಬೆಳೆಹಾನಿಯಾಗುತ್ತದೆ. ಆಗ ಅಧಿಕಾರಿಗಳು ಸಮೀಕ್ಷೆ ನಡೆಸಿ, ಪರಿಹಾರ ವಿತರಿಸುತ್ತಾರೆ. ಆದರೆ ಇದೇ ವೇಳೆ ತಾಲೂಕಿನಲ್ಲಿರುವ ಸಣ್ಣ-ಪುಟ್ಟ ಹಳ್ಳಗಳಿಂದ ಅಕ್ಕಪಕ್ಕದ ಹೊಲಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಆಗುತ್ತದೆ. ಆದರೆ ಅಧಿಕಾರಿಗಳು ಈ ಹಾನಿ ಪರಿಶೀಲನೆ ನಡೆಸುವುದಿಲ್ಲ. ರೈತರು ಮನವಿ ನೀಡಿದರೂ ಪರಿಹಾರ ಸಿಗುವುದಿಲ್ಲ ಎಂದು ರೈತರು ಹೇಳುತ್ತಾರೆ. ಹೀಗೆ ಹಲವು ವರ್ಷಗಳಿಂದ ರೈತರು ಬೆಳೆ ಹಾನಿ ಅನುಭವಿಸುತ್ತಿದ್ದು, ಅವರಿಗೆ ಪರಿಹಾರ ಮರೀಚಿಕೆಯಾಗಿಯೇ ಉಳಿದಿದೆ.

ತಾಲೂಕಿನ ಹಲವು ಗ್ರಾಮಗಳ ರೈತರ ಜಮೀನುಗಳಲ್ಲಿ ಹಾದು ಹೋಗಿರುವ ಹಳ್ಳಗಳು ಮಳೆಗಾಲದಲ್ಲಿ ಉಕ್ಕೇರಿ ಹರಿಯುತ್ತವೆ. ಈ ವರ್ಷದ ಜೂ. 12ರಂದು ಬೆಳಗಿನ ಜಾವ 6ರಿಂದ 8 ಗಂಟೆಯಲ್ಲಿ 74.6 ಮೀಲಿ ಮೀಟರ್ ಮಳೆ ಸುರಿಯಿತು. ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಓಡಾಡುವ ರಸ್ತೆಗಳಲ್ಲಿ ಹಳ್ಳದ ರೀತಿ ಮಳೆ ನೀರು ಹರಿದು ಮುಂದೆ ಈ ನೀರು ಹಳ್ಳ ಸೇರಿ ಪ್ರವಾಹವೇ ಸೃಷ್ಟಿಯಾಯಿತು. ಹಳ್ಳದ ಅಕ್ಕಪಕ್ಕದ ಜಮೀನುಗಳಲ್ಲಿ ಬಿತ್ತನೆ ಮಾಡಿದ ಬೆಳೆಗಳು ನೀರು ಪಾಲಾಯಿತು. ಈ ರೀತಿ ಸಣ್ಣ ಹಳ್ಳಗಳಿಂದ ಪ್ರವಾಹ ನೀರಿಗೆ ಜಮೀನುಗಳಲ್ಲಿ ಬೆಳೆ ಹಾನಿ ಮಾಡಿಕೊಂಡ ರೈತರಿಗೆ ಕಳೆದ ಹಲವು ವರ್ಷಗಳಿಂದ ಸರ್ಕಾರದ ಪರಿಹಾರ ಸಿಗುತ್ತಿಲ್ಲ.

ಕೆಲವು ರೈತರಿಗೆ ಪರಿಹಾರ:

ಪ್ರತಿ ವರ್ಷ ಮಳೆಯಾಗಿ ಪ್ರವಾಹ ಸೃಷ್ಟಿಯಾದಾಗ ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಕೇವಲ ಈ ತಾಲೂಕಿನ ಬೆಣ್ಣೆಹಳ್ಳ ಮತ್ತು ಮಲಪ್ರಭಾ ನದಿ ಪಕ್ಕದಲ್ಲಿರುವ ರೈತರ ಜಮೀನುಗಳಿಗೆ ಮಾತ್ರ ಭೇಟಿ ನೀಡಿ, ಹಾನಿಯಾದ ಮಾಹಿತಿಯನ್ನು ಸರ್ಕಾರಕ್ಕೆ ಕಳುಹಿಸುತ್ತಾರೆ. ಹೀಗಾಗಿ ಈ ರೈತರಿಗೆ ಮಾತ್ರ ಸರ್ಕಾರದಿಂದ ಬೆಳೆ ಹಾನಿ ಪರಿಹಾರ ಸಿಗುತ್ತಿದೆ. ಅಧಿಕಾರಿಗಳು ಸಣ್ಣ ಹಳ್ಳಗಳಿಂದ ಬೆಳೆ ಹಾನಿ ಮಾಡಿಕೊಂಡ ರೈತರ ಜಮೀನುಗಳಿಗೆ ಭೇಟಿ ನೀಡಿ, ಬೆಳೆ ಹಾನಿ ಸಮೀಕ್ಷೆ ಮಾಡಬೇಕು. ಸರ್ಕಾರಕ್ಕೆ ವರದಿ ಕಳುಹಿಸಿ ಈ ರೈತರಿಗೂ ಪರಿಹಾರ ಕೊಡಿಸಬೇಕು ಎಂಬುದು ರೈತರ ಬೇಡಿಕೆಯಾಗಿದೆ.

ಸರ್ಕಾರ ಬೆಣ್ಣೆಹಳ್ಳ ಮತ್ತು ಮಲಪ್ರಭಾ ನದಿ ಪಕ್ಕದ ಜಮೀನುಗಳಿಗೆ ಪರಿಹಾರದ ಜತೆಗೆ ಸಣ್ಣ ಹಳ್ಳಿಗಳಿಂದ ಬೆಳೆ ಹಾನಿ ಮಾಡಿಕೊಂಡ ರೈತರಿಗೂ ಪರಿಹಾರ ನೀಡಬೇಕು. ಇಲ್ಲದಿದ್ದರೆ ಪರಿಹಾರ ಸಿಗದ ರೈತರು ಸರ್ಕಾರ ವಿರುದ್ಧ ಹೋರಾಟಕ್ಕೆ ಇಳಿಯುತ್ತಾರೆ ಎಂದು ಕರ್ನಾಟಕ ರೈತ ಸೇನೆ ರಾಜ್ಯ ಅಧ್ಯಕ್ಷ ಶಂಕ್ರಣ್ಣ ಅಂಬಲಿ ಹೇಳುತ್ತಾರೆ.

ಮಳೆಯಿಂದ ಸಣ್ಣ ಹಳ್ಳದ ಪಕ್ಕದ ಜಮೀನುಗಳಲ್ಲಿ ಬೆಳೆ ಹಾನಿ ಮಾಡಿಕೊಂಡ ರೈತರು ಪರಿಹಾರ ನೀಡಬೇಕು ಎಂದು ಮನವಿ ನೀಡಿದರೆ, ಆ ಮನವಿಯನ್ನು ಮೇಲಧಿಕಾರಿಗಳಿಗೆ ಕಳುಹಿಸಿ ಕ್ರಮ ತೆಗೆದು ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್‌ ಶ್ರೀಶೈಲ ತಳವಾರ ಹೇಳಿದರು.