ಎಚ್‌ಡಿಕೆಗೆ ಶಕ್ತಿ ನೀಡಿದ ಜನತೆಯಲ್ಲಿ ಮರೆಯಲ್ಲ: ನಿಖಿಲ್ ಕುಮಾರಸ್ವಾಮಿ

KannadaprabhaNewsNetwork |  
Published : Jun 25, 2025, 11:47 PM IST
ಕೆ ಕೆ ಪಿ ಸುದ್ದಿ 03: ಜೆಡಿಎಸ್ ಪಕ್ಷದ ಡಿಜಿಟಲ್ ಸದಸ್ಯತ್ವ ನೋಂದಣಿಗೆ ಚಾಲನೆ.  | Kannada Prabha

ಸಾರಾಂಶ

ರಾಮನಗರ ಜಿಲ್ಲೆ ಜನತೆ ನಮ್ಮ ಕುಟುಂಬಕ್ಕೆ ರಾಜಕೀಯವಾಗಿ ಕಳೆದ 30 ವರ್ಷದಿಂದ ದೇವೇಗೌಡರು, ಕುಮಾರಸ್ವಾಮಿ ಅವರನ್ನು ರಾಜಕೀಯವಾಗಿ ಬೆಳೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಕನಕಪುರ

ದೇವೇಗೌಡರು ಹಾಗೂ ಕುಮಾರಸ್ವಾಮಿಯವರಿಗೆ ಶಕ್ತಿ ನೀಡಿದ ಈ ತಾಲೂಕಿನ ಜನತೆಯನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಜೆಡಿಎಸ್ ಪಕ್ಷದ ಯುವ ನಾಯಕ ಹಾಗೂ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ನಗರದಲ್ಲಿ ಜೆಡಿಎಸ್ ಪಕ್ಷದ ಡಿಜಿಟಲ್ ಸದಸ್ಯತ್ವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಮನಗರ ಜಿಲ್ಲೆ ಜನತೆ ನಮ್ಮ ಕುಟುಂಬಕ್ಕೆ ರಾಜಕೀಯವಾಗಿ ಕಳೆದ 30 ವರ್ಷದಿಂದ ದೇವೇಗೌಡರು, ಕುಮಾರಸ್ವಾಮಿ ಅವರನ್ನು ರಾಜಕೀಯವಾಗಿ ಬೆಳೆಸಿದ್ದಾರೆ. ಕಳೆದ ಚುನಾವಣೆಯಲ್ಲಿ ಸೋತರೂ ಕೂಡ ಮನೆಯಲ್ಲಿ ಕೂರದೇ ಜನರಿಗಾಗಿ ಕೆಲಸ ಮಾಡುತ್ತೇವೆ ಎಂದರು.ರಾಜ್ಯ ಸರ್ಕಾರದ ವಿರುದ್ಧ ತಮ್ಮ ಸ್ವಪಕ್ಷದ ನಾಯಕರೇ ಸಚಿವರ ವಿರುದ್ಧ ಭ್ರಷ್ಟಾಚಾರ ಹಾಗೂ ಬೇಜವಾಬ್ದಾರಿ ತನದ ಬಗ್ಗೆ ಮಾತನಾಡುತ್ತಿದ್ದು, ಖುದ್ದು ಭೇಟಿ ಆಗಲು ಸಹ ಆಗುತ್ತಿಲ್ಲ. ಮಧ್ಯವರ್ತಿಗಳ ಮೂಲಕ ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸುವಷ್ಟರ ಮಟ್ಟಿಗೆ ಕೈ ನಾಯಕರು ಅಸಹಾಯಕರಾಗಿದ್ದು ಸರ್ಕಾರದ ಆಡಳಿತವು ಎಲ್ಲಿಗೆ ಬಂದಿದೆ ಎಂದು ಕಾಂಗ್ರೆಸ್ ಪಕ್ಷದವರೇ ಹೇಳುತ್ತಿದ್ದು ನಮ್ಮ ರಾಜ್ಯವನ್ನು ಇವರು ಎಲ್ಲಿಗೆ ತೆಗೆದುಕೊಂಡು ಹೋಗಿ ನಿಲ್ಲಿಸುತ್ತಾರೋ ಅ ದೇವರೇ ಬಲ್ಲ ಎಂದು ವ್ಯಂಗ್ಯವಾಡಿದರು. ಹಾಲಿನ ಡೈರಿ ಚುನಾವಣೆಯಲ್ಲಿ ಆಡಳಿತ ಸರ್ಕಾರ ಹಾಗೂ ಈ ಭಾಗದ ಮಾಜಿ ಸಂಸದರು ತಮ್ಮ ಪಕ್ಷದ ಸದಸ್ಯರ ಗೆಲುವಿಗಾಗಿ 17 ಜೆಡಿಎಸ್ ಬೆಂಬಲಿತ ಡೈರಿಗಳನ್ನು ಸೂಪರ್ ಸೀಡ್ ಮಾಡಿದಲ್ಲದೆ ನಮ್ಮ ಪಕ್ಷದ ಅಭ್ಯರ್ಥಿ ಜಯಮುತ್ತು ಚುನಾವಣೆಗೆ ನಿಲ್ಲದಂತೆ ಷಡ್ಯಂತ್ರ ರೂಪಿಸಿ ವಾಮಮಾರ್ಗದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದು ಅವರ ಕೀಳು ಮಟ್ಟದ ರಾಜಕೀಯ ತಂತ್ರಕ್ಕೆ ಸಾಕ್ಷಿಯಾಗಿದೆ, ಇಂತಹ ಅಸಹ್ಯ, ಕಾನೂನು ಬಾಹಿರ ಚುನಾವಣೆ ಎಂದಿಗೂ ನಡೆದಿರಲಿಲ್ಲ, ಜೆಡಿಎಸ್ ಅಭ್ಯರ್ಥಿ ಜಯಮುತ್ತು ಸೋಲಿಗೆ ಕಾಂಗ್ರೆಸ್‌ ಪಕ್ಷದ ಅ ಮಹಾನಾಯಕರೇ ಕಾರಣ ಎಂದು ಪರೋಕ್ಷವಾಗಿ ಡಿ.ಕೆ. ಸುರೇಶ್ ವಿರುದ್ಧ ವಾಗ್ದಾಳಿ ನಡೆಸಿದರು. ನಾವು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ ಕಾಲಚಕ್ರ ಉರುಳುತ್ತಿದ್ದು ಮುಂದೆ ನಮಗೆ ರಾಜ್ಯ ಹಾಗೂ ಜಿಲ್ಲೆಯ ಜನ ಆಶಿರ್ವಾದ ಮಾಡುತ್ತಾರೆ ಎಂದು ವಿಶ್ವಾಸವಿದ್ದು ಯಾವುದೋ ಒಂದು ಚುನಾವಣೆ ಸೋತ ತಕ್ಷಣ ನಾವು ಕ್ಷೇತ್ರ ಬಿಟ್ಟು ಹೋಗಲ್ಲ. ಇಂಥ ಸಾಕಷ್ಟು ಸೋಲುಗಳನ್ನು ನಮ್ಮ ಕುಟುಂಬ ನೋಡಿದ್ದು ನೀವು ಬೆಳೆಸಿರೋ ಮಕ್ಕಳು ನಾವು, ಇದು ನಮ್ಮ ಜಿಲ್ಲೆ, ಯಾವ ಕಾರಣಕ್ಕೂ ನಾವು ಪಲಾಯನವಾದ ಮಾಡಲ್ಲ, ಕಾಲಚಕ್ರ ತಿರುಗುತ್ತಿದೆ.ಸಾರ್ವತ್ರಿಕ ಚುನಾವಣೆ ಗಮನದಲ್ಲಿಟ್ಟುಕೊಂಡು ಈ ಸದಸ್ಯತ್ವ ಅಭಿಯಾನಕ್ಕೆ ನಾವು ಬಂದಿಲ್ಲ. ಡಿಸೆಂಬರ್‌ನಲ್ಲಿ ಬರುವ ಗ್ರಾಪಂ ಹಾಗೂ ಜಿಪಂ ಚುನಾವಣೆಯಲ್ಲಿ ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಹುರಿದುಂಬಿಸುವ ಕೆಲಸ ಮಾಡಬೇಕಾಗಿದ್ದು ನಾವೆಲ್ಲರೂ ಒಗ್ಗೂಡಿ ಹೋದರೆ ಗೆಲುವು ನಮಗೆ ದೊರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು.

ಜೆಡಿಎಸ್ ಜಿಲ್ಲೆಯಲ್ಲಿ ಎಲ್ಲಿದೆ ಎಂದು ಕುಹಕವಾಡಿದ್ದ ಅಗ್ರ ನಾಯಕರಿಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಮೈತ್ರಿ ಅಭ್ಯರ್ಥಿಗೆ ಅತಿ ಹೆಚ್ಚು ಮತ ನೀಡಿ ಜಯಗಳಿಸುವ ಮೂಲಕ ತಕ್ಕ ಉತ್ತರ ನೀಡಿದ್ದಾರೆ ಎಂದು ಮಾಜಿ ಶಾಸಕ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎ. ಮಂಜು ತಿಳಿಸಿದರು.

ಅಭಿವೃದ್ಧಿಗೆ ಶ್ರಮಿಸಿದ್ದನ್ನು ಯಾರು ಮರೆಯುವಂತಿಲ್ಲ:

ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಸ್ವಾಭಿಮಾನಿ ಕಾರ್ಯಕರ್ತರ ಪಡೆಯನ್ನು ಹೊಂದಿದ್ದು ಒಬ್ಬೊಬ್ಬರೂ ದೇವೇಗೌಡರು, ಕುಮಾರಸ್ವಾಮಿಯಂತೆ ನಿಂತು ಪಕ್ಷವನ್ನು ಕಟ್ಟಿ ಬೆಳೆಸಿದ್ದು ಅವರು ನೀಡಿದ ಶಕ್ತಿಯಿಂದ ಕುಮಾರಣ್ಣ ಶಾಸಕರಾಗಿ, ಮುಖ್ಯಮಂತ್ರಿಯಾಗಿ ರಾಮನಗರ ಜಿಲ್ಲೆಯನ್ನು ಸ್ಥಾಪನೆ ಮಾಡಿ ಇಡೀ ಜಿಲ್ಲೆಯ ಜನರ ಅಭಿವೃದ್ಧಿಗೆ ಶ್ರಮಿಸಿದ್ದನ್ನು ಯಾರು ಮರೆಯುವಂತಿಲ್ಲ ಎಂದರು.

ಪಕ್ಷದ ಕಾರ್ಯಕರ್ತರು,ನಾಯಕರು ಯಾವುದೇ ಅಂಜಿಕೆ, ಭಯಪಡದೆ ನಮ್ಮ ಪಕ್ಷದ ಯುವ ನಾಯಕ ನಿಖಿಲ್ ಕುಮಾರ್ ಸ್ವಾಮಿ ಯವರ ಕನಸಿನಂತೆ ಇಡೀ ರಾಜ್ಯದಲ್ಲಿ ಪಕ್ಷಕ್ಕೆ ಯುವಕರನ್ನು ಹೆಚ್ಚು ಹೆಚ್ಚಾಗಿ ಸೇರ್ಪಡೆ ಮಾಡಲು ಮುಂದಾಗಬೇಕಾಗಿದೆ. ಈ ತಾಲೂಕಿನಲ್ಲಿ ನೀವೆಲ್ಲರೂ ಅತೀ ಉತ್ಸಾಹದಿಂದ ಮುನ್ನುಗ್ಗಿ ಕನಿಷ್ಠ 60 ಸಾವಿರ ಸದಸ್ಯತ್ವವನ್ನು ಮಾಡಿಸಿದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಗೆಲುವು ಶತಸಿದ್ಧ ಎಂದು ತಿಳಿಸಿದರು.ಸಮಾರಂಭಕ್ಕೂ ಮುನ್ನ ನಗರದ ಚನ್ನಬಸಪ್ಪ ವೃತ್ತದಲ್ಲಿ ಪಕ್ಷದ ನೂರಾರು ಕಾರ್ಯಕರ್ತರು ಯುವ ನಾಯಕ ನಿಖಿಲ್ ಕುಮಾರಸ್ವಾಮಿಗೆ ಬೃಹತ್ ಸೇಬಿನ ಹಾರವನ್ನು ಹಾಕಿ ಬೈಕ್ ಜಾಥಾ ಮೂಲಕ ಜಯಘೋಷದೊಂದಿಗೆ ವೇದಿಕೆಗೆ ಕರೆತಂದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಬಿ. ನಾಗರಾಜು, ಮಾಜಿ ಅಧ್ಯಕ್ಷ ಸಿಗ್ದಮರೀಗೌಡ, ರಾಜ್ಯ ಉಪಾಧ್ಯಕ್ಷ ಚಿನ್ನಸ್ವಾಮಿ, ಮುಖಂಡರಾದ ಪುಟ್ಟರಾಜು, ರತ್ನಮ್ಮ, ದಿಶಾ ಸಮಿತಿ ಸದಸ್ಯರಾದ ರಾಜೇಶ್, ಶೋಭಾ, ಮರಳವಾಡಿ ಉಮಾಶಂಕರ್, ನಲ್ಲಹಳ್ಳಿ ಶಿವಕುಮಾರ್ ಕಬ್ಬಾಳೇಗೌಡ, ಬಿಜೆಪಿ ತಾಲೂಕು ಅಧ್ಯಕ್ಷ ಕೆ.ಪಿ. ಕುಮಾರ್, ನಗರಸಭಾ ಸದಸ್ಯ ಸ್ಟೂಡಿಯೋ ಚಂದ್ರು, ಲೋಕೇಶ್ ಭಾಗಿಯಾಗಿದ್ದರು.

ಕೆ ಕೆ ಪಿ ಸುದ್ದಿ 03: ಜೆಡಿಎಸ್ ಪಕ್ಷದ ಡಿಜಿಟಲ್ ಸದಸ್ಯತ್ವ ನೋಂದಣಿಗೆ ಚಾಲನೆ ನೀಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ