ಪ್ರತಿ ಹೆಕ್ಟೇರ್‌ಗೆ ₹10 ಸಾವಿರ ಅತಿವೃಷ್ಟಿ ಪರಿಹಾರ ನೀಡಿ: ವಿರೂಪಾಕ್ಷಪ್ಪ ಬಳ್ಳಾರಿ

KannadaprabhaNewsNetwork |  
Published : Jun 25, 2025, 11:47 PM IST
ಮ | Kannada Prabha

ಸಾರಾಂಶ

ಜಿಲ್ಲೆಯ ಬಹುತೇಕ ಕಡೆಗಳಲ್ಲಿ ವಾಡಿಕೆಗಿಂತ ಶೇ. 75ರಷ್ಟು ಹೆಚ್ಚು ಪ್ರಮಾಣದಲ್ಲಿ ಮಳೆಯಾಗಿದೆ. ಬಿತ್ತನೆ ಮಾಡಿದ ಬೀಜ ಮೊಳಕೆಯೊಡೆದು ಸಸಿಗಳು ಸಾಯುತ್ತಿವೆ. ಆದರೆ ರೈತರು ಮೊದಲು ಬಿತ್ತನೆಗೆ ವ್ಯಯಿಸಿದ್ದ ಹಣ ವ್ಯರ್ಥವಾಗಿದ್ದು, ಮರು ಬಿತ್ತನೆಗೆ ಮುಂದಾಗಿರುವ ರೈತರ ನೆರವಿಗೆ ಸರ್ಕಾರ ಬರಬೇಕಾಗಿದೆ.

ಬ್ಯಾಡಗಿ: ಅತಿವೃಷ್ಟಿಯಿಂದಾಗಿ ಜಿಲ್ಲೆಯ ಶೇ. 70ರಷ್ಟು ರೈತರು ಕಂಗಾಲಾಗಿದ್ದು, ಮರುಬಿತ್ತನೆ ಮಾಡದೇ ವಿಧಿಯಿಲ್ಲ. ಕೂಡಲೇ ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸಿ ಪ್ರತಿ ಹೆಕ್ಟೇರ್‌ಗೆ ₹10 ಸಾವಿರ ಅತಿವೃಷ್ಟಿ ಪರಿಹಾರ ಘೋಷಿಸುವಂತೆ ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಆಗ್ರಹಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಬಹುತೇಕ ಕಡೆಗಳಲ್ಲಿ ವಾಡಿಕೆಗಿಂತ ಶೇ. 75ರಷ್ಟು ಹೆಚ್ಚು ಪ್ರಮಾಣದಲ್ಲಿ ಮಳೆಯಾಗಿದೆ. ಬಿತ್ತನೆ ಮಾಡಿದ ಬೀಜ ಮೊಳಕೆಯೊಡೆದು ಸಸಿಗಳು ಸಾಯುತ್ತಿವೆ. ಆದರೆ ರೈತರು ಮೊದಲು ಬಿತ್ತನೆಗೆ ವ್ಯಯಿಸಿದ್ದ ಹಣ ವ್ಯರ್ಥವಾಗಿದ್ದು, ಮರು ಬಿತ್ತನೆಗೆ ಮುಂದಾಗಿರುವ ರೈತರ ನೆರವಿಗೆ ಸರ್ಕಾರ ಬರಬೇಕಾಗಿದೆ ಎಂದರು.

ಸರ್ಕಾರದಿಂದಲೇ ಸಾಕ್ಷಿ ಬಿಡುಗಡೆ: ಮಳೆಯು ಹೆಚ್ಚಾಗಿ ಬೆಳೆ ನಾಶವಾಗುತ್ತಿರುವುದಕ್ಕೆ ಜಿಲ್ಲೆಯಲ್ಲಿರುವ ಎಲ್ಲ ಸಹಾಯಕ ಕೃಷಿ ನಿರ್ದೇಶಕರು ಕೃಷಿಭೂಮಿಗಳಲ್ಲಿ ನೀರು ನಿಲ್ಲದಂತೆ ಬಸಿಗಾಲುವೆ ಮಾಡಲು ರೈತರಿಗೆ ಸಲಹೆ ನೀಡುತ್ತಿದ್ದಾರೆ. ಬಿತ್ತನೆ ಹಾನಿಯಾದ ಬಗ್ಗೆ ಮತ್ತೆ ಸರ್ವೇ ಮಾಡುವ ಅವಶ್ಯಕತೆಯಿಲ್ಲ. ಕೂಡಲೇ ಡಿಬಿಟಿ ಮೂಲಕ ಪ್ರತಿ ಹೆಕ್ಟೇರ್‌ಗೆ ₹10 ಸಾವಿರ ಪರಿಹಾರ ನೀಡುವಂತೆ ಆಗ್ರಹಿಸಿದರು.ಬೆಳೆವಿಮೆ ತುಂಬುವ ಅವಧಿ ವಿಸ್ತರಿಸಿ: ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಣ್ಣ ಶೆಟ್ಟರ ಮಾತನಾಡಿ, ಬೆಳೆವಿಮೆ ತುಂಬಲು ನಿಯಮದಂತೆ ಬಿತ್ತನೆ ಮಾಡಿ ಕನಿಷ್ಠ ಒಂದು ತಿಂಗಳಾಗಿರಬೇಕು. ಆದರೆ ಪ್ರಸ್ತುತ ಬಿತ್ತನೆ ಮಾಡಿದ ಕಾಳುಗಳು ಭೂಮಿಯ ಮೇಲೆಯೇ ಬಂದಿಲ್ಲ. ಕಾರಣ ಕೂಡಲೇ ಬೆಳೆವಿಮೆ ತುಂಬುವ ಅವಧಿಯನ್ನು ವಿಸ್ತರಿಸಬೇಕು. ಬೆಳೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಗತ್ಯವಿರುವ ಗೊಬ್ಬರಗಳ ಬಿತ್ತನೆ ಮಾಡುವಂತೆ ಆಗ್ರಹಿಸಿದರು.

ಅಪರಾಧಿಗಳಿಗೆ ಆಶ್ರಯ: ಬಿಜೆಪಿ ತಾಲೂಕಾಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟಿ ಮಾತನಾಡಿ, ಅನಧಿಕೃತವಾಗಿ ಗಾಂಜಾ ಮಾರಾಟ ಸೇರಿದಂತೆ ಮಟಕಾ ದಂಧೆ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿದೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಒಂದು ಸಮುದಾಯದ ಜನರು ಅಪರಾಧ ಪ್ರಕರಣಗಳಲ್ಲಿ ನಿರಂತರವಾಗಿ ಭಾಗಿಯಾಗುತ್ತಿದ್ದು, ಜಿಲ್ಲೆಯಲ್ಲಿ ಹೇಳುವವರು ಕೇಳುವವರು ಇಲ್ಲದಂತಾಗಿದೆ ಎಂದು ಆರೋಪಿಸಿದರು.

ಪುರಸಭೆ ಉಪಾಧ್ಯಕ್ಷ ಸುಭಾಸ್ ಮಾಳಗಿ, ಮುಖಂಡ ಶಿವಬಸಣ್ಣ ಕುಳೇನೂರ ಮಾತನಾಡಿದರು. ಮುಖಂಡರಾದ ಶಂಕರಗೌಡ ಪಾಟೀಲ(ಬುಡಪನಹಳ್ಳಿ), ಸುರೇಶ ಅಸಾದಿ, ಶಂಕ್ರಪ್ಪ ಅಕ್ಕಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ವಿಜಯ ಮಾಳಗಿ, ಪುರಸಭೆ ಮಾಜಿ ಸದಸ್ಯ ಸುರೇಶ ಉದ್ಯೋಗಣ್ಣನವರ, ಬಿಜೆಪಿ ಮಾಜಿ ತಾಲೂಕಾಧ್ಯಕ್ಷ ಎಚ್.ಎಸ್. ಜಾಧವ, ಮಂಜುನಾಥ ಹೊನ್ನಾಳಿ, ಪ್ರವೀಣ ಪಾಟೀಲ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ: ಶಾಸಕ ಯೋಗೇಶ್ವರ್‌
ಕೋಗಿಲು ಕ್ರಾಸ್‌ ಸಂತ್ರಸ್ತರಲ್ಲಿ 26 ಮಂದಿ ಬಳಿಯಷ್ಟೇ ಸೂಕ್ತ ದಾಖಲೆ