ಸವಣೂರು: ತಾಲೂಕಿನ ಮಣ್ಣೂರು ಗ್ರಾಮದ ಅಂಗನವಾಡಿಗೆ ಕಳೆದ 3 ತಿಂಗಳಿನಿಂದ ಕಳಪೆ ಆಹಾರ ಪೂರೈಕೆ ಮಾಡಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ಸಿಡಿಪಿಒ ಉಮಾ ಕೆ.ಎಸ್. ಅವರನ್ನು ತರಾಟೆಗೆ ತೆಗೆದುಕೊಂಡರು.
ಪೂರೈಕೆ ಮಾಡಿದ ಆಹಾರ ಪದಾರ್ಥಗಳನ್ನು ಸರ್ಕಾರಿ ಪ್ರಯೋಗಾಲಯಕ್ಕೆ ಕಳುಹಿಸದೆ ಖಾಸಗಿ ಪ್ರಯೋಗಾಲಯದಲ್ಲಿ ಗುಣಮಟ್ಟವನ್ನು ಪರೀಕ್ಷಿಸಿ ಎರಡು ವರದಿಯನ್ನು ನೀಡಬೇಕು. ವರದಿಯಲ್ಲಿ ಆಹಾರ ಕಳಪೆ ಎಂದು ಸಾಬೀತಾದರೆ ಸಿಡಿಪಿಒ ಹಾಗೂ ಎಂಎಸ್‌ಪಿಸಿ ಅಧ್ಯಕ್ಷೆ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಬೇಕು. ಅಲ್ಲಿಯವರೆಗೂ ಅಂಗನವಾಡಿ ಕೇಂದ್ರವನ್ನು ಬಂದ್ ಮಾಡುವುದಾಗಿ ಸಾರ್ವಜನಿಕರು ಎಚ್ಚರಿಸಿದರು.
ಸಾರ್ವಜನಿಕರ ಮಾತಿಗೆ ಬೆಲೆ ಕೊಡದೆ ಇಲಾಖೆ ಅಧಿಕಾರಿ ಮಾತ್ರ ನನಗೂ ಅಂಗನವಾಡಿ ಕೇಂದ್ರದಲ್ಲಿ ನಡೆದ ಸಮಸ್ಯೆಗೂ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ವಾಹನದಲ್ಲಿ ವಾಪಸ್ ತೆರಳಿದರು. ಇದು ಸಾರ್ವಜನಿಕರಿಗೆ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಯಿತು.ಈ ಸಂದರ್ಭದಲ್ಲಿ ನಂದೀಶಗೌಡ ಪಾಟೀಲ, ಈರನಗೌಡ ನಾಗನಗೌಡ್ರ, ಸಿದ್ದಪ್ಪ ಹರಕೂಣಿ, ಭರಮಪ್ಪ ಉಳ್ಳಟ್ಟಿ, ಶಿವಪ್ಪ ಉಳ್ಳಟ್ಟಿ, ಸುರೇಶ ಉಳ್ಳಟ್ಟಿ, ಮಲ್ಲೇಶಪ್ಪ ವಟವಟಿ, ಅಣ್ಣಪ್ಪಗೌಡ ಪಾಟೀಲ, ಮಹೇಶ ವಟವಟಿ, ರಾಜು ಉಳ್ಳಟ್ಟಿ, ಶಂಕರಗೌಡ ಪಾಟೀಲ, ಶಿವಪ್ಪ ಉಳ್ಳಟ್ಟಿ, ವೀರಭದ್ರಗೌಡ ಪಾಟೀಲ, ಸಿದ್ದಪ್ಪ ಗುಡಗೇರಿ, ಈಶ್ವರ ಅಣ್ಣಿಗೇರಿ ಸೇರಿದಂತೆ ಗ್ರಾಮಸ್ಥರು ಇದ್ದರು.