ಶಿರಹಟ್ಟಿ ತಾಲೂಕಿನಲ್ಲಿ ಬೆಳೆವಿಮೆ ಕಂತು ಪಾವತಿಸಿದ ರೈತರಿಗಿಲ್ಲ ಪರಿಹಾರ!

KannadaprabhaNewsNetwork |  
Published : Aug 20, 2026, 02:15 AM IST
ಸಾಂದರ್ಭಿಕ ಚಿತ್ರ. | Kannada Prabha

ಸಾರಾಂಶ

ತಾಲೂಕಿನಲ್ಲಿ ೨೦೨೫- ೨೬ನೇ ಸಾಲಿನಲ್ಲಿ ೧೬೮೧೫ ರೈತರು ಬೆಳೆವಿಮೆ ಕಂತು ಕಟ್ಟಿದ್ದಾರೆ. ಒಟ್ಟು ೧೬೨೬೪ ಹೆಕ್ಟೇರ್ ಪ್ರದೇಶದಲ್ಲಿ ರೈತರಿಂದ ನೋಂದಣಿಯಾಗಿವೆ. ಅಲ್ಲದೇ ತಾಲೂಕಿನಲ್ಲಿ 2025- 26ನೇ ಸಾಲಿನಲ್ಲಿ ₹10 ಕೋಟಿ ಬೆಳೆವಿಮೆ ಹಣ ಬಿಡುಗಡೆಯಾಗಿದೆ. ಆದರೆ ಬಹಳಷ್ಟು ರೈತರು ಬೆಳೆವಿಮೆ ಕಂತು ಕಟ್ಟಿದ್ದರೂ ಪರಿಹಾರ ಲಭಿಸಿಲ್ಲ.

ಮಹದೇವಪ್ಪ ಎಂ. ಸ್ವಾಮಿಶಿರಹಟ್ಟಿ: ಬೆಳೆನಷ್ಟದಿಂದ ರೈತರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ಉದ್ದೇಶದಿಂದ ಜಾರಿಗೊಳಿಸಿರುವ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿಯೇ ಅಕ್ರಮ ಹಾಗೂ ಲೋಪದೋಷಗಳ ಆರೋಪಗಳು ಕೇಳಿಬರುತ್ತಿದ್ದು, ವಿಮೆಕಂತು ಪಾವತಿಸಿದ ಅನೇಕ ರೈತರಿಗೆ ಬೆಳೆನಷ್ಟ ಪರಿಹಾರ ಸಿಗದೆ ಪರದಾಡುತ್ತಿದ್ದಾರೆ.ತಾಲೂಕಿನಲ್ಲಿ ೨೦೨೫- ೨೬ನೇ ಸಾಲಿನಲ್ಲಿ ೧೬೮೧೫ ರೈತರು ಬೆಳೆವಿಮೆ ಕಂತು ಕಟ್ಟಿದ್ದಾರೆ. ಒಟ್ಟು ೧೬೨೬೪ ಹೆಕ್ಟೇರ್ ಪ್ರದೇಶದಲ್ಲಿ ರೈತರಿಂದ ನೋಂದಣಿಯಾಗಿವೆ. ಅಲ್ಲದೇ ತಾಲೂಕಿನಲ್ಲಿ 2025- 26ನೇ ಸಾಲಿನಲ್ಲಿ ₹10 ಕೋಟಿ ಬೆಳೆವಿಮೆ ಹಣ ಬಿಡುಗಡೆಯಾಗಿದೆ. ಆದರೆ ಬಹಳಷ್ಟು ರೈತರು ಬೆಳೆವಿಮೆ ಕಂತು ಕಟ್ಟಿದ್ದರೂ ಪರಿಹಾರ ಲಭಿಸಿಲ್ಲ.

ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಬೆಳೆಹಾನಿಗೊಳಗಾದ ರೈತರು ನಿಯಮಾನುಸಾರ ವಿಮಾ ಕಂತನ್ನೂ ಪಾವತಿಸಿದ್ದಾರೆ. ಆದರೆ ಬೆಳೆನಷ್ಟ ಸಂಭವಿಸಿದ ಬಳಿಕ ಪರಿಹಾರ ಪಡೆಯಲು ಮುಂದಾದಾಗ ವಿವಿಧ ಕಾರಣಗಳನ್ನು ನೀಡಿ ಪರಿಹಾರ ನಿರಾಕರಿಸಲಾಗುತ್ತಿದೆ ಎಂಬ ಆರೋಪ ರೈತರಿಂದ ಕೇಳಿಬರುತ್ತಿದೆ.

ಅಧಿಕಾರಿಗಳು ಕೆಲವೆಡೆ ಬೆಳೆ ನಷ್ಟದ ವಾಸ್ತವಿಕ ಪ್ರಮಾಣವನ್ನು ಸಮರ್ಪಕವಾಗಿ ದಾಖಲಿಸಿಲ್ಲ. ಇನ್ನೂ ಕೆಲವು ಪ್ರದೇಶಗಳಲ್ಲಿ ಬೆಳೆ ಕಟಾವು ಪ್ರಯೋಗ, ಬೆಳೆ ಪರಿಶೀಲನೆ ಹಾಗೂ ನಷ್ಟದ ಅಂದಾಜು ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕೊರತೆಯಿದೆ ಎಂಬ ದೂರುಗಳಿವೆ. ಇದರಿಂದ ನಿಜವಾಗಿಯೂ ಬೆಳೆನಷ್ಟ ಅನುಭವಿಸಿದ ರೈತರು ಪರಿಹಾರದಿಂದ ವಂಚಿತರಾಗುತ್ತಿದ್ದಾರೆ.ಬೆಳೆವಿಮೆ ಯೋಜನೆಯ ಮೂಲ ಉದ್ದೇಶವೇ ಪ್ರಕೃತಿ ವಿಕೋಪ, ಅತಿವೃಷ್ಟಿ, ಅನಾವೃಷ್ಟಿ, ಕೀಟ ಹಾಗೂ ರೋಗಬಾಧೆಯಿಂದ ಬೆಳೆ ನಷ್ಟ ಅನುಭವಿಸುವ ರೈತರಿಗೆ ಆರ್ಥಿಕ ಭದ್ರತೆ ಒದಗಿಸುವುದು. ಆದರೆ ವಿಮೆಕಂತು ಕಟ್ಟಿದರೂ ನಷ್ಟ ಸಂಭವಿಸಿದ ಸಂದರ್ಭದಲ್ಲಿ ಪರಿಹಾರ ನೀಡಲು ವಿಳಂಬ ಮಾಡುವುದು ಅಥವಾ ನಿರಾಕರಿಸುವುದರಿಂದ ಯೋಜನೆಯ ಉದ್ದೇಶವೇ ಪ್ರಶ್ನಾರ್ಹವಾಗುತ್ತಿದೆ.

ರೈತರ ಒತ್ತಾಯ: ವಿಮೆ ಕಂತು ಪಾವತಿಸಿದ ಎಲ್ಲ ರೈತರ ಅರ್ಜಿಗಳನ್ನು ಮರುಪರಿಶೀಲಿಸಿ, ನಿಜವಾದ ಬೆಳೆ ನಷ್ಟಕ್ಕೆ ಅನುಗುಣವಾಗಿ ಪರಿಹಾರ ನೀಡಬೇಕು. ಬೆಳೆ ನಷ್ಟದ ಸಮೀಕ್ಷೆ, ಬೆಳೆ ಕಟಾವು ಪ್ರಯೋಗ ಹಾಗೂ ಪರಿಹಾರ ನಿರ್ಧಾರ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸಬೇಕು. ವಿಮಾ ಕಂಪನಿಗಳು, ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆ ಹಾಗೂ ಸಂಬಂಧಿಸಿದ ಅಧಿಕಾರಿಗಳ ಕಾರ್ಯವೈಖರಿಯ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.ಅರ್ಹ ರೈತರಿಗೆ ಪರಿಹಾರ ತಲುಪಿಸುವಲ್ಲಿ ವಿಳಂಬವಾಗದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ವಿಮೆ ಮಾಡಿಸಿಕೊಂಡ ರೈತರಿಗೆ ತಮ್ಮ ಅರ್ಜಿಯ ಸ್ಥಿತಿ, ನಷ್ಟದ ಅಂದಾಜು ಹಾಗೂ ಪರಿಹಾರದ ಮೊತ್ತದ ಕುರಿತು ಸ್ಪಷ್ಟ ಮಾಹಿತಿ ದೊರೆಯುವ ವ್ಯವಸ್ಥೆ ಕಲ್ಪಿಸಬೇಕು. ಅಕ್ರಮ ಅಥವಾ ಲೋಪ ಕಂಡುಬಂದರೆ ಹೊಣೆಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ.

ಕಳವಳಕಾರಿ ಬೆಳವಣಿಗೆ: ತಾಲೂಕಿನಲ್ಲಿ ಫಸಲ್ ಬಿಮಾ ಯೋಜನೆ ಮೇಲೆ ವಿಶ್ವಾಸವಿಟ್ಟ ರೈತರು ಪ್ರತಿ ವರ್ಷ ಕೋಟ್ಯಂತರ ರು. ವಿಮೆ ಕಂತು ಪಾವತಿಸುತ್ತಿದ್ದಾರೆ. ವಂಚಕರ ಜಾಲ, ಬ್ಯಾಂಕ್ ಅಧಿಕಾರಿ, ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಗಳ ಅಧಿಕಾರಿಗಳ ಕುತಂತ್ರದಿಂದ ವಿಮೆ ಕಂತು ಪಾವತಿಸದೆ ಇರುವ ರೈತರ ಖಾತೆಗಳಿಗೆ ವಿಮಾ ಹಣ ಜಮೆಯಾಗುತ್ತಿರುವುದು ಕಳವಳಕಾರಿ ಬೆಳವಣಿಗೆ ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಚನ್ನಪ್ಪ ಷಣ್ಮುಖಿ ತಿಳಿಸಿದರು.

₹೧೦ ಕೋಟಿಗೂ ಅಧಿಕ ಬಿಡುಗಡೆ: ೨೦೨೫- ೨೬ನೇ ಸಾಲಿನಲ್ಲಿ ೧೬೮೧೫ ಅರ್ಜಿಗಳು (ಬೆಳೆವಿಮೆ ಕಂತು) ಸಲ್ಲಿಕೆಯಾಗಿದ್ದು, ಒಟ್ಟು ೧೬೨೬೪ ಹೆಕ್ಟೇರ್ ಪ್ರದೇಶದಲ್ಲಿ ರೈತರಿಂದ ನೋಂದಣಿಯಾಗಿವೆ. ಶಿರಹಟ್ಟಿ ತಾಲೂಕಿಗೆ ಈ ಬಾರಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಮೆಕ್ಕೆಜೋಳ ಹಾಗೂ ಭತ್ತ ಬೆಳೆದ ರೈತರಿಗೆ ವಿಮಾ ಹಣ ₹೧೦ ಕೋಟಿಗೂ ಅಧಿಕ ಬಿಡುಗಡೆಯಾಗಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ ಕಾಶಪ್ಪನವರ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಪರ್ಧಾತ್ಮಕತೆಗೆ ತಕ್ಕಂತೆ ಛಾಯಾಗ್ರಹಣ ಉದ್ಯಮ ಬೆಳೆಯಲಿ: ಮಿಥುನ ಪಾಟೀಲ
ಕೂಲಿಕಾರರು ವಿಬಿ ಜಿ ರಾಮ್‌ ಜಿ ಯೋಜನೆಯ ಲಾಭ ಪಡೆಯಲಿ: ಚಂದ್ರಶೇಖರ ಬಿ. ಕಂದಕೂರ