ಗುಡ್ಡದ ಮಲ್ಲಾಪುರ: ರೈತರ ಸಮಸ್ಯೆ ಪರಿಹರಿಸದಿದ್ದರೆ ಪ್ರತಿಭಟನೆ

KannadaprabhaNewsNetwork |  
Published : Aug 20, 2026, 02:15 AM IST
ಬ್ಯಾಡಗಿ ಪಟ್ಟಣದ ತಹಸೀಲ್ದಾರ್‌ ಕಚೇರಿಯಲ್ಲಿ ಜರುಗಿದ ರೈತರ ಸಭೆಯಲ್ಲಿ ನೀರಾವರಿ ಇಲಾಖೆ ಎಂಜಿನಿಯರ್‌ ಚಂದ್ರಪ್ಪ ಓಲೇಕಾರ ಮಾತನಾಡಿದರು. | Kannada Prabha

ಸಾರಾಂಶ

ಗುಡ್ಡದಮಲ್ಲಾಪುರ ಏತ ನೀರಾವರಿ ಕಾಲುವೆಗೆ ಭೂಸ್ವಾಧೀನಪಡಿಸಿಕೊಂಡ ರೈತರ ಪಹಣಿ ಪತ್ರಗಳಲ್ಲಿ ದೋಷ, ಪರಿಹಾರ ವಿಳಂಬ ಸೇರಿದಂತೆ ತೀವ್ರ ಸಮಸ್ಯೆಗಳು ಉದ್ಭವಿಸಿದ್ದು, ಕೂಡಲೇ ಪರಿಹರಿಸದಿದ್ದಲ್ಲಿ ನೊಂದ ರೈತರೊಂದಿಗೆ ಪ್ರತಿಭಟನೆ ನಡೆಸುವುದಾಗಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಎಚ್ಚರಿಸಿದರು.

ಬ್ಯಾಡಗಿ: ಗುಡ್ಡದಮಲ್ಲಾಪುರ ಏತ ನೀರಾವರಿ ಕಾಲುವೆಗೆ ಭೂಸ್ವಾಧೀನಪಡಿಸಿಕೊಂಡ ರೈತರ ಪಹಣಿ ಪತ್ರಗಳಲ್ಲಿ ದೋಷ, ಪರಿಹಾರ ವಿಳಂಬ ಸೇರಿದಂತೆ ತೀವ್ರ ಸಮಸ್ಯೆಗಳು ಉದ್ಭವಿಸಿದ್ದು, ಕೂಡಲೇ ಪರಿಹರಿಸದಿದ್ದಲ್ಲಿ ನೊಂದ ರೈತರೊಂದಿಗೆ ಪ್ರತಿಭಟನೆ ನಡೆಸುವುದಾಗಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಎಚ್ಚರಿಸಿದರು.

ಪಟ್ಟಣದ ತಹಸೀಲ್ದಾರ ಕಾರ್ಯಾಲಯದಲ್ಲಿ ರೈತರ ಹಾಗೂ ನೀರಾವರಿ ಅಧಿಕಾರಿಗಳ, ಕಂದಾಯ ಇಲಾಖೆಗಳು ಜಂಟಿಯಾಗಿ ನಡೆಸಿದ ಸಭೆಯಲ್ಲಿ ಮಾತನಾಡಿದರು. 20 ವರ್ಷಗಳ ಹಿಂದೆ ಆರಂಭವಾದ ಗುಡ್ಡದ ಮಲ್ಲಾಪುರ ಏತ ನೀರಾವರಿ ಯೋಜನೆ ರೈತರ ಜಮೀನುಗಳನ್ನು ನೀರಾವರಿ ಇಲಾಖೆ ಭೂಸ್ವಾಧೀನಪಡಿಸಿಕೊಂಡಿದೆ. ಆದರೆ ಕಂದಾಯ ಅಧಿಕಾರಿಗಳ ಎಡವಟ್ಟಿನಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ನ್ಯಾಯಕ್ಕಾಗಿ ನಿತ್ಯವೂ ಪರದಾಡುವಂತಾಗಿದೆ ಎಂದರು.

ರೈತರಿಂದ ಭೂಮಿ ಕಸಿದುಕೊಂಡು, ಪರಿಹಾರ ನೀಡದೆ ಓಡಾಡಿಸುವುದು ಯಾವ ನ್ಯಾಯ? ಅಧಿಕಾರಿಗಳಿಗೆ ರೈತನ ನೋವು ಏಕೆ ಅರ್ಥವಾಗಲ್ಲ? ನಮ್ಮ ಹಕ್ಕು ಪಡೆಯಲು ಹತ್ತಾರು ವರ್ಷ ಕಚೇರಿಗೆ ಅಲೆಯುವುದಾದರೆ ಇಂತಹ ಅಧಿಕಾರಿಗಳು ನಮಗೆ ಬೇಕೋ? ಬೇಡವೋ? ಎಂದು ನಿರ್ಧರಿಸುವ ಕಾಲ ಬಂದಿದೆ ಎಂದರು.

ಪಹಣಿ ದೋಷ ಸರಿಪಡಿಸಿ: ಕೆಲವು ರೈತರ 10 ಗುಂಟೆ ಸ್ವಾಧೀನಪಡಿಸಿಕೊಂಡು ಪಹಣಿ ಪತ್ರದಲ್ಲಿ ಎಕರೆಗಟ್ಟಲೇ ಹೊಲ ಬರೆದುಕೊಂಡಿದ್ದಾರೆ. ಕೆಲವರ ಜಮೀನು ಭೂ ಸ್ವಾಧೀನವೇ ಆಗಿಲ್ಲ, ಆದರೂ ಪಹಣಿಯಲ್ಲಿ ಸೇರಿಸಿಕೊಂಡು ಅಧಿಕಾರಿಗಳು ರೈತರಿಗೆ ಮೋಸ ಮಾಡಿದ್ದಾರೆ, ಕೂಡಲೇ ತಪ್ಪಿತಸ್ಥ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು. ಪಹಣಿ ಪತ್ರ ಸರಿಪಡಿಸಲು ರೈತರಿಂದ ಅರ್ಜಿ ಮಾತ್ರ ಪಡೆಯಬೇಕೆ ವಿನಃ ಧಾರವಾಡಕ್ಕೆ ತೆರಳಿ ದಾಖಲೆ ತೆಗೆಸಿಕೊಂಡು ಬನ್ನಿ, ಬೆಳಗಾವಿಗೆ ಹೋಗಿ ದಾಖಲೆ ತನ್ನಿ, ಇತ್ಯಾದಿ ನೆಪದಿಂದ ಓಡಾಡಿಸಿದರೆ ಕೇಳುವುದಿಲ್ಲ, 15 ದಿನ ಸಮಯ ತೆಗೆದುಕೊಳ್ಳಿ, ಎಲ್ಲರ ಪಹಣಿ ಪತ್ರ ಸರಿಪಡಿಸಿಕೊಡಿ ಎಂದು ಒತ್ತಾಯಿಸಿದರು.

ಕೆರೆಕಟ್ಟೆ ತುಂಬಿಸಿ: ರೈತ ಸಂಘದ ತಾಲೂಕಾಧ್ಯಕ್ಷ ರುದ್ರಗೌಡ್ರ ಕಾಡನಗೌಡ್ರ ಮಾತನಾಡಿ, ಗುಡ್ಡದಮಲ್ಲಾಪುರ ಏತ ನೀರಾವರಿ ಕಾಲುವೆ ಮೂಲಕ ನೀರು ಕಡಿಮೆ ಪ್ರಮಾಣದಲ್ಲಿ ಹರಿದು ಬರುತ್ತಿರುವ ಪರಿಣಾಮ ಕೆರೆಕಟ್ಟೆಗಳು ಸಮರ್ಪಕವಾಗಿ ತುಂಬುತ್ತಿಲ್ಲ, ನದಿಯಲ್ಲಿ ನೀರು ಹರಿದು ಹೋಗುವ ಮುನ್ನವೇ ಕಾಳಜಿಯಿಂದ ತುಂಬಿಸಿ, ಇಲ್ಲವಾದರೆ ರೈತರ ಶಾಪಕ್ಕೆ ಗುರಿಯಾಗುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ತಹಸೀಲ್ದಾರ್‌ ಚಂದ್ರಶೇಖರ ನಾಯಕ, ಯುಟಿಪಿ ಎಂಜಿನಿಯರ್‌ ಚಂದ್ರಪ್ಪ ಓಲೇಕಾರ ರೈತ ಸಂಘಟನೆಗಳ ಪದಾಧಿಕಾರಿಗಳು, ಭೂಸ್ವಾಧೀನಕ್ಕೊಳಗಾದ ರೈತರಿದ್ದರು.

ಜಮೀನು ಇದ್ದೂ ಇಲ್ಲದಂತಾಗಿದೆ: ಚಿಕ್ಕಳ್ಳಿ ಗ್ರಾಮದ ಸ.ನಂ. 40ರಲ್ಲಿ 3.07 (ಎ.ಗುಂ) ಜಮೀನಿನಲ್ಲಿ 20 ಗುಂಟೆ ಜಮೀನು ಭೂಸ್ವಾಧೀನವಾಗಿದ್ದು, 15 ವರ್ಷಗಳ ಹಿಂದೆ 37 ಸಾವಿರ ಪರಿಹಾರ ನೀಡಿದ್ದಾರೆ. ನನ್ನ ಜಮೀನಿನ ಋಣಭಾರ ಕಾಲಂನಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳ ಹೆಸರು ಸೇರ್ಪಡೆಯಾಗಿದೆ, ಇದರಿಂದ ಬ್ಯಾಂಕನಲ್ಲಿ ಸಾಲ ಸಿಗುತ್ತಿಲ್ಲ, ಪ್ರಧಾನ ಮಂತ್ರಿ ಕಿಸಾನ್ ಹಣ ಬರುತ್ತಿಲ್ಲ, ಬೆಳೆನಷ್ಟ, ಬೆಳೆವಿಮೆ ಎಲ್ಲದರಿಂದ ವಂಚಿತನಾಗಿದ್ದೇನೆ, ಜಮೀನು ಇದ್ದೂ ಇಲ್ಲದಂತಾಗಿದೆ ಎಂದು ಭೂ ಸ್ವಾಧೀನ ರೈತ ಗವಿಸಿದ್ದಪ್ಪ ತಿಮ್ಮಾಪುರ ಹೇಳಿದರು.

ತಂದೆಯಿಂದ ನನಗೆ 1 ಎಕರೆ 13 ಗುಂಟೆ ಜಮೀನು ವರ್ಗಾವಣೆಯಾಗಿದೆ. ನನ್ನ ಹೊಲ ಕಾಲುವೆಗೆ ಭೂಸ್ವಾಧೀನವಾಗಿಲ್ಲ. ಆದರೆ ಹಿಂದಿನ ನೀರಾವರಿ ಅಧಿಕಾರಿಯೊಬ್ಬ ಮಾಡಿದ ತಪ್ಪಿನಿಂದ ಇಡೀ ನನ್ನ ಕುಟುಂಬವೇ ಪರಿತಪಿಸುವಂತಾಗಿದೆ. 2010ರಲ್ಲಿ ಹಾವೇರಿ ಉಪವಿಭಾಗಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದು, ಇಂದಿಗೂ ಹೆಸರು ತೆಗೆದುಹಾಕಿಲ್ಲ. 16 ವರ್ಷಗಳಿಂದ ನನಗೆ ಸೌಲಭ್ಯ ತಪ್ಪಿಸಲು ಕಾರಣರಾದ ಹಾಗೂ ತಪ್ಪು ಮಾಡಿದ ಅಧಿಕಾರಿಗಳ ವೇತನದಿಂದಲೇ ನನಗೆ ಪರಿಹಾರ ಕೊಡಿಸಬೇಕು. 15 ದಿನಗಳಲ್ಲಿ ಜಿಲ್ಲಾಧಿಕಾರಿ ನ್ಯಾಯ ಕೊಡಿಸದಿದ್ದಲ್ಲಿ ಕಚೇರಿ ಎದುರು ಉಪವಾಸ ಕುಳಿತುಕೊಳ್ಳಲಿದ್ದೇನೆ ಎಂದು ಚಿಕ್ಕಳ್ಳಿ ಗ್ರಾಮದ ರೈತ ಗಣೇಶಪ್ಪ ನಾಗನಗೌಡ್ರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಪರ್ಧಾತ್ಮಕತೆಗೆ ತಕ್ಕಂತೆ ಛಾಯಾಗ್ರಹಣ ಉದ್ಯಮ ಬೆಳೆಯಲಿ: ಮಿಥುನ ಪಾಟೀಲ
ಕೂಲಿಕಾರರು ವಿಬಿ ಜಿ ರಾಮ್‌ ಜಿ ಯೋಜನೆಯ ಲಾಭ ಪಡೆಯಲಿ: ಚಂದ್ರಶೇಖರ ಬಿ. ಕಂದಕೂರ