ಪಟ್ಟಣದ ಕೂಲಿ ಕಾರ್ಮಿಕರಾದ ಅನ್ನಪೂರ್ಣಾ ಚಂಗಳಿ, ಮರಿಯುಂಬಿ ಹುನಗುಂದ ಹಾಗೂ ಸುಜಾತಾ ಹೊಸಮನಿ ಅವರು ರೋಣ ಸಮೀಪದ ಜಿಗಳೂರು ಗ್ರಾಮದ ಬಳಿ ಫೆ. ೫ರಂದು ಕಡಲೆ ಕೀಳುವ ಕೂಲಿ ಕೆಲಸಕ್ಕೆ ತೆರಳಿದ್ದಾಗ ಅಪಘಾತದಲ್ಲಿ ಮೃತಪಟ್ಟಿದ್ದರು.
ಎಸ್.ಎಂ. ಸೈಯದ್
ಗಜೇಂದ್ರಗಡ: ರಸ್ತೆ ಅಪಘಾತದಲ್ಲಿ ಮೃತಪಟ್ಟ ಮೂವರು ಕೂಲಿ ಕಾರ್ಮಿಕರಿಗೆ 6 ತಿಂಗಳಾದರೂ ಪರಿಹಾರ ಸಿಕ್ಕಿಲ್ಲ. ಪರಿಹಾರ ಸಿಗದೇ ಮೃತರ ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುತ್ತಿವೆ. ಪರಿಹಾರಕ್ಕಾಗಿ ಸಂಘಟನೆಗಳು ಹೋರಾಟಕ್ಕೆ ಸಜ್ಜಾಗಿವೆ.
ರೋಣ ಸಮೀಪದ ಜಿಗಳೂರು ಗ್ರಾಮದ ಬಳಿ ಫೆ. ೫ರಂದು ಕಡಲೆ ಕೀಳಲು ಕೂಲಿ ಕೆಲಸಕ್ಕೆ ತೆರಳಿದ್ದ ಪಟ್ಟಣದ ಶಿವಾಜಿಪೇಟೆಯ ಮೂವರು ರಸ್ತೆ ಅಪಘಾತದಲ್ಲಿ ಕೊನೆಯುಸಿರು ಎಳೆದಿದ್ದರು. ಅಲ್ಲದೆ ೧೫ ಮಹಿಳಾ ಕೂಲಿ ಕಾರ್ಮಿಕರು ಗಾಯಗೊಂಡಿದ್ದರು. ಆದರೆ ಮೃತರ ಕುಟುಂಬಗಳಿಗೆ ತಾಲೂಕಾಡಳಿತ ಈ ವರೆಗೂ ಪರಿಹಾರ ಕೊಡಿಸಲು ಸಫಲವಾಗಿಲ್ಲ ಎಂದು ದೂರಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದಿಂದ ತಹಸೀಲ್ದಾರರಿಗೆ ಮನವಿ ನೀಡಿ ಸಂತ್ರಸ್ತ ಪರಿಹಾರ ನೀಡಬೇಕು. ಇಲ್ಲದಿದ್ದರೆ ಸಂತ್ರಸ್ತ ಕುಟುಂಬಗಳೊಂದಿಗೆ ಪಾದಯಾತ್ರೆ ಮೂಲಕ ಶಾಸಕರ ಮನೆಗೆ ಮುತ್ತಿಗೆ ಹಾಕುವುದಾಗಿ ತಹಸೀಲ್ದಾರ್ ಅವರಿಗೆ ಮನವಿ ನೀಡಿತ್ತು.
ಮನೆಯ ಜವಾಬ್ದಾರಿ ಹೊತ್ತಿದ್ದ ಸದಸ್ಯರೇ ಅಪಘಾತದಲ್ಲಿ ಮೃತಪಟ್ಟಿದ್ದರಿಂದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸಂತ್ರಸ್ತ ಕುಟುಂಬದವರಿಗೆ ತಲಾ ₹೫ ಲಕ್ಷ ಕೊಡಿಸಲು ಶಾಸಕರಿಗೆ ಆಗ್ರಹಿಸಲಾಗಿತ್ತು. ಆದರೆ ಅಂದು ಶಾಸಕರು ₹೨ ಲಕ್ಷ ಪರಿಹಾರದ ಭರವಸೆ ನೀಡಿದ್ದರು. ರಾಜ್ಯದ ಸಿಎಂ ಹಾಗೂ ಜಿಲ್ಲೆಯ ಸಚಿವರು ಬದಲಾದರೂ ಶಾಸಕರು ನೀಡಿದ್ದ ಭರವಸೆ ಈಡೇರಿಲ್ಲ. ಪರಿಹಾರ ಕೊಡಲು ಹೊಸ ಸಚಿವರು ಬರಬೇಕಾ ಎಂಬ ಪ್ರಶ್ನೆಗಳು ಸಾರ್ವಜನಿಕರನ್ನು ಕಾಡಲಾರಂಭಿಸಿವೆ.
ಕಡಲೆ ಕೀಳುವ ಕೆಲಸಕ್ಕೆ ತೆರಳಿದ್ದಾಗ ಅವಘಡ
ಪಟ್ಟಣದ ಕೂಲಿ ಕಾರ್ಮಿಕರಾದ ಅನ್ನಪೂರ್ಣಾ ಚಂಗಳಿ, ಮರಿಯುಂಬಿ ಹುನಗುಂದ ಹಾಗೂ ಸುಜಾತಾ ಹೊಸಮನಿ ಅವರು ರೋಣ ಸಮೀಪದ ಜಿಗಳೂರು ಗ್ರಾಮದ ಬಳಿ ಫೆ. ೫ರಂದು ಕಡಲೆ ಕೀಳುವ ಕೂಲಿ ಕೆಲಸಕ್ಕೆ ತೆರಳಿದ್ದಾಗ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರಿಗೆ ಪರಿಹಾರ ನೀಡಿ ಎಂದು ಮನವಿ ನೀಡಿದರೂ ಸಿಕ್ಕಿಲ್ಲ. ಬಡವರ ಸಾವಿಗೆ ಬೆಲೆ ಇಲ್ಲವೇ ಎಂಬ ಪ್ರಶ್ನೆಗೆ ಆಡಳಿತ ಉತ್ತರ ನೀಡಬೇಕಿದೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ್ಮಿಕರ ಸಂಘದ ಮುಖಂಡರಾದ ದಾವಲ ತಾಳಿಕೋಟಿ ತಿಳಿಸಿದರು.ಜಿಗಳೂರು ಬಳಿ ಅಪಘಾತದಲ್ಲಿ ಮೃತಪಟ್ಟ ಹಾಗೂ ಗಾಯಾಳು ಕೂಲಿ ಕಾರ್ಮಿಕರಿಗೆ ಪರಿಹಾರಕ್ಕೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ಆಡಳಿತಕ್ಕೆ ಗಡುವು ನೀಡಲಾಗಿತ್ತು. ಆದರೆ ನೀಡಿದ್ದ ಗಡುವು ಮುಗಿದಿದ್ದು, ಪರಿಹಾರ ಸಿಕ್ಕಿಲ್ಲ. ಹೀಗಾಗಿ ಸಂತ್ರಸ್ತ ಕುಟುಂಬಗಳ ಜತೆಗೆ ಜು. ೨೩ರಿಂದ ಗಜೇಂದ್ರಗಡ ತಹಸೀಲ್ದಾರ್ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಕೈಗೊಳ್ಳುತ್ತಿದ್ದು, ಆಡಳಿತ ಸ್ಪಂದಿಸದಿದ್ದರೆ ಪಾದಯಾತ್ರೆ ಮೂಲಕ ಶಾಸಕರ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿ ಕಾರ್ಮಿಕರ ಸಂಘದ ಮುಖಂಡ ಎಂ.ಎಸ್. ಹಡಪದ ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.