ವಿವಿ ಸಾಗರಕ್ಕೆ ಕ್ರಸ್ಟ್ ಗೇಟ್ ಅಳವಡಿಕೆ ಇಲ್ಲ

KannadaprabhaNewsNetwork |  
Published : Apr 01, 2026, 01:15 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್   | Kannada Prabha

ಸಾರಾಂಶ

ಸಮ್ಮತಿ ವ್ಯಕ್ತಪಡಿಸದ ಕೇಂದ್ರ ಜಲ ಆಯೋಗ ಜಲಾಶಯ ಆಧುನೀಕರಣಕ್ಕೆ ಒಪ್ಪಿಗೆ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಹೊಸದುರ್ಗ ತಾಲೂಕಿನಲ್ಲಿರುವ ವಾಣಿವಿಲಾಸ ಸಾಗರ ಜಲಾಶಯದ ಕೋಡಿ ಬಳಿ ಕ್ರಸ್ಟ್ ಗೇಟ್ ಅಳವಡಿಸುವ ಪ್ರಸ್ತಾಪಕ್ಕೆ ಕೇಂದ್ರ ಜಲ ಆಯೋಗ ಸಮ್ಮತಿ ವ್ಯಕ್ತಪಡಿಸಿಲ್ಲ. ಹಾಗಾಗಿ ಕ್ರಸ್ಟ್ ಗೇಟ್ ಸಂಬಂಧಿಸಿದಂತೆ ಹೊಸದುರ್ಗ ಹಾಗೂ ಹಿರಿಯೂರು ತಾಲೂಕುಗಳ ರೈತರ ನಡುವೆ ಉಂಟಾಗಿದ್ದ ವಿವಾದಕ್ಕೆ ತಾತ್ಕಾಲಿಕವಾಗಿ ತೆರೆ ಬಿದ್ದಂತಾಗಿದೆ. ಜಲಾಶಯ ಆಧುನೀಕರಣಕ್ಕೆ ಕೇಂದ್ರ ಜಲ ಆಯೋಗ ಒಪ್ಪಿಗೆ ಸೂಚಿಸಿದ್ದು ಟೆಂಡರ್ ಕರೆವ ಪ್ರಕ್ರಿಯೆ ಚಾಲ್ತಿಯಲ್ಲಿದೆ.

ಮಳೆಯಿಂದಾಗಿ ವೇದಾವತಿ ನದಿಯಲ್ಲಿಉಂಟಾಗುವ ಪ್ರವಾಹವ ನಿಯಂತ್ರಿಸುವ ಸಂಬಂಧ ವಾಣಿ ವಿಲಾಸ ಸಾಗರ ಜಲಾಶಯದ ಕೋಡಿ ಬಳಿ ಕ್ರಸ್ಟ್ ಗೇಟ್ ಗಳ ಅಳವಡಿಸಲು ತಜ್ಞರ ತಂಡ ಮಾಡಿದ್ದ ಸಲಹೆ ಆಧರಿಸಿ ಸಲ್ಲಿಸಲಾಗಿದ್ದ 61 ಕೋಟಿ ರುಪಾಯಿ ವೆಚ್ಚದ ಪ್ರಸ್ತಾವನೆಗೆ ಈ ಮೊದಲು ಕೇಂದ್ರ ಜಲ ಆಯೋಗ ಕೆಲ ತಾಂತ್ರಿಕ ಮಾಹಿತಿ ಕೇಳಿತ್ತು. ಪೂರೈಕೆಯಾದ ನಂತರವೂ ಸಮ್ಮತಿಸಿಲ್ಲ.

2022ರಲ್ಲಿ ಸುರಿದ ಭಾರೀ ಮಳೆಯಿಂದಾಗಿ 89 ವರ್ಷಗಳ ನಂತರ ವಿವಿ ಸಾಗರ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದಿತ್ತು.ವಿವಿ ಸಾಗರ ಜಲಾಶಯದಲ್ಲಿ 130 ಅಡಿ ವರೆಗೆ ನೀರು ಸಂಗ್ರಹಿಸುವ ಅವಕಾಶವಿದ್ದು ಇದೇ ಎತ್ತರಕ್ಕೆ ಕೋಡಿ ಅಳವಡಿಸಲಾಗಿದೆ. 2022 ರಲ್ಲಿ ಸುರಿದ ಭಾರೀ ಮಳೆಯಿಂದಾಗಿ 89 ವರ್ಷಗಳ ನಂತರ ವಿವಿ ಸಾಗರ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದಿತ್ತು. ಜಲಾಶಯದಲ್ಲಿ 135 ಅಡಿ ನೀರು ಸಂಗ್ರಹವಾದಾಗ ಹೊಸದುರ್ಗ ತಾಲೂಕಿನಲ್ಲಿ ಎರಡು ಸಾವಿರ ಎಕರೆಯಷ್ಟು ರೈತರ ಭೂಮಿಗಳು ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದವು. ಒಂದೇ ದಿನ 18 ಸಾವಿರ ಕ್ಯೂಸೆಕ್ಸ್ (ಒಂದುವರೆ ಟಿಎಂಸಿ) ನೀರು ಹರಿದು ಬಂದಿದ್ದರಿಂದ ಪ್ರವಾಹ ಸೃಷ್ಟಿಯಾಗಿತ್ತು. ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಎಫ್ ಆರ್ ಎಲ್( ಫುಲ್ ರಿಜರ್ವಾರಿಯರ್ ಲೆವೆಲ್ )ಮಟ್ಟದಲ್ಲಿ ಕ್ರಸ್ಟ್ ಗೇಟ್ ಗಳ ಅಳವಡಿಸುವ ಚಿಂತನೆಗಳಾಗಿದ್ದವು.

2022ರಲ್ಲಿ ಪ್ರವಾಹ ಬಂದಾಗ ಭವಿಷ್ಯದಲ್ಲಿ ಆಗುವ ಅನಾಹುತಗಳ ತಪ್ಪಿಸುವ ಸಂಬಂಧ ಕರ್ನಾಟಕ ಇಂಜಿನಿಯರಿಂಗ್ ರೀಸರ್ಚ್ ಸ್ಟೇಷನ್ (KERS) ಅಧ್ಯಯನ ಕೈಗೊಂಡು ಕೆಲ ಶಿಫಾರಸು ಮಾಡಿತ್ತು. ಹಾಲಿ ಕೋಡಿಯಲ್ಲಿ 991 ಕ್ಯುಮೆಕ್ಸ್ ನಷ್ಟು ನೀರು ಹೊರ ಹೋಗುವ ಅವಕಾಶವಿದೆ. 10292 ಕ್ಯುಮೆಕ್ ಒಳಹರಿವಿದ್ದು ಪ್ರವಾಹದ ಗರಿಷ್ಠ ಮೌಲ್ಯ ಇದಾಗಿದ್ದು ಅಣೆಕಟ್ಟು ಜಲವಿಜ್ಞಾನದ ದೃಷ್ಟಿಯಿಂದ ಸುರಕ್ಷಿತವಲ್ಲವೆಂಬುದು ತಜ್ಞರ ಅಭಿಪ್ರಾಯ. ಹಾಗಾಗಿ ಹಾಲಿ ಇರುವ 991 ಕ್ಯುಮೆಕ್ಟ್ ಕೋಡಿಯನ್ನು ಹತ್ತು ಪಟ್ಟು ಹೆಚ್ಚಿಸಬೇಕಾಗಿದೆ. ಅಸ್ತಿತ್ವದಲ್ಲಿರುವ ಕೋಡಿ ಬದಲಿಗೆ ವಿಶಾಲವಾದ ಗೇಟೆಡ್ ಸ್ಪಿಲ್ ವೇ ಅಗತ್ಯತೆಯ ಪ್ರಸ್ತಾಪಿಸಿದ್ದರು.

ತಜ್ಞರ ವರದಿ ಅನ್ವಯ ಕ್ರಸ್ಟ್ ಗೇಟ್ (ಗೇಟೆಡ್ ಸ್ಪಿಲ್ ವೇ-gated spil1 way)ಗಳನ್ನು ಕೋಡಿ ಬಳಿ ಅಳವಡಿಸಲಾಗುತ್ತದೆ. ನೆಲದಿಂದ ಮೂರು ಮೀಟರ್ ಎತ್ತರ ಹಾಗೂ 12 ಮೀಟರ್ ಉದ್ದದ ವಿನ್ಯಾಸವ ಈ ಕ್ರಸ್ಟ್ ಗೇಟ್ ಗಳು ಒಳಗೊಂಡಿದ್ದು ಒಟ್ಟು 12 ಗೇಟ್ ಗಳ ಅಳವಡಿಸಿ ಪ್ರವಾಹ ಬಂದಾಗ ಮಾತ್ರ ಒಳ ಹರಿವು ಪ್ರಮಾಣಕ್ಕೆ ತಕ್ಕಂತೆ ಓಪನ್ ಮಾಡುವ ಉದ್ದೇಶ ಹೊಂದಲಾಗಿತ್ತು.ಹಾಲಿ ಜಲಾಶಯದಿಂದ ಕೃಷಿಗಾಗಿ ಕಾಲುವೆ ಮೂಲಕ ನೀರು ಹಾಯಿಸುವ ವ್ಯವಸ್ಥೆ ಇದೆ. ಒಂದು ಸಾವಿರ ಕ್ಯೂಸೆಕ್ಸ್ ನಷ್ಟು ನೀರನ್ನು ತೂಬು ಮೂಲಕ ಹೊರ ಹಾಕಬಹುದಾಗಿದೆ.

ಗೇಟೆಡ್ ಸ್ಪಿಲ್‌ವೇಯನ್ನು ಅಳವಡಿಸುವುದರಿಂದ ಒಳ ಹರಿವಿನ ಪ್ರಮಾಣವನ್ನು ನಿಯಂತ್ರಿಸುವ ಮೂಲಕ ಅಣೆಕಟ್ಟು ವೈಫಲ್ಯ ಅಥವಾ ರಚನಾತ್ಮಕ ಹಾನಿಯ ಅಪಾಯವನ್ನು ಕಡಿಮೆ ಮಾಡಬಹುದಾಗಿದೆ. ಪ್ರವಾಹದ ಹೆಚ್ಚುವರಿ ನೀರನ್ನು ನಿಯಂತ್ರಿಸಲು ಔಟ್‌ಲೆಟ್ ಒದಗಿಸಿ ಒಟ್ಟಾರೆ ಅಣೆಕಟ್ಟು ತನ್ನ ಸುರಕ್ಷತೆ ಪ್ರಮಾಣ ಹೆಚ್ಚಿಸಿಕೊಳ್ಳುತ್ತದೆ ಎಂಬುವುದು ತಜ್ಞರ ಅಭಿಮತವಾಗಿತ್ತು. ಇದೀಗ ಕ್ರಸ್ಟ್ ಗೇಟ್ ಅಳವಡಿಕೆ ಪ್ರಸ್ತಾಪಕ್ಕೆ ಸಮ್ಮತಿ ನೀಡದೇ ಇರುವುದರಿಂದ ಚಿಂತನೆಗಳಿಗೆ ಬ್ರೇಕ್ ಹಾಕಿದಂತಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾವಗಡದಲ್ಲಿ ವಿಜಯನಗರ ಕೃಷ್ಣದೇವರಾಯನ ಶಾಸನ ಪತ್ತೆ
ಗುಣಮಟ್ಟದ ಹಾಲು ಶೇಖರಣೆಯಲ್ಲಿ ತುಮಕೂರು ರಾಜ್ಯಕ್ಕೆ ಪ್ರಥಮ