ಕರ ಭಾರವಿಲ್ಲ, ಅನಧಿಕೃತ ಮೇಲ್ಮಹಡಿಗೆ ಟ್ಯಾಕ್ಸ್‌

KannadaprabhaNewsNetwork |  
Published : Apr 30, 2025, 12:33 AM IST
29ಕೆಪಿಎಲ್22 ಕೊಪ್ಪಳ ನಗರದ ನಗರಸಭೆಯಲ್ಲಿ ಬಜೆಟ್ ಮಂಡನೆ ಮಾಡುತ್ತಿರುವ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ | Kannada Prabha

ಸಾರಾಂಶ

ಈಗಾಗಲೇ ಇರುವ ಆಸ್ತಿ ತೆರಿಗೆ, ನೀರಿನ ಕರ ಸೇರಿದಂತೆ ನಾಗರಿಕರ ಮೇಲೆ ಯಾವುದೇ ಹೊಸ ಭಾರ ಹೇರುವುದಾಗಲಿ ಅಥವಾ ತೆರಿಗೆ ಹೆಚ್ಚಳ ಮಾಡದೆ, ಆದಾಯ ವೃದ್ಧಿಸಿಕೊಂಡಿರುವುದು ವಿಶೇಷವಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ₹ 10 ಕೋಟಿ ಬಜೆಟ್ ಗಾತ್ರದಲ್ಲಿ ಹೆಚ್ಚಳವಾಗಿದೆಯಾದರೂ ಯಾವುದೇ ಹೊರೆಯನ್ನು ನಾಗರಿಕ ಮೇಲೆ ಹಾಕಿಲ್ಲ.

ಕೊಪ್ಪಳ:

ಇಲ್ಲಿನ ನಗರಸಭೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ₹ 48 ಲಕ್ಷ ಉಳಿತಾಯ ಬಜೆಟ್‌ ಮಂಡಿಸಲಾಗಿದೆ. ಈ ಬಾರಿ ಯಾವುದೇ ಕರ ಹೆಚ್ಚಿಸದೆ ಇದ್ದರೂ ಅನಧಿಕೃತ ಮೇಲ್ಮಹಡಿಗೂ ಟ್ಯಾಕ್ಸ್‌ ಕಡ್ಡಾಯಗೊಳಿಸಲಾಗಿದೆ. ಈ ಮೂಲಕ ನಗರಸಭೆಗೆ ಆದಾಯವೂ ಹೆಚ್ಚಳವಾಗಲಿದೆ. ಜತೆಗೆ ಕೊಪ್ಪಳ ನಗರ ವ್ಯಾಪ್ತಿಯನ್ನು 5 ಕಿಲೋ ಮೀಟರ್ ವಿಸ್ತರಿಸಲು ಪ್ರಸ್ತಾಪಿಸಲಾಗಿದೆ.

ಈ ವರ್ಷ ಬಜೆಟ್‌ನಲ್ಲಿ ನಾಗರಿಕರಿಗೆ ಹೊರೆಯಾಗಬಾರದೆಂದು ಕರ ಹೆಚ್ಚಿಸಿಲ್ಲ ಎಂದು ಅಧ್ಯಕ್ಷ ಅಮ್ಜದ್‌ ಪಟೇಲ್‌ ಘೋಷಿಸಿದ್ದಾರೆ. ರಾಜಸ್ವ ಸ್ವೀಕೃತಿ, ಬಂಡವಾಳ ಸ್ವೀಕೃತಿ ಸೇರಿದಂತೆ ₹ 54.43 ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದು ಇದರಲ್ಲಿ ರಾಜಸ್ವ ಪಾವತಿ, ಬಂಡವಾಳ ಪಾವತಿ ಸೇರಿದಂತೆ ₹ 53.95 ಕೋಟಿ ವೆಚ್ಚದ ಖರ್ಚಿನ ಲೆಕ್ಕದೊಂದಿಗೆ ₹ 48 ಲಕ್ಷ ಉಳಿತಾಯ ಬಜೆಟ್ ಮಂಡಿಸಲಾಗಿದೆ.

ಅಧ್ಯಕ್ಷ ಅಮ್ಜದ್ ಪಟೇಲ್ ಕಳೆದೊಂದು ತಿಂಗಳಿಂದ ಬಜೆಟ್ ಮಂಡನೆಗೆ ಕಸರತ್ತು ನಡೆಸಿದ್ದರು. ಜನವರಿ ಅಥವಾ ಫೆಬ್ರುವರಿಯಲ್ಲಿಯೇ ಮಂಡಿಸಬೇಕಿದ್ದ ಬಜೆಟ್‌ ಎರಡು ತಿಂಗಳು ವಿಳಂಬವಾಗಿದೆ. ಒಂದು ವರ್ಷದಿಂದ ಅಕೌಂಟೆಂಟ್ ಇಲ್ಲದೇ ಇರುವುದರಿಂದ ಬಜೆಟ್ ಮಂಡನೆಗೆ ವಿಳಂಬವಾಯಿತು ಎಂದು ಸಮರ್ಥಿಸಿಕೊಂಡರು.

ಕರ ಭಾರ ಇಲ್ಲ:

ಈಗಾಗಲೇ ಇರುವ ಆಸ್ತಿ ತೆರಿಗೆ, ನೀರಿನ ಕರ ಸೇರಿದಂತೆ ನಾಗರಿಕರ ಮೇಲೆ ಯಾವುದೇ ಹೊಸ ಭಾರ ಹೇರುವುದಾಗಲಿ ಅಥವಾ ತೆರಿಗೆ ಹೆಚ್ಚಳ ಮಾಡದೆ, ಆದಾಯ ವೃದ್ಧಿಸಿಕೊಂಡಿರುವುದು ವಿಶೇಷವಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ₹ 10 ಕೋಟಿ ಬಜೆಟ್ ಗಾತ್ರದಲ್ಲಿ ಹೆಚ್ಚಳವಾಗಿದೆಯಾದರೂ ಯಾವುದೇ ಹೊರೆಯನ್ನು ನಾಗರಿಕ ಮೇಲೆ ಹಾಕಿಲ್ಲ.

5 ಕಿಲೋ ಮೀಟರ್ ವ್ಯಾಪ್ತಿ:

ಕೊಪ್ಪಳ ನಗರ ವ್ಯಾಪ್ತಿಯನ್ನು 5 ಕಿಲೋ ಮೀಟರ್ ವ್ಯಾಪ್ತಿಗೆ ವಿಸ್ತರಿಸಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಈ ವ್ಯಾಪ್ತಿಯಲ್ಲಿರುವ ಕಿಡದಾಳ, ಬಸಾಪುರ, ಚಿಲವಾಡಗಿ, ಟಣಕನಲಕಲ್, ಓಜನಳ್ಳಿ, ದದೆಗಲ್, ಮಂಗಳಾಪುರ, ಗುನ್ನಳ್ಳಿ, ಹೊರತಟ್ನಾಳ, ಬಹದ್ದೂರುಬಂಡಿ, ಹೊಸಳ್ಳಿ, ಹೂವಿನಾಳ, ಚಿಕ್ಕನಕಲ್ ಸೇರಿದಂತೆ ಕೊಪ್ಪಳ ನಗರಾಭಿವೃದ್ಧಿಗೆ ಬರುವ ಅಷ್ಟು ಗ್ರಾಮಗಳನ್ನೊಳಗೊಂಡು ನಗರ ವ್ಯಾಪ್ತಿ ವಿಸ್ತರಣೆ ಮಾಡಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಈ ಕುರಿತು ರಾಜ್ಯಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ, ಅನುಮೋದನೆ ಪಡೆಯಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಆದರೆ, ಪಕ್ಕದಲ್ಲಿಯೇ ಇರುವ ಭಾಗ್ಯನಗರ ಕುರಿತು ಪ್ರಸ್ತಾಪಿಸದೆ ಇರುವುದು ಚರ್ಚೆಗೆ ಗ್ರಾಸವಾಗಿದೆ. ಜಿಲ್ಲಾಡಳಿತ ಭವನ, ಜಿಲ್ಲಾಸ್ಪತ್ರೆ, ಲಾಡ್ಜ್‌ಗಳು ಭಾಗ್ಯನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರಿರುವುದರಿಂದ ನಗರಸಭೆ ಆದಾಯಕ್ಕೆ ಹೊಡೆತ ಬಿದ್ದಿದೆ. ಹೀಗಾಗಿ, ಇವುಗಳನ್ನು ಪುನಃ ನಗರಸಭೆ ವ್ಯಾಪ್ತಿಗೆ ಸೇರಿಸಿಕೊಳ್ಳಲು ಪ್ರಸ್ತಾವನೆ ಸಲ್ಲಿಸಿ ಅವುಗಳಿಂದಲೂ ಆದಾಯ ಬರುವಂತೆ ಮಾಡುವ ಕುರಿತು ಅಧ್ಯಕ್ಷ ಅಮ್ಜಾದ್ ಪಟೇಲ್ ಪ್ರಸ್ತಾಪಿಸಿದರು.

ಭೂಗತ ವಿದ್ಯುತ್‌ ಲೈನ್‌:

ನಗರ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ಕಂಬ ಹಾಕುವುದು ದೊಡ್ಡ ಸಮಸ್ಯೆಯಾಗುತ್ತಿದೆ ಮತ್ತು ನಗರ ಬೆಳೆದಂತೆ ಅನಾಹುತಕ್ಕೆ ಕಾರಣವಾಗುತ್ತದೆ. ಹೀಗಾಗಿ, ನಗರದಲ್ಲಿರುವ ಅಷ್ಟು ವಿದ್ಯುತ್ ಲೈನ್‌ಗಳನ್ನು ಭೂಗತವಾಗಿ ಅಳವಡಿಸಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗದೆ. ಧನ್ಯವಾದ ಕನ್ನಡಪ್ರಭ

ಬಜೆಟ್‌ ವಿಳಂಬದ ಕುರಿತು ಕನ್ನಡಪ್ರಭ ಸರಣಿ ವರದಿ ಪ್ರಕಟಿಸಿದ್ದಕ್ಕೆ ಸದಸ್ಯರು ಧನ್ಯವಾದ ಹೇಳಿದ್ದಾರೆ. ಬಜೆಟ್‌ ಮುಗಿದ ಬಳಿಕ ಅಧ್ಯಕ್ಷ ಅಮ್ಜದ್ ಪಟೇಲ್ ಕೊಠಡಿಯಲ್ಲಿ ಸದಸ್ಯರಾದ ಮಹೇಂದ್ರ ಛೋಪ್ರಾ, ಮಲ್ಲಪ್ಪ ಕವಲೂರು, ಮುತ್ತು ಕುಷ್ಟಗಿ, ಕನ್ನಡಪ್ರಭ ಸರಣಿ ವರದಿ ಪ್ರಕಟಿಸಿದ್ದರಿಂದ ಕೊನೆಗೂ ಬಜೆಟ್‌ ಮಂಡನೆಯಾಗಿದೆ. ಹೀಗಾಗಿ ಕನ್ನಡಪ್ರಭಕ್ಕೆ ಧನ್ಯವಾದ ಎಂದರು. ಇದಕ್ಕೆ ಎಲ್ಲ ಸದಸ್ಯರು ಧ್ವನಿಗೂಡಿಸಿದರು.

ತಡವಾಗಿ ಬಜೆಟ್‌ ಮಂಡಿಸಿದರೂ ಕಳೆದ ವರ್ಷಕ್ಕಿಂತ 10 ಕೋಟಿ ಅಧಿಕ ಹೆಚ್ಚುವರಿ ಬಜೆಟ್‌ ಮಂಡಿಸಿದ್ದೇವೆ. ಆದರೆ, ನಾಗರಿಕರಿಗೆ ಯಾವುದೇ ತೆರಿಗೆ ಭಾರ ಹೆಚ್ಚಿಸಿಲ್ಲ.

ಅಮ್ಜದ್ ಪಟೇಲ್, ನಗರಸಭೆ ಅಧ್ಯಕ್ಷ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!