ಕನಕಗಿರಿ ಕ್ಷೇತ್ರದಲ್ಲಿ ಕಾನೂನು ಭಯವಿಲ್ಲ: ದಢೇಸ್ಗೂರು

KannadaprabhaNewsNetwork | Published : Jun 28, 2025 12:18 AM
ಕಾರಟಗಿ ತಾಲೂಕು ಕುರುಬ ಸಂಘದ ನೂತನ ಅಧ್ಯಕ್ಷ ಉಮೇಶ್ ಭಂಗಿ ಹಾಗೂ ಪದಾಧಿಕಾರಿಗಳನ್ನು ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸ್ಗೂರು ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸನ್ಮಾನಿಸಿ ಗೌರವಿಸಿದರು. | Kannada Prabha

ಸಾರಾಂಶ

ಮಹಾನ್ ಸಂತ ಕನಕದಾಸರ ಮೂರ್ತಿ ಭಗ್ನಗೊಳಿಸಿರುವ ಪ್ರಕರಣವನ್ನು ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಒಂದು ವೇಳೆ ಗಂಭೀರವಾಗಿ ಪರಿಗಣಿಸಿದ್ದೆ ಆದರೆ, ಪೊಲೀಸರು ಆರೋಪಿಗಳನ್ನು ಇಷ್ಟರೊಳಗೆ ಬಂಧಿಸಬೇಕಾಗಿತ್ತು.

ಕಾರಟಗಿ:

ಕನಕಗಿರಿ ಕ್ಷೇತ್ರದಲ್ಲಿ ಆಡಳಿತ ಯಂತ್ರ ಹಳಿತಪ್ಪಿದ್ದು, ಜನರಲ್ಲಿ ಕಾನೂನಿನ ಭಯ ಇಲ್ಲವಾಗಿದೆ. ತಾಲೂಕಿನ ಬೇವಿನಾಳ ಗ್ರಾಮದಲ್ಲಿ ಭಕ್ತ ಕನಕದಾಸರ ಮೂರ್ತಿಯನ್ನು ಕಿಡಿಗೇಡಿಗಳು ಭಗ್ನಗೊಳಿಸಿರುವುದೇ ಇದಕ್ಕೆ ಸಾಕ್ಷಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನ್ ಸಂತ ಕನಕದಾಸರ ಮೂರ್ತಿ ಭಗ್ನ ಗೊಳಿಸಿರುವ ಪ್ರಕರಣವನ್ನು ಕ್ಷೇತ್ರದ ಶಾಸಕರೂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಒಂದು ವೇಳೆ ಗಂಭೀರವಾಗಿ ಪರಿಗಣಿಸಿದ್ದೆ ಆದರೆ, ಪೊಲೀಸರು ಆರೋಪಿಗಳನ್ನು ಇಷ್ಟರೊಳಗೆ ಬಂಧಿಸಬೇಕಾಗಿತ್ತು. ಆದರೆ, ಸಚಿವರಿಗೆ ಈ ಪ್ರಕರಣದ ಕುರಿತು ಇಚ್ಛಾಶಕ್ತಿ ಇಲ್ಲ. ಇಂಥ ಪ್ರಕರಣ ನಮ್ಮ ಕ್ಷೇತ್ರದಲ್ಲಿ ನಡೆದಿರುವುದು ದುರುಂತವೇ ಸರಿ. ಮಹಾನ್ ನಾಯಕರ ಮೂರ್ತಿಗಳಿಗೆ ಅಪಮಾನ ಮಾಡಿರುವುದು ಹೇಯ ಕೃತ್ಯ. ಇಂಥ ಪ್ರಕರಣವನ್ನು ರಾಜ್ಯ ಸರ್ಕಾರ ಹಗುರವಾಗಿ ತೆಗೆದುಕೊಳ್ಳಬಾರದು. ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡುವಂತ ವಿಕೃತ ಮನಸ್ಸುಗಳನ್ನು ಮಟ್ಟ ಹಾಕಬೇಕು ಎಂದು ಸಲಹೆ ನೀಡಿದರು.

ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ಸಲಹೆ ನೀಡಿ ಕೆಲಸ ಮಾಡಿಸಬೇಕು. ಆದರೆ, ನಮ್ಮ ಕನಕಗಿರಿ ಕ್ಷೇತ್ರದಲ್ಲಿ ಅಧಿಕಾರಿಗಳೇ ಮಂತ್ರಿಗಳಿಗೆ ಸಲಹೆ ನೀಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಕ್ಷೇತ್ರದಲ್ಲಿ ಹಾಲುಮತ ಸಮಾಜ ದೊಡ್ಡ ಸಂಖ್ಯೆಯಲ್ಲಿದೆ. ಕಿಡಿಗೇಡಿಗಳ ಕೃತ್ಯದಿಂದಾಗಿ ಆ ಸಮಾಜದವರಿಗೆ ನೋವುಂಟಾಗಿದೆ. ಹೀಗಾಗಿ ಆರೋಪಿಗಳು ಯಾರೇ ಇರಲಿ, ಅವರಿಗೆ ತಕ್ಕ ಶಿಕ್ಷೆಯಾಗಬೇಕು. ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದರು. ಈಗಾಗಲೇ ಹಾಲುಮತ ಸಮಾಜದ ಮುಖಂಡರು 15 ದಿನಗಳೊಳಗಾಗಿ ಆರೋಪಿಗಳನ್ನು ಬಂಧನ ಮಾಡಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ, ಗೃಹ ಸಚಿವರಿಗೆ, ಡಿಸಿ, ಎಸ್ಪಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಒಂದು ವೇಳೆ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಪೊಲೀಸ್ ಇಲಾಖೆ ನಿರ್ಲಕ್ಷ್ಯ ವಹಿಸಿದರೆ ಬೇವಿನಾಳ ಗ್ರಾಮದಿಂದ ಪಾದಯಾತ್ರೆ ಕೈಗೊಳ್ಳುವುದು ಅಥವಾ ಕಾರಟಗಿ ಬಂದ್ ಕರೆ ಕೊಡುವ ನಿರ್ಧಾರವನ್ನು ಹಾಲುಮತ ಸಮಾಜದ ಹಿರಿಯರು ತೆಗೆದುಕೊಂಡಿದ್ದಾರೆ. ಹೀಗಾಗಿ ನಾವು ಅವರ ನಿರ್ಧಾರಕ್ಕೆ ಬೆಂಬಲ ನೀಡಿ, ಅವರ ನೋವಿನಲ್ಲಿ ನಾನು ಭಾಗವಹಿಸುತ್ತೇನೆ ಎಂದು ಹೇಳಿದರು.

ಮಂಡಲ ಅಧ್ಯಕ್ಷ ಮಂಜುನಾಥ ಮಸ್ಕಿ, ಮೌನೇಶ್ ದಢೇಸೂಗೂರು, ಹಾಲುಮತ ಸಮಾಜದ ಅಧ್ಯಕ್ಷ ಉಮೇಶ್ ಭಂಗಿ, ಉಪಾಧ್ಯಕ್ಷರಾದ ಲಿಂಗಪ್ಪ ಗೌರಿಪುರ, ಹುಲುಗಪ್ಪ ಪೂಜಾರಿ, ರಾಮಚಂದ್ರ ವಕೀಲರು, ರಮೇಶ್ ವಕೀಲರು, ಮರಿಸ್ವಾಮಿ ಬರಗೂರು, ರಮೇಶ್ ಸಾಲೋಣಿ ಸೇರಿ ಇತರರಿದ್ದರು.

PREV