ವಸಂತಕುಮಾರ್ ಕತಗಾಲ
ಕಾರವಾರ: ರಾಜ್ಯಾದ್ಯಂತ ರಸಗೊಬ್ಬರಕ್ಕಾಗಿ ರೈತರು ಪರದಾಡುತ್ತಿದ್ದಾರೆ. ಆದರೆ ಉತ್ತರ ಕನ್ನಡದಲ್ಲಿ ಮಾತ್ರ ಸದ್ಯಕ್ಕೆ ಗೊಬ್ಬರ ಗಲಾಟೆ ಕಾಣುತ್ತಿಲ್ಲ. ಆದರೆ ಕೆಲವೆಡೆ ನೆರೆ ಜಿಲ್ಲೆಯವರು ನಮ್ಮ ಜಿಲ್ಲೆಗೆ ಬಂದು ಗೊಬ್ಬರದ ಬೇಟೆ ಶುರು ಮಾಡಿದ್ದಾರೆ. ಇದರಿಂದ ಮುಂದೆ ಗೊಬ್ಬರ ನಿರೀಕ್ಷೆಯಷ್ಟು ಬಾರದೇ ಇದ್ದಲ್ಲಿ ಸಮಸ್ಯೆ ತಲೆದೋರುವ ಸಾಧ್ಯತೆ ಇದೆ.ಹಾಗೆ ನೋಡಿದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ರಸಗೊಬ್ಬರದ ಬಳಕೆ ಬೇರೆ ಜಿಲ್ಲೆಗಳಷ್ಟು ಹೆಚ್ಚಿಲ್ಲ. ಮುಂಡಗೋಡ, ಹಳಿಯಾಳ, ಯಲ್ಲಾಪುರದಲ್ಲಿ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಅದರಲ್ಲೂ ಹತ್ತಿ ಬೆಳೆ ಕಡಿಮೆಯಾಗುತ್ತಿದೆ. ಗೋವಿನಜೋಳ ಬೆಳೆಗೆ ಹಾನಿ ಉಂಟಾಗಿದೆ. ಇದರಿಂದ ರಸಗೊಬ್ಬರದ ಬಳಕೆ ಮತ್ತಷ್ಟು ಕಡಿಮೆಯಾಗಿದೆ.
ಜೋಯಿಡಾ ತಾಲೂಕಿನಲ್ಲಿ ಬತ್ತ ಬೆಳೆಯನ್ನು ವಿಫುಲವಾಗಿ ಬೆಳೆಯಲಾಗುತ್ತಿದ್ದರೂ ಅಲ್ಲಿ ರೈತರು ಸಾವಯವ ಗೊಬ್ಬರವನ್ನೇ ಹೆಚ್ಚು ಬಳಕೆ ಮಾಡುತ್ತಾರೆ. ಕೇವಲ ಶೇ.7ರಷ್ಟು ಮಾತ್ರ ರಸಗೊಬ್ಬರ ಬಳಕೆಯಾಗುತ್ತಿದೆ.ವ್ಯವಸಾಯ ಸೇವಾ ಸಹಕಾರಿ ಸಂಘಗಳು, ಮಾರ್ಕೆಟಿಂಗ್ ಸೊಸೈಟಿ, ಗೊಬ್ಬರದ ಅಂಗಡಿಗಳು ಹೀಗೆ ಯಾವುದರ ಮುಂದೆಯೂ ಗೊಬ್ಬರಕ್ಕಾಗಿ ರೈತರ ಸಾಲು ಕಾಣಿಸುತ್ತಿಲ್ಲ. ಪ್ರತಿಭಟನೆ ನಡೆದಿಲ್ಲ. ಆದರೆ ಧಾರವಾಡ ಜಿಲ್ಲೆಯ ಕಲಘಟಗಿ, ಹಾವೇರಿ ಜಿಲ್ಲೆಯ ಗಡಿ ಪ್ರದೇಶದ ಜನತೆ ಮುಂಡಗೋಡ, ಹಳಿಯಾಳ ಹಾಗೂ ಯಲ್ಲಾಪುರದ ತಮಗೆ ಪರಿಚಯದವರ ದಾಖಲೆ ತೋರಿಸಿ ಯೂರಿಯಾ ರಸಗೊಬ್ಬರ ಪಡೆದುಕೊಂಡು ಹೋಗುತ್ತಿರುವುದು ಬೆಳಕಿಗೆ ಬಂದಿದೆ. ಆ ಜಿಲ್ಲೆಗಳಲ್ಲಿ ಯೂರಿಯಾಕ್ಕೆ ಬೇಡಿಕೆ ತೀವ್ರವಾಗಿದೆ. ರೈತರು ಪರದಾಡುತ್ತಿದ್ದಾರೆ. ಹೀಗಾಗಿ ಜಿಲ್ಲೆಯ ಗಡಿ ಪ್ರದೇಶದಲ್ಲಿ ಗೊಬ್ಬರಕ್ಕಾಗಿ ಆಗಮಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಯೂರಿಯಾ ಬಾರದೇ ಇದ್ದಲ್ಲಿ ಆಗ ನಮ್ಮ ಜಿಲ್ಲೆಯ ರೈತರಿಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.
ಇದರ ಜತೆಗೆ ಕೆಲವೆಡೆ ಯೂರಿಯಾ ಗೊಬ್ಬರದೊಂದಿಗೆ ಕಾಂಪ್ಲೆಕ್ಸ್ ಗೊಬ್ಬರವನ್ನು ಅಗತ್ಯ ಇಲ್ಲದಿದ್ದರೂ ನೀಡುತ್ತಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ನ್ಯಾನೋ ಯೂರಿಯಾ ಗೊಬ್ಬರ ಲಭ್ಯವಿದೆ. ರೈತರು ಇದನ್ನು ಸಿಂಪಡಿಸುವುದರ ಮೂಲಕ ಉತ್ತಮ ಫಲಿತಾಂಶ ಪಡೆಯಬಹುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.ನಮ್ಮ ಜಿಲ್ಲೆಯಲ್ಲಿ ಸದ್ಯಕ್ಕೆ ರಸಗೊಬ್ಬರದ ಕೊರತೆ ಉಂಟಾಗಿಲ್ಲ. ಮುಂಡಗೋಡ ಹಾಗೂ ಹಳಿಯಾಳದಲ್ಲಿ ಮಾತ್ರ ಗೊಬ್ಬರಕ್ಕೆ ಬೇಡಿಕೆ ಹೆಚ್ಚಿದೆ. ಈಗ ನ್ಯಾನೋ ಯೂರಿಯಾ ಅಂದರೆ ದ್ರವರೂಪದ ಗೊಬ್ಬರ ಸಹ ಬಂದಿದೆ. ಕಾಂಪ್ಲೆಕ್ಸ್ ಹಾಗೂ ಡಿಎಪಿ ಗೊಬ್ಬರಕ್ಕೆ ಕೊರತೆ ಇಲ್ಲ. ಬೇರೆ ಜಿಲ್ಲೆಯ ರೈತರು ನಮ್ಮ ಜಿಲ್ಲೆಯಿಂದ ಗೊಬ್ಬರ ಪಡೆಯದಂತೆ ನಿಗಾ ವಹಿಸುತ್ತೇವೆ ಎನ್ನುತ್ತಾರೆ ಕೃಷಿ ಜಂಟಿ ನಿರ್ದೇಶಕ ಶಿವಪ್ರಸಾದ ಗಾಂವಕರ.