ಆತ್ಮಭೂಷಣ್
ಹಾಜಬ್ಬರ ಪ್ರಯತ್ನದಿಂದ ಅಲ್ಲೇ ಗ್ರಾಮ ಚಾವಡಿ ಬಳಿ 1.30 ಎಕರೆ ಜಾಗವನ್ನು ಪಿಯು ಶಾಲಾ ಕಟ್ಟಡ ನಿರ್ಮಾಣಕ್ಕೆ ಕಾದಿರಿಸಲಾಗಿದೆ. 2022ರಲ್ಲೇ ಜಾಗ ಕಾದಿರಿಸಿದ್ದರೂ ಅನುದಾನ ಮಾತ್ರ ಇನ್ನೂ ಬಿಡುಗಡೆಯಾಗಿಲ್ಲ. ಹೀಗಾಗಿ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಪಿಯು ತರಗತಿ ಎಲ್ಲಿ ನಡೆಸುವುದು ಎಂಬುದು ಪ್ರಶ್ನೆಯಾಗಿದೆ. ಈ ಬಗ್ಗೆ ಹಾಜಬ್ಬ ಅವರು ಜನಪ್ರತಿನಿಧಿಗಳ ಮೂಲಕ ಸರ್ಕಾರದ ಗಮನ ಸೆಳೆದರೂ ಕಟ್ಟಡ ನಿರ್ಮಾಣಕ್ಕೆ ಅನುದಾನ ಭರವಸೆಯಾಗಿಯೇ ಉಳಿದಿದೆ.
ಕುಸಿದ ಕಂಪೌಂಡ್ ಮರು ನಿರ್ಮಾಣಪಿಯು ಕಾಲೇಜು ಕಟ್ಟಡಕ್ಕೆ ಮೀಸಲಿರಿಸಿದ 1.30 ಎಕರೆ ಜಾಗದಲ್ಲಿ ಕಳೆದ ಬಾರಿ ನಿರ್ಮಿಸಿದ ಕಂಪೌಂಡ್, ಮಳೆಗೆ ಕುಸಿದು ಬಿದ್ದಿತ್ತು. ಬಳಿಕ ಮತ್ತೆ ಕಂಪೌಂಡ್ ನಿರ್ಮಿಸಲಾಗಿದೆ. ಕಂಪೌಂಡ್ ಒಳಗೆ ಕೊಳವೆ ಬಾವಿ ಕೊರೆಯಲಾಗಿದೆ. ಸಂಸದರು, ಶಾಸಕರು ಹಾಗೂ ವಿವಿಧ ಕಂಪನಿಗಳಿಂದ ನೆರವು ಪಡೆಯಲಾಗಿದೆ. ಇಲ್ಲಿ ಕಟ್ಟಡ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ 5.30 ಕೋಟಿ ರು.ಗಳ ಅಂದಾಜುಪಟ್ಟಿ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಿದೆ. ಪಿಯು ಶಿಕ್ಷಣ ಇಲಾಖೆಯಲ್ಲಿ ಕಡತ ಮಂಜೂರುಗೊಳ್ಳದೆ ಹಾಗೆಯೇ ಉಳಿದುಕೊಂಡಿದೆ. ಹೀಗಾಗಿ ಇಲ್ಲಿ ವರೆಗೆ ಯಾವುದೇ ಅನುದಾನ ಕಟ್ಟಡ ನಿರ್ಮಾಣಕ್ಕೆ ಬಿಡುಗಡೆಯಾಗಿಲ್ಲ. ಈ ಬಗ್ಗೆ ಸ್ಪೀಕರ್, ಸಂಸದರು, ಸಚಿವರನ್ನು ಸಂಪರ್ಕಿಸಿ ಹಾಜಬ್ಬ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಪಿಯು ಕಟ್ಟಡವನ್ನು ಉದ್ದೇಶಿತ ಕಾರ್ಯಕ್ಕೆ ಎರಡು ವರ್ಷದೊಳಗೆ ನಿರ್ಮಿಸುವಂತೆ ಆಗಿನ ಸಹಾಯಕ ಕಮಿಷನರ್‌ರು ಮಂಜೂರಾತಿ ಪತ್ರ(21-11-2022)ದಲ್ಲಿ ಉಲ್ಲೇಖಿಸಿದ್ದರು. ಜಾಗ ಮಂಜೂರಾದರೂ ಅನುದಾನ ಸಿಗದೆ ಕೈಕಟ್ಟಿ ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ. ಏನಿದು ಹಾಜಬ್ಬರ ಶಾಲೆ?
ಪಿಯು ಕಾಲೇಜಿಗೆ ಕಾದಿರಿಸಿದ ಜಾಗದಲ್ಲಿ ಕಟ್ಟಡ ನಿರ್ಮಿಸುವ ಬಗ್ಗೆ ಅನುದಾನ ನೀಡುವಂತೆ ಕೋರಿ ಸ್ಪೀಕರ್, ಶಿಕ್ಷಣ ಸಚಿವರಿಗೆ ಪತ್ರ ಬರೆಯಲಾಗಿದೆ. ಪಿಯು ಶಿಕ್ಷಣ ಇಲಾಖೆಯಲ್ಲಿ ಕಡತ ಬಾಕಿಯಾಗಿದೆ. ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಕಟ್ಟಡ ನಿರ್ಮಾಣಗೊಂಡರೆ ಮಕ್ಕಳಿಗೆ ಬಹಳ ಉಪಕಾರವಾಗುತ್ತದೆ.
-ಹರೇಕಳ ಹಾಜಬ್ಬ, ಹರೇಕಳ ಶಾಲಾ ಸ್ಥಾಪನೆಯ ರೂವಾರಿ
ಈ ಬಾರಿ ಲಭ್ಯವಾದ 2 ಕೋಟಿ ರು. ಅನುದಾನವನ್ನು ಹೆಚ್ಚಿನ ಮಕ್ಕಳಿರುವ ದೇರಳಕಟ್ಟೆ ಪಿಯು ಕಾಲೇಜು ಕಟ್ಟಡಕ್ಕೆ ಮೀಸಲಿರಿಸಲಾಗಿದೆ. ಹರೇಕಳ ಹಾಜಬ್ಬರ ಶಾಲೆಯಲ್ಲಿ ಮಕ್ಕಳ ಕೊರತೆಯಾಗದಂತೆ ನೋಡಿಕೊಳ್ಳಲು ಪ್ರತ್ಯೇಕ ಸಮಿತಿ ರಚಿಸಲಾಗಿದೆ. ಮಕ್ಕಳ ಸಂಖ್ಯೆ ಹೆಚ್ಚಾದರೆ ಮುಂದಿನ ವರ್ಷವೇ ಪಿಯು ಕಾಲೇಜಿಗೆ ಸ್ವಂತ ಕಟ್ಟಡ ಭಾಗ್ಯ ಸಿಗಲಿದೆ. -ಯು.ಟಿ.ಖಾದರ್, ಸ್ಥಳೀಯ ಶಾಸಕರು, ಸ್ಪೀಕರ್ ವಿಧಾನಸಭೆ ಕರ್ನಾಟಕ