- ಸಾರಥಿ ಗ್ರಾಮದಲ್ಲಿ ಎನ್ನೆಸ್ಸೆಸ್ ವಿಶೇಷ ವಾರ್ಷಿಕ ಶಿಬಿರದಲ್ಲಿ ಕುಂದೂರು ಮಂಜಪ್ಪ
ಕನ್ನಡಪ್ರಭ ವಾರ್ತೆ ಹರಿಹರ
ರೈತರನ್ನು ಶೋಷಣೆ ಮುಕ್ತಗೊಳಿಸುವ ಇಚ್ಛಾಶಕ್ತಿ ಯಾವ ಸರ್ಕಾರಗಳಿಗೂ ಇಲ್ಲವಾಗುತ್ತಿದೆ ಎಂದು ತಾಲೂಕಿನ ಹೊಳೆಸಿರಿಗೆರೆ ಗ್ರಾಮದ ಪ್ರಗತಿಪರ ರೈತ ಕುಂದೂರು ಮಂಜಪ್ಪ ಬೇಸರ ವ್ಯಕ್ತಪಡಿಸಿದರು.ತಾಲೂಕಿನ ಸಾರಥಿ ಗ್ರಾಮದಲ್ಲಿ ಭಾನುವಾರ ನಡೆದ ಗಿರಿಯಮ್ಮ ಆರ್.ಕಾಂತಪ್ಪ ಶ್ರೇಷ್ಠಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ೨೦೨೫-೨೬ನೇ ಸಾಲಿನ ಎನ್.ಎಸ್.ಎಸ್. ವಿಶೇಷ ವಾರ್ಷಿಕ ಶಿಬಿರದಲ್ಲಿ ‘ರೈತರ ಸಮಸ್ಯೆಗಳು ಮತ್ತು ಸವಾಲುಗಳು’ ವಿಷಯ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.
1 ಕ್ಷಿಂಟಲ್ ಭತ್ತಕ್ಕೆ ₹೪೦೦೦ ದರ ನೀಡದೇ, ₹೨೦೦೦ ನೀಡಿದರೆ ರೈತನಿಗೆ 1 ಎಕರೆಗೆ ಕನಿಷ್ಠ ₹೬೦,೦೦೦ ನಷ್ಟವಾಗುತ್ತದೆ. ಈ ನಷ್ಟದ ಲೆಕ್ಕಾಚಾರ ಮೆಕ್ಕೆಜೋಳ, ಕಬ್ಬು, ತೊಗರಿ, ಜೋಳ ಸೇರಿದಂತೆ ತೋಟಗಾರಿಕೆಯ ವಿವಿಧ ಬೆಳೆಗಳಿಗೂ ಅನ್ವಯಿಸುತ್ತದೆ. ರೈತರು ಬೆಳೆದ ಉತ್ಪನ್ನಗಳಿಗೆ ಸರ್ಕಾರ ವೈಜ್ಞಾನಿಕ ಬೆಲೆ ನಿಗದಿಪಡಿಸಿದರೆ, ರಾಜ್ಯ ಮತ್ತು ಕೇಂದ್ರ ಸರ್ಕಾರ ಯಾವುದೇ ಚಾಕೊಲೇಟ್ ರೀತಿಯ ರಿಯಾಯಿತಿಗಳನ್ನು ನೀಡುವ ಅಗತ್ಯವೇ ಬರುವುದಿಲ್ಲ. ಕೃಷಿ ಆಧಾರಿತ ಆಹಾರ ಸಂಸ್ಕರಣಾ ಕಾರ್ಖಾನೆಗಳು ಬಹುತೇಕ ರಾಜಕಾರಣಿಗಳದಾಗಿವೆ. ಇತರೆ ಉದ್ಯಮಿಗಳಿಗೆ ಲಾಭ ಮಾಡುವುದು ಸರ್ಕಾರಗಳ ಗುರಿಯಾಗಿದೆ ಎಂದು ಆರೋಪಿಸಿದರು.
ಒಡಕಿನಲ್ಲಿ ಛಿದ್ರವಾಗಿರುವ ರೈತ ಸಂಘಟನೆಗಳು ಒಂದೇ ವೇದಿಕೆಗೆ ಬರಬೇಕು. ಕೃಷಿ ವಿಜ್ಞಾನಿಗಳು ನೈಜಸ್ಥಿತಿಯನ್ನು ಪ್ರಸ್ತುತಪಡಿಸಬೇಕು. ಅತಿಯಾದ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಕೆಗೆ ಪರ್ಯಾಯವನ್ನು ಕಲ್ಪಿಸಿ ವಿಷವಾಗುತ್ತಿರುವ ಮಣ್ಣನ್ನು ಆರೋಗ್ಯಪೂರ್ಣಗೊಳಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಸವಾಲು ನಮ್ಮ ಮುಂದಿದೆ ಎಂದು ಕುಂದೂರು ಮಂಜಪ್ಪ ಅಭಿಪ್ರಾಯಪಟ್ಟರು.
- - -
ಎನ್.ಎಸ್.ಎಸ್. ವಿಶೇಷ ವಾರ್ಷಿಕ ಶಿಬಿರದಲ್ಲಿ ಪ್ರಗತಿಪರ ರೈತ ಕುಂದೂರು ಮಂಜಪ್ಪ ಅವರನ್ನು ಗೌರವಿಸಲಾಯಿತು.