ಕೊಳೆಗೇರಿ ಜನರ ಅಭಿವೃದ್ಧಿಗೆ ಬಜೆಟ್‌ನಲ್ಲಿ ಅನುದಾನ ಘೋಷಿಸಿಲ್ಲ: ಎಸ್.ಎಲ್.ಆನಂದಪ್ಪ

KannadaprabhaNewsNetwork | Published : Feb 19, 2024 1:33 AM

ಸಾರಾಂಶ

ಪ್ರತಿ ಬಜೆಟ್‌ನಲ್ಲಿ ಸ್ಲಂ ನಿವಾಸಿಗಳ ನಿರೀಕ್ಷೆಯಾದ ವಸತಿ ಹಕ್ಕು ಖಾತ್ರಿ, ಸ್ಲಂ ಅಭಿವೃದ್ಧಿ ಮಸೂದೆ, ಕೊಳೆಗೇರಿ ಜನಸಂಖ್ಯೆಗೆ ಅನುಗುಣವಾಗಿ ಪಾಲು, ಲ್ಯಾಂಡ್ ಬ್ಯಾಂಕ್‌ ನೀತಿ, ನಿವೇಶನ ರಹಿತರ ಸಮಸ್ಯೆ, ನಗರ ಉದ್ಯೋಗ ಖಾತರಿ, ಹಕ್ಕುಪತ್ರ ಮತ್ತು ಕ್ರಮ ಪತ್ರಗಳ ತ್ವರಿತ ನೋಂದಣಿಗಳ ಬಗ್ಗೆ ಉಲ್ಲೇಖವಿರಲೆಂಬ ಸ್ಲಂ ಜನಾಂದೋಲನದ ಮನವಿ ಬಗ್ಗೆ ಬಜೆಟ್ ನಲ್ಲಿ ಪ್ರಸ್ತಾಪವೇ ಇಲ್ಲ.

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯ ಸರ್ಕಾರದ 2024-25ನೇ ಸಾಲಿನ ಬಜೆಟ್ ನಲ್ಲಿ ಕೊಳೆಗೇರಿ ನಿವಾಸಿಗಳ ಬೇಡಿಕೆಗಳ ಈಡೇರಿಸದ ಹಿನ್ನೆಲೆಯಲ್ಲಿ ಸಾಮಾಜಿಕ ನ್ಯಾಯದಡಿ ಪೂರಕ ಬಜೆಟ್‌ನಲ್ಲಿ ಸ್ಲಂ ನಿವಾಸಿಗಳ ಬೇಡಿಕೆಗಳ ಈಡೇರಿಸುವಂತೆ ಸ್ಲಂ ಜನಾಂದೋಲನ ಕರ್ನಾಟಕದ ಜಿಲ್ಲಾ ಗೌರವಾಧ್ಯಕ್ಷ ಎಸ್.ಎಲ್.ಆನಂದಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಒತ್ತಾಯಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ಬಜೆಟ್‌ನಲ್ಲಿ ಸ್ಲಂ ನಿವಾಸಿಗಳ ನಿರೀಕ್ಷೆಯಾದ ವಸತಿ ಹಕ್ಕು ಖಾತ್ರಿ, ಸ್ಲಂ ಅಭಿವೃದ್ಧಿ ಮಸೂದೆ, ಕೊಳೆಗೇರಿ ಜನಸಂಖ್ಯೆಗೆ ಅನುಗುಣವಾಗಿ ಪಾಲು, ಲ್ಯಾಂಡ್ ಬ್ಯಾಂಕ್‌ ನೀತಿ, ನಿವೇಶನ ರಹಿತರ ಸಮಸ್ಯೆ, ನಗರ ಉದ್ಯೋಗ ಖಾತರಿ, ಹಕ್ಕುಪತ್ರ ಮತ್ತು ಕ್ರಮ ಪತ್ರಗಳ ತ್ವರಿತ ನೋಂದಣಿಗಳ ಬಗ್ಗೆ ಉಲ್ಲೇಖವಿರಲೆಂಬ ಸ್ಲಂ ಜನಾಂದೋಲನದ ಮನವಿ ಬಗ್ಗೆ ಬಜೆಟ್ ನಲ್ಲಿ ಪ್ರಸ್ತಾಪವೇ ಇಲ್ಲ ಎಂದರು.

ವಸತಿ ಇಲಾಖೆಯಡಿ 6ನೇ ಗ್ಯಾರಂಟಿಯಾಗಿ ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಫಲಾನುಭವಿಗಳ ವಂತಿಕೆಯನ್ನು ಭರಿಸಲು ತೀರ್ಮಾನಿಸಿದ್ದು, ಕೊಳೆಗೇರಿ ಅಭಿವೃದ್ಧಿ ಮಂಡಳಿ ವ್ಯಾಪ್ತಿಯ 1,18,359 ಮನೆಗಳ ನಿರ್ಮಾಣದ ಗುರಿ ಹೊಂದಲಾಗಿದೆ. ಶೀಘ್ರವೇ 48,796 ಮನೆಗಳನ್ನು ಕೊಳೆಗೇರಿ ನಿವಾಸಿಗಳಿಗೆ ಹಸ್ತಾಂತರಿಸುವುದಾಗಿ ಹೇಳಲಾಗಿದೆ. ಫಲಾನುಭವಿ ವಂತಿಗೆ 1 ಲಕ್ಷ ರು.ಗೆ ಹೆಚ್ಚಿಸಲಾಗಿದೆ. ರಾಜ್ಯ ಕೊಳೆಗೇರಿ ಜನರ ಸರ್ವತೋಮುಖ ಅಭಿವೃದ್ಧಿಗೆ ಸರಿ ಸುಮಾರು ₹1 ಸಾವಿರ ಕೋಟಿ ಬೇಕಾಗುತ್ತದೆ. ಬಜೆಟ್‌ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿಲ್ಲ. ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ ನಿಗದಿತವಾಗಿ ಕನಿಷ್ಠ 500-600 ಕೋಟಿ ರು.ಗಳ ಮೀಸಲಿಡಲಿ ಎಂದು ಆಗ್ರಹಿಸಿದರು.

ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಸ್ಥಿರ ಆಸ್ತಿಗಳಿಂದ ಸಂಪನ್ಮೂಲ ಸೃಜಿಸಲಾಗುವುದೆಂಬುದಾಗಿದೆ. ಇದು ಸರ್ಕಾರಗಳು ಸ್ಲಂಗಳ ಮೇಲಿಟ್ಟಿರುವ ಆರ್ಥಿಕ ತಾರತಮ್ಯದ ಸ್ಪಷ್ಟ ಧೋರಣೆಗೆ ಕೈಗನ್ನಡಿ. ಕೊಳಚೆ ಪ್ರದೇಶಗಳನ್ನು ಅಡಮಾನದ ಮಾನದಂಡಕ್ಕೆ ಒಳಪಡಿಸದಿದ್ದರೆ ಸ್ಲಂ ಜನರ ಬಳಿಯೇ ಉಳಿಯುತ್ತದೆ. ಬಜೆಟ್‌ನಲ್ಲಿ ವಸತಿ ರಹಿತರ ಸಮೀಕ್ಷೆಯ ಬಗ್ಗೆ ಉಲ್ಲೇಖಿಸುವುದು ಆಶಾದಾಯಕವಾದರೂ ಸ್ಲಂ ನಿವಾಸಿಗಳ ಸಮಸ್ಯೆಯೆಂದರೆ ವಸತಿ ಮಾತ್ರವಲ್ಲ ಎಂಬುದು ಸರ್ಕಾರ ಮನಗಾಣಬೇಕು ಎಂದು ತಿಳಿಸಿದರು.

ನಗರಾಭಿವೃದ್ಧಿ ಅಡಿಯಲ್ಲೂ ಯಾವುದೇ ಸ್ಲಂ ನಿವಾಸಿಗಳ ವಿಷಯಗಳೇ ಉಲ್ಲೇಖಿತವಾಗಿಲ್ಲ. ಬಿಬಿಎಂಪಿ ಸೇರಿದಂತೆ ಇತರೆ ಇಲಾಖೆ, ಮಂಡಳಿಗಳ ವ್ಯಾಪ್ತಿಯಲ್ಲಿ ಬರುವ ಸ್ಲಂಗಳ ಅಭಿವೃದ್ಧಿಯ ಕಾಯಕಲ್ಪವೇ ಕಾಣುತ್ತಿಲ್ಲ ಎಂದು ದೂರಿದರು. ಸಮಾಜ ಕಲ್ಯಾಣ ಇಲಾಖೆಯಡಿ ಪರಿಶಿಷ್ಟ ಜಾತಿ-ಪಂಗಡಗಳ ಉಪ ಹಂಚಿಕೆಯಡಿ 39 ಸಾವಿರ ಕೋಟಿ ನಿಗದಿಪಡಿಸಿದ್ದು, ಇದು ನೇರವಾಗಿ ನಿಜವಾದ ಫಲಾನುಭವಿಗಳಿಗೆ ತಲುಪಬೇಕಿದೆ. ಅಧಿಕಾರಿಗಳ ಜಾತಿ ತಾರತಮ್ಯ ಮತ್ತು ಬೇಜವಾಬ್ದಾರಿ ಧೋರಣೆಯಿಂದ ಪ್ರತಿ ವರ್ಷ ಖರ್ಚಾಗದೇ ಉಳಿಕೆಯಾಗುತ್ತಿರುವ ಅನುದಾನದ ಬಳಕೆ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ಎಸ್.ಎಲ್.ಆನಂದಪ್ಪ ಒತ್ತಾಯಿಸಿದರು.

ಸಂಘಟನೆ ಅಧ್ಯಕ್ಷ ಎಂ.ಶಬ್ಬೀರ್ ಸಾಬ್‌, ಪ್ರಧಾನ ಕಾರ್ಯದರ್ಶಿ ಜಿ.ಎಚ್.ರೇಣುಕಾ ಯಲ್ಲಮ್ಮ, ಮಹಮ್ಮದ್ ಯೂಸೂಫ್‌, ಮೆಹಬೂಬ್‌ ಸಾಬ್‌, ಜಂಷೀದಾ ಬಾನು ಇತರರಿದ್ದರು.

.........

Share this article