ನಾಳೆಯಿಂದ ಮೆಟ್ರೋ ಪ್ರಯಾಣ ದರ ಏರಿಕೆಯಿಲ್ಲ

KannadaprabhaNewsNetwork |  
Published : Feb 08, 2026, 02:15 AM ISTUpdated : Feb 08, 2026, 11:17 AM IST
MP Tejasvi Surya

ಸಾರಾಂಶ

ನಮ್ಮ ಮೆಟ್ರೋದ ವಾರ್ಷಿಕ ದರ ಶೇ. 5ರಷ್ಟು ಏರಿಕೆ ಸೋಮವಾರದಿಂದ ಜಾರಿಯಾಗುತ್ತಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ. ಈ ಸಂಬಂಧ ಶನಿವಾರ ತಮ್ಮ ‘ಎಕ್ಸ್‌’ ಖಾತೆಯಲ್ಲಿ ವಿಡಿಯೋ ಪೋಸ್ಟ್‌ ಮೂಲಕ ತಿಳಿಸಿದ್ದಾರೆ.

 ಬೆಂಗಳೂರು :  ನಮ್ಮ ಮೆಟ್ರೋದ ವಾರ್ಷಿಕ ದರ ಶೇ. 5ರಷ್ಟು ಏರಿಕೆ ಸೋಮವಾರದಿಂದ ಜಾರಿಯಾಗುತ್ತಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.

ಈ ಸಂಬಂಧ ಶನಿವಾರ ತಮ್ಮ ‘ಎಕ್ಸ್‌’ ಖಾತೆಯಲ್ಲಿ ವಿಡಿಯೋ ಪೋಸ್ಟ್‌ ಮೂಲಕ ತಿಳಿಸಿರುವ ಅವರು, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್‌ಲಾಲ್‌ ಕಟ್ಟರ್‌ ಅವರು ಬಿಎಂಆರ್‌ಸಿಎಲ್‌ ಅಧಿಕಾರಿಗಳಿಗೆ ದರ ಏರಿಕೆ ಮಾಡದಂತೆ ಸೂಚಿಸಿದ್ದಾರೆ. ಇದರಿಂದ ದರ ಏರಿಕೆಗೆ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದ್ದು, ನಮ್ಮ ಹೋರಾಟಕ್ಕೆ ಮೊದಲ ಹಂತದ ಜಯ ಸಿಕ್ಕಿದೆ ಎಂದು ತಿಳಿಸಿದ್ದಾರೆ.

ಮೆಟ್ರೋ ದರ ಏರಿಕೆ ಮಾಡದಂತೆ ಹೋರಾಟ

ಕಳೆದೊಂದು ವಾರದಿಂದ ನಾವು ಮೆಟ್ರೋ ದರ ಏರಿಕೆ ಮಾಡದಂತೆ ಹೋರಾಟ ಮಾಡುತ್ತಿದ್ದೆವು. ಎರಡು ದಿನಗಳ ಹಿಂದೆ ಸಚಿವ ಮನೋಹರ್‌ಲಾಲ್‌ ಕಟ್ಟರ್‌ ಅವರ ಜತೆಗೆ ಚರ್ಚಿಸಿ ದರ ಏರಿಕೆ ತಡೆಗಟ್ಟುವಂತೆ ಆಗ್ರಹಿಸಿದ್ದೆವು. ಜತೆಗೆ ಶನಿವಾರ ಕೂಡ, ಈಗಾಗಲೆ ಕಳೆದ ವರ್ಷ ದರ ಏರಿಕೆಯಲ್ಲಿ ಆಗಿರುವ ಲೋಪ ಹಾಗೂ ಅದರಿಂದ ಆಗಿರುವ ಸಮಸ್ಯೆ ಬಗ್ಗೆ ತಿಳಿಸಲಾಗಿತ್ತು. ಜತೆಗೆ ಅದನ್ನು ಪರಿಷ್ಕರಿಸುವಂತೆ ಒತ್ತಾಯಿಸಿದ್ದೆವು.

ಈಗ ಪುನಃ ರಾಜ್ಯ ಸರ್ಕಾರದ ಮೆಟ್ರೋ ದರ ಏರಿಕೆ ಕುರಿತಾದ ಪ್ರಸ್ತಾಪ ನಿಲ್ಲಿಸುವಂತೆ, ಪರಿಷ್ಕರಣೆ ಮಾಡುವಂತೆ ಒತ್ತಾಯಿಸಿದ್ದೆ. ಅದರಂತೆ ಸಚಿವರು ಬಿಎಂಆರ್‌ಸಿಎಲ್‌ ಅಧಿಕಾರಿಗಳಿಗೆ ಕರೆ ಮಾಡಿ ಸೋಮವಾರದಿಂದ ದರ ಏರಿಕೆಯನ್ನು ಮಾಡದಂತೆ ಸೂಚಿಸಿದ್ದೇವೆ. ಜತೆಗೆ ದರ ಏರಿಕೆ ಕುರಿತು ಸೋಮವಾರ ಸ್ಪಷ್ಟ ವಿವರಣೆ ನೀಡುವಂತೆ ಹೇಳಿದ್ದಾಗಿ ಸಚಿವರು ತಿಳಿಸಿದ್ದಾಗಿ ಸಂಸದ ಸೂರ್ಯ ಮಾಹಿತಿ ನೀಡಿದ್ದಾರೆ.

ರಾಜ್ಯದ ಪ್ರಸ್ತಾಪದ ಮೇರೆಗೆ ಏರಿಕೆ

ರಾಜ್ಯ ಸರ್ಕಾರದ ಪ್ರಸ್ತಾಪದ ಮೇರೆಗೆ ದರ ಏರಿಕೆಯಾಗಿದ್ದು, ಆದರೆ, ದರ ಏರಿಕೆಗೆ ಕೇಂದ್ರ ಕಾರಣ ಎಂದು ಸುಳ್ಳು ಹೇಳುತ್ತಿದೆ. ರಾಜ್ಯ ಸರ್ಕಾರ ಪುನಃ ದರ ಏರಿಕೆ ಮಾಡದಂತೆ ಒತ್ತಡ ಹೇರುವ ಕೆಲಸ ಮಾಡಬೇಕಿದೆ. ಜತೆಗೆ ಹೊಸದಾಗಿ ದರ ಪರಿಷ್ಕೃತ ಸಮಿತಿ ನೇಮಕಾತಿ ಮಾಡಿ, ಸಾಮಾನ್ಯ ಜನರು ಮೆಟ್ರೋದಲ್ಲಿ ಕೈಗೆಟಕುವ ದರದಲ್ಲಿ ಸಂಚಾರ ಮಾಡುವಂತಾಗಲು ಸಾಧ್ಯವಾಗಿಸುವಂತೆ ಒತ್ತಾಯಿಸುತ್ತೇವೆ. ಜತೆಗೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಎನ್ನದೆ ಬೆಂಗಳೂರಿಗರ ಪರವಾಗಿ ಸಂಸತ್ತಿನಲ್ಲಿ ಧ್ವನಿ ಎತ್ತುವುದಾಗಿ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸಿಎಂ ಗಾದಿ ಸಂಚಲನ : ನಾನು ಸಿಎಂ ಆಗಲಿ ಎಂಬುದು ಜನರ ಬಯಕೆ ಎಂದರು ಡಿಕೆಶಿ
ರೈಲ್ವೆ ಯೋಜನೆಗೆ ಭೂಮಿ ನೀಡಲು ರಾಜ್ಯ ಹಿಂದೇಟು