ದರ್ಶನ್‌ ಬ್ಯಾನ್‌ ಉದ್ದೇಶ ಇಲ್ಲ: ಫಿಲಂ ಚೇಂಬರ್‌

KannadaprabhaNewsNetwork |  
Published : Jun 14, 2024, 01:03 AM IST
ಸುರೇಶ್ | Kannada Prabha

ಸಾರಾಂಶ

‘ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್‌ ಅವರನ್ನು ಚಿತ್ರರಂಗದಿಂದ ಬ್ಯಾನ್‌ ಮಾಡುವ ಉದ್ದೇಶ ಸದ್ಯಕ್ಕೆ ನಮ್ಮ ಮುಂದೆ ಇಲ್ಲ’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್‌ ಎಂ ಸುರೇಶ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು‍

‘ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್‌ ಅವರನ್ನು ಚಿತ್ರರಂಗದಿಂದ ಬ್ಯಾನ್‌ ಮಾಡುವ ಉದ್ದೇಶ ಸದ್ಯಕ್ಕೆ ನಮ್ಮ ಮುಂದೆ ಇಲ್ಲ’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್‌ ಎಂ ಸುರೇಶ್‌ ಹೇಳಿದರು.

ಗುರುವಾರ ವಾಣಿಜ್ಯ ಮಂಡಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುರೇಶ್‌, ‘ದರ್ಶನ್‌ ಪ್ರಕರಣವನ್ನು ಚಿತ್ರರಂಗ ತೀವ್ರವಾಗಿ ಖಂಡಿಸುತ್ತದೆ. ಈ ಹಿಂದೆ ದರ್ಶನ್‌ ಅವರ ಕುಟುಂಬದಲ್ಲಿ ಕೌಟುಂಬಿಕ ಕಲಹ ನಡೆದಾಗ ನಾವೆಲ್ಲ ಸೇರಿ ಮಾತನಾಡಿ ಬಗೆಹರಿಸಿದ್ದೆವು. ಆದರೆ, ಇದು ಕೌಟುಂಬಿಕ ಕಲಹವಲ್ಲ. ಕೊಲೆ ಪ್ರಕರಣ. ಕಾನೂನು, ಪೊಲೀಸು ತನಿಖೆ ಆಗುತ್ತಿದೆ. ಕಾನೂನಿನ ಪ್ರಕ್ರಿಯೆ ನೋಡಿಕೊಂಡು ನಾವು ದರ್ಶನ್‌ ವಿಚಾರದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದರು.

‘ತಪ್ಪು ಮಾಡಿದವನು ಶಿಕ್ಷೆ ಅನುಭವಿಸಲೇಬೇಕು. ಇದರಲ್ಲಿ ಯಾರ ಪರವಾಗಿ ನಾವು ಇಲ್ಲ. ಈಗ ನಮಗೆ ದರ್ಶನ್‌ ಮುಖ್ಯ ಅಲ್ಲ. ಮೃತ ರೇಣುಕಾಸ್ವಾಮಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಬೇಕಿದೆ. ಅವರ ನೋವಿನಲ್ಲಿ ಚಿತ್ರರಂಗ ಭಾಗಿ ಆಗಬೇಕಿದೆ. ಹೀಗಾಗಿ ಶುಕ್ರವಾರ (ಜೂನ್‌ 14) ಚಲನಚಿತ್ರ ವಾಣಿಜ್ಯ ಮಂಡಳಿಯ ತಂಡ ಚಿತ್ರದುರ್ಗಕ್ಕೆ ಹೋಗಿ ರೇಣುಕಾಸ್ವಾಮಿ ಕುಟುಂಬವನ್ನು ಭೇಟಿ ಮಾಡಲಿದ್ದೇವೆ’ ಎಂದರು.

‘ಈ ಘಟನೆಯಿಂದ ಎಲ್ಲಾ ಸ್ಟಾರ್‌ ನಟರು ತಮ್ಮ ಅಭಿಮಾನಿಗಳನ್ನು ಜವಾಬ್ದಾರಿಯಿಂದ ನಡೆದುಕೊಳ್ಳುವಂತೆ ಸೂಚಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಎಚ್ಚರಿಕೆಯಿಂದ ವರ್ತಿಸುವಂತೆ ಅಭಿಮಾನಿಗಳಿಗೆ ಹೇಳಬೇಕು. ಕೆಟ್ಟ ಸಂದೇಶಗಳನ್ನು ಹಾಕುವುದು, ಫ್ಯಾನ್‌ ವಾರ್‌ ಮಾಡೋದನ್ನು ನಿಲ್ಲಿಸುವಂತೆ ಹೇಳಬೇಕು’ ಎಂದು ಸುರೇಶ್‌ ಅವರು ಸ್ಟಾರ್‌ ನಟರಲ್ಲಿ ಮನವಿ ಮಾಡಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ವಾಣಿಜ್ಯ ಮಂಡಳಿಯ ಪ್ರಮುಖರಾದ ಭಾ ಮ ಗಿರೀಶ್‌, ಕರಿಸುಬ್ಬ, ಕೆ ವಿ ಚಂದ್ರಶೇಖರ್‌ ಮುಂತಾದವರು ಹಾಜರಿದ್ದರು. ದರ್ಶನ್‌ ಮೇರುನಟ ಎಂದಿದ್ದಕ್ಕೆ ಆಕ್ಷೇಪ

ಪತ್ರಿಕಾಗೋಷ್ಟಿಯಲ್ಲಿ ಎನ್‌ ಎಂ ಸುರೇಶ್‌ ಮಾತನಾಡುವಾಗ ದರ್ಶನ್‌ ಅವರನ್ನು ‘ಮೇರುನಟ’ ಎಂದು ಕರೆದಿದ್ದಕ್ಕೆ ಮಾಧ್ಯಮಗಳು ತೀವ್ರವಾಗಿ ಆಕ್ಷೇಪ ವ್ಯಕ್ತ ಪಡಿಸಿದವು. ‘ಡಾ. ರಾಜ್‌ಕುಮಾರ್‌ ಅವರಂತಹ ಕಲಾವಿದರನ್ನು ಮೇರುನಟ ಎನ್ನುವುದು. ದರ್ಶನ್‌ ಅವರಿಗೆ ಅಲ್ಲ’ ಎಂದಾಗ ‘ಆಯ್ತು ಸಾರ್‌, ಮೇರುನಟ ಎನ್ನುವ ಹೇಳಿಕೆಯನ್ನು ವಾಪಸ್ಸು ಪಡೆಯುತ್ತೇನೆ’ ಎಂದು ಹೇಳಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ