ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರಿಗೆ ಕಿವಿಮಾತು ಹೇಳಿದ ಶ್ರೀಗಳು
ಕನ್ನಡಪ್ರಭ ವಾರ್ತೆ ಸಿರಿಗೆರೆಮದ್ಯವ್ಯಸನದಿಂದ ಹಳ್ಳಿಗರ ಬದುಕು ತೀರಾ ಅಸಹನೀಯವಾಗಿದೆ. ಹಳ್ಳಿಗರು ತಮ್ಮ ಗ್ರಾಮದಲ್ಲಿ ಮದ್ಯ ಮಾರಾಟ ಬೇಡವೆಂದರೆ ನಿಲ್ಲಿಸುವಂತಹ ಕಟ್ಟುನಿಟ್ಟಿನ ಕೆಲಸವನ್ನು ಇಲಾಖೆ ಮಾಡಬೇಕು ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರಿಗೆ ಕಿವಿಮಾತು ಹೇಳಿದರು.
ಬೃಹನ್ಮಠದ ಸದ್ಧರ್ಮ ನ್ಯಾಯಪೀಠದಲ್ಲಿ ತಮ್ಮ ಪುತ್ರ ವಿನಯ್ ತಿಮ್ಮಾಪುರ ಜೊತೆಗೂಡಿ ಆಶೀರ್ವಾದ ಪಡೆದ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಅಬಕಾರಿ ವ್ಯವಹಾರ ಮಾಡುವ ಉದ್ದಿಮೆದಾರರು ಪ್ರತಿವರ್ಷವೂ ಸರ್ಕಾರದಿಂದ ಪರವಾನಗಿ ಪಡೆಯುವಂತಹ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದರು.ಹಳ್ಳಿಗಳಲ್ಲಿ ವ್ಯಾಪಾರ, ಉದ್ದಿಮೆ ಆರಂಭಿಸಲು ಪ್ರತಿವರ್ಷವೂ ನಿಗದಿತ ಶುಲ್ಕ ನೀಡಿ ಗ್ರಾಮ ಪಂಚಾಯತಿಯಿಂದ ಪರವಾನಗಿ ಪಡೆಯಬೇಕಾಗಿದೆ. ಅದರಂತೆ ಮದ್ಯ ಮಾರಾಟ ಮಾಡುವವರೂ ಸಹ ಗ್ರಾಪಂ ಪರವಾನಗಿ ಪಡೆಯುವುದು ಕಡ್ಡಾಯಗೊಳಿಸಬೇಕು. ಹಳ್ಳಿಗರ ತಮ್ಮ ಊರಿನಲ್ಲಿ ಮದ್ಯ ಮಾರಾಟ ಬೇಡವೆಂದು ಅಹವಾಲು ಸಲ್ಲಿಸಿದರೆ ಕೂಡಲೇ ಪರವಾನಗಿ ಹಿಂದಕ್ಕೆ ಪಡೆಯಬೇಕು. ಇಂತಹ ನಿಯಮವನ್ನು ಜಾರಿಗೆ ತರಬೇಕೆಂದು ಶ್ರೀಗಳು ತಿಳಿಸಿದರು.
ಹೊಸ ಮದ್ಯದಂಗಡಿ ಬೇಡ:ಮದ್ಯದ ಹಾವಳಿ ಮಿತಿ ಮೀರಿದೆ. ಸರ್ಕಾರವು ಹೊಸದಾಗಿ ಮತ್ತೆ ೧೦೦೦ ಮದ್ಯದಂಗಡಿಗಳನ್ನು ತೆರೆಯಲು ಮುಂದಾಗಿದೆ ಎಂದು ಕೇಳಿದ್ದೇವೆ. ಅಂತಹ ಕೆಲಸ ಮಾಡಬೇಡಿ. ಇರುವ ಅಂಗಡಿಗಳಿಗೂ ಕಡಿವಾಣ ಹಾಕಿ. ಯುವಕರಿಗೆ ಸುಲಭವಾಗಿ ಮದ್ಯ ಸಿಗದಂತೆ ನಿಗಾವಹಿಸಿ ಎಂದು ಸಲಹೆ ನೀಡಿದರು.
ಹೊಸ ಅಂಗಡಿಗಳು ಇಲ್ಲ:ಕೆಲವು ದಿನಗಳ ಹಿಂದೆ ಹಿರಿಯ ಅಧಿಕಾರಿಗಳು ರಾಜ್ಯದಲ್ಲಿ ಹೊಸದಾಗಿ ೧೦೦೦ ಮದ್ಯದ ಅಂಗಡಿಗಳನ್ನು ತೆರೆಯುವ ಪ್ರಸ್ತಾವ ಮುಂದಿಟ್ಟಿದ್ದರು. ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈಗಾಗಲೇ ಸ್ಪಷ್ಟೀಕರಣ ನೀಡಿದ್ದಾರೆ. ರಾಜ್ಯದಲ್ಲಿ ಎಲ್ಲಿಯೂ ಹೊಸದಾಗಿ ಮದ್ಯದ ಅಂಗಡಿ ತೆರೆಯುವುದಿಲ್ಲ ಎಂದರು. ಶ್ರೀಗಳ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು ಅಬಕಾರಿಯಿಂದ ೩೬ ಸಾವಿರ ಕೋಟಿ ರು. ಆದಾಯ ಬರುತ್ತಿದೆ ಎಂದರು. ತಮ್ಮ ಪುತ್ರ ವಿನಯ ತಿಮ್ಮಾಪುರ ಅವರನ್ನು ಸಚಿವರು ಶ್ರೀಗಳಿಗೆ ಪರಿಚಯಿಸಿ, ಮುಂಬರುವ ಲೋಕಸಭಾ ಚುನಾವಣೆಗೆ ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಬಯಸಿರುವುದಾಗಿ ಶ್ರೀಗಳಿಗೆ ತಿಳಿಸಿದರು.
ಈ ಸಂದಂರ್ಭದಲ್ಲಿ ಹೊಳಲ್ಕೆರೆ ಮಾಜಿ ಶಾಸಕ ಎ.ವಿ.ಉಮಾಪತಿ, ಲಕ್ಷ್ಮೀಸಾಗರ ಜಿಪಂ ಸದಸ್ಯ ಕೃಷ್ಣಮೂರ್ತಿ, ಹೊಳಲ್ಕೆರೆ ಯುವ ಕಾಂಗ್ರೆಸ್ ಮುಖಂಡ ರಘು, ಸಿರಿಗೆರೆ ಗ್ರಾಪಂ ಮಾಜಿ ಅಧ್ಯಕ್ಷ ಎಂ.ಜಿ. ದೇವರಾಜ್, ಮತ್ತಿತರರು ಹಾಜರಿದ್ದರು.----------ಚಿತ್ರದುರ್ಗ ಲೋಕಸಭೆ ಸ್ಥಾನ ಗೆಲ್ಲಲು ಕಾಂಗ್ರೆಸ್ ಸಮರ್ಥ ಸಿರಿಗೆರೆ: ಚಿತ್ರದುರ್ಗ ಲೋಕಸಭೆಯ ಸ್ಥಾನವನ್ನು ಕಾಂಗ್ರೆಸ್ ಗೆಲ್ಲಲು ಸಮರ್ಥವಾಗಿದೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
ಭರಮಸಾಗರದ ಕಾಂಗ್ರೆಸ್ ಮುಖಂಡ ಎಚ್.ಎನ್. ತಿಪ್ಪೇಸ್ವಾಮಿ ಅವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಂದು ಕ್ಷೇತ್ರವನ್ನು ಹೊರತುಪಡಿಸಿ ಎಲ್ಲಾ ಕಡೆಯೂ ಕಾಂಗ್ರೆಸ್ ಶಾಸಕರು ಇದ್ದಾರೆ. ಕಾರ್ಯಕರ್ತರ ಪಡೆ ಇದೆ. ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿ ಕಾಂಗ್ರೆಸ್ ಗೆಲ್ಲುವಂತೆ ಮಾಡಲಿದ್ದಾರೆ ಎಂದರು.ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮಧ್ಯೆ ಆಗಿರುವ ಮೈತ್ರಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗಲಿದೆ. ಲೋಕಸಭೆಗೆ ಯಾರೇ ಅಭ್ಯರ್ಥಿಗಳಾದರೂ ತಳಮಟ್ಟದಲ್ಲಿರುವ ಕಾರ್ಯಕರ್ತರು ಪಕ್ಷದ ಅಭ್ಯರ್ಥಿಯ ಗೆಲುವಿಗೆ ಒಗ್ಗಟ್ಟಾಗಿ ಶ್ರಮಿಸಬೇಕೆಂದರು.