ನವೆಂಬರ್‌ನಲ್ಲಿ ನಡೆಯುವ ರಾಷ್ಟ್ರೀಯ ನಾಟಕೋತ್ಸವದಲ್ಲಿ ಪ್ರದಾನ ಕನ್ನಡಪ್ರಭ ವಾರ್ತೆ ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾಸಂಘ ರಂಗಭೂಮಿಗೆ ಸಲ್ಲಿಸಿದ ಜೀವಮಾನದ ಕೊಡುಗೆಯನ್ನು ಮನ್ನಿಸಿ ಪ್ರತಿವರ್ಷ ಕೊಡಮಾಡುವ ಪ್ರತಿಷ್ಠಿತ ಶ್ರೀ ಶಿವಕುಮಾರ ಪ್ರಶಸ್ತಿಗೆ ಈ ಬಾರಿ ಬೆಂಗಳೂರು ಹಿರಿಯ ರಂಗಕರ್ಮಿ ಶಶಿಧರ ಅಡಪ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಶ್ರೀಗಳುನ 2004 ರಿಂದ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ ಹೆಸರಿನಲ್ಲಿ ಶ್ರೀ ಶಿವಕುಮಾರ ಪ್ರಶಸ್ತಿಯನ್ನು ನಮ್ಮ ಕಲಾಸಂಘವು ಕೊಡುತ್ತಾ ಬಂದಿದೆ. ರಂಗಭೂಮಿ, ರಂಗಚಟುವಟಿಕೆಗಳಲ್ಲಿ, ಮಹತ್ವದ ಸಾಧನೆ ಮಾಡಿದ ಹಿರಿಯ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡುತ್ತಾ ಬರಲಾಗಿದೆ ಎಂದರು. ಇದುವರೆಗೂ ಪ್ರಸನ್ನ (೨೦೦೪), ಸಿಜಿಕೆ (೨೦೦೫), ಪಿ ಜಿ ಗಂಗಾಧರಸ್ವಾಮಿ (೨೦೦೬), ಅಶೋಕ ಬಾದರದಿನ್ನಿ (೨೦೦೭), ಮಾಲತಿಶ್ರೀ (೨೦೦೮), ೨೦೦೯ರಲ್ಲಿ ಅತಿವೃಷ್ಠಿ ಕಾರಣ ನೀಡಿಲ್ಲ. ಸಿ ಬಸವಲಿಂಗಯ್ಯ (೨೦೧೦), ಬಿ ಜಯಶ್ರೀ (೨೦೧೧), ಡಾ. ಕೆ ಮರುಳಸಿದ್ಧಪ್ಪ (೨೦೧೨), ಚಿದಂಬರರಾವ್ ಜಂಬೆ (೨೦೧೨), ಕೋಟಗಾನಹಳ್ಳಿ ರಾಮಯ್ಯ (೨೦೧೪), ಡಾ. ಸುಭದ್ರಮ್ಮ ಮನ್ಸೂರು (೨೦೧೫), ಲಕ್ಷ್ಮೀ ಚಂದ್ರಶೇಖರ್ (೨೦೧೬), ಶ್ರೀನಿವಾಸ ಜಿ ಕಪ್ಪಣ್ಣ (೨೦೧೭), ಬಸವರಾಜ ಬೆಂಗೇರಿ (೨೦೧೮), ಟಿ ಎಸ್ ನಾಗಾಭರಣ (೨೦೧೯), ೨೦೨೦ರಲ್ಲಿ ಕರೋನಾ ಕಾರಣದಿಂದ ನೀಡಿಲ್ಲ. ಕೆ ವಿ ನಾಗರಾಜಮೂರ್ತಿ (೨೦೨೧), ಡಾ. ಎಂ ಜಿ ಈಶ್ವರಪ್ಪ (೨೦೨೨) ಇವರಿಗೆ ನೀಡಲಾಗಿದೆ. ಈ ವರ್ಷ ಈ ಪ್ರಶಸ್ತಿಗೆ ಅರ್ಹರಾದ ಶಶಿಧರ ಅಡಪ ಓರ್ವ ರಂಗಕರ್ಮಿ, ರಂಗಸಂಘಟಕ, ಕಲಾವಿದ, ಕಲಾನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಶಿವಸಂಚಾರಕ್ಕೆ ಒಡಲಾಳ ಮತ್ತು ವಿನುರ ವೇಮ ಈ ಎರಡು ನಾಟಕಕ್ಕೆ ರಂಗವಿನ್ಯಾಸ ಮಾಡಿದ್ದಾರೆ. ನಮ್ಮ ನಾಟಕೋತ್ಸವದ ವೇದಿಕೆ ವಿನ್ಯಾಸ ಮಾಡಿದಂಥವರು. ಸಿಜಿಕೆ ಹೆಸರಿನಲ್ಲಿ ನಡೆಸುವ ರಂಗೋತ್ಸವ ಮಾಡುವಲ್ಲಿ ಬೆಂಗಳೂರಿನಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಕರ್ನಾಟಕದಲ್ಲಿ ಎಲ್ಲೇ ರಂಗಚಟುವಟಿಕೆ ನಡೆದರೂ ಅದಕ್ಕೆ ಬೆನ್ನೆಲುಬಾಗಿ ತೆರೆಮರೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು. ೨೦೧೯ರಲ್ಲಿ ಕರ್ನಾಟಕದ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ನಡೆದ `ಮತ್ತೆ ಕಲ್ಯಾಣ'''''''' ಅಭಿಯಾನದಲ್ಲಿ ೧೨ನೆಯ ಶತಮಾನವನ್ನು ನೆನಪು ತರುವಂಥ ಸುಂದರ ಸ್ತಬ್ಧಚಿತ್ರ (ಟ್ಯಾಬ್ಲೋ) ವಿನ್ಯಾಸ ಮಾಡಿ ಮತ್ತೆ ಕಲ್ಯಾಣ ಯಶಸ್ವಿಯಾಗಲಿಕ್ಕೆ ಕಾರಣಕರ್ತರು. ಇದನ್ನು ಇನ್ನಷ್ಟು ವಿಸ್ತರಿಸಿ ೨೦೨೦ರಂದು ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಸ್ತಬ್ಧಚಿತ್ರ (ಟ್ಯಾಬ್ಲೋ) ದೊಂದಿಗೆ ನಮ್ಮ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ ಕಲಾವಿದರು ಭಾಗವಹಿಸಿ ಪ್ರದರ್ಶನ ನೀಡಿದ್ದು ಹೆಚ್ಚು ಮಾನ್ಯತೆ ನೀಡಿತು. ಅವರ ಈ ಎಲ್ಲ ಸಮಗ್ರ ಪ್ರಯತ್ನ, ಪರಿಶ್ರಮಗಳು ರಂಗಭೂಮಿಯ ಉಳಿವಿಗೆ, ಬೆಳವಣಿಗೆಗೆ ಪೂರಕವಾಗಿವೆ. ಆಯ್ಕೆ ಸಮಿತಿಯು ಇಂಥ ಇನ್ನೂ ಹತ್ತಾರು ಪ್ರತಿಭಾವಂತ ರಂಗಕರ್ಮಿಗಳನ್ನು ಗುರುತಿಸಿತ್ತಾದರೂ ನಾವು ಕೊಡುವ ಪ್ರಶಸ್ತಿ ಒಂದೇ ಆದ್ದರಿಂದ ಅಂತಿಮವಾಗಿ ಶಶಿಧರ ಅಡಪ ಅವರನ್ನು ಆಯ್ಕೆ ಮಾಡಿದೆ. ಇಂತಹ ಅಪರೂಪದ ಅಂತಾರಾಷ್ಟ್ರೀಯ ಕಲಾವಿದರಿಗೆ `ಶ್ರೀ ಶಿವಕುಮಾರ ಪ್ರಶಸ್ತಿ'''''''' ಪ್ರಕಟ ಆಗಿರುವಂಥದ್ದು ನಮಗಂತೂ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದರು. ಪ್ರಶಸ್ತಿಯು 50 ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿದ್ದು, ಪ್ರಶಸ್ತಿಯನ್ನು ಇದೇ ನವೆಂಬರ್ 2 ರಿಂದ 8 ರವರೆಗೆ ಸಾಣೇಹಳ್ಳಿಯಲ್ಲಿ ನಡೆಯುವ ರಾಷ್ಟ್ರೀಯ ನಾಟಕೋತ್ಸವ''''''''ದ ಸಮಾರೋಪ ಸಮಾರಂಭದ ದಿನ ಪ್ರದಾನ ಮಾಡಲಾಗುವುದು.