ಭಾರಿ ಬದಲಾವಣೆ ಇಲ್ಲ: ಜಾರಕಿಹೊಳಿ ಸ್ಪಷ್ಟನೆ

KannadaprabhaNewsNetwork |  
Published : Jun 27, 2025, 12:48 AM IST
ಸತೀಶ್‌ ಜಾರಕಿಹೊಳಿ | Kannada Prabha

ಸಾರಾಂಶ

ಮಾಧ್ಯಮಗಳು ಹೇಳಿದಂತೆ ವರ್ಷಾಂತ್ಯಕ್ಕೆ ಸರ್ಕಾರದ ಮಟ್ಟದಲ್ಲಿ ಭಾರೀ ಬದಲಾವಣೆಯೇನೂ ಆಗುವುದಿಲ್ಲ. ಆದರೆ, ಸಚಿವರ ಬದಲಾವಣೆ ಆಗಲಿದೆ ಎಂದು ಹಿರಿಯ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಾಧ್ಯಮಗಳು ಹೇಳಿದಂತೆ ವರ್ಷಾಂತ್ಯಕ್ಕೆ ಸರ್ಕಾರದ ಮಟ್ಟದಲ್ಲಿ ಭಾರೀ ಬದಲಾವಣೆಯೇನೂ ಆಗುವುದಿಲ್ಲ. ಆದರೆ, ಸಚಿವರ ಬದಲಾವಣೆ ಆಗಲಿದೆ ಎಂದು ಹಿರಿಯ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನೀವು (ಮಾಧ್ಯಮ) ಹೇಳಿದಂತೆ ಭಾರಿ ಬದಲಾವಣೆ ಆಗುವುದಿಲ್ಲ, ಸಚಿವರ ಬದಲಾವಣೆಯಾಗಬಹುದು. ವರಿಷ್ಠರು ಎಲ್ಲವನ್ನೂ ಗಮನಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ಶಾಸಕರದ್ದು ಕೇವಲ ವರ್ಗಾವಣೆ, ಅನುದಾನ ಸಮಸ್ಯೆ ಮಾತ್ರ ಇರುವುದಿಲ್ಲ, ಪ್ರತಿ ಕ್ಷೇತ್ರದಲ್ಲೂ ಬೇರೆ ಬೇರೆ ಸಮಸ್ಯೆ ಇರುತ್ತದೆ. ಪ್ರತಿ ಸಮಸ್ಯೆಯನ್ನು ಬೇರೆ ಬೇರೆ ರೀತಿ ನಿಭಾಯಿಸಬೇಕಾಗುತ್ತದೆ ಎಂದರು.

ಬಿಜೆಪಿ ಅಧ್ಯಕ್ಷರ ಬದಲಾವಣೆ ನೋಡಿಕೊಂಡು ರಾಜ್ಯ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಫಾರ್ಮುಲಾ ಬೇರೆ, ನಮ್ಮ ಫಾರ್ಮುಲಾ ಬೇರೆ. ಅವರ ತತ್ವ, ಸಿದ್ಧಾಂತ ಬೇರೆ, ಬಿಜೆಪಿಗೂ ನಮಗೂ ಬಹಳ ವ್ಯತ್ಯಾಸವಿದೆ. ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪ್ರಯತ್ನ ನಡೆಸಿಯೇ ಇಲ್ಲ.‌ ಪ್ರಯತ್ನ ನಡೆಸಿದ್ದರೆ ಮುಂದುವರೆಸಬಹುದು. ನಾನು ಎಲ್ಲಿದ್ದೆನೋ, ಅಲ್ಲೇ ಇದ್ದೇನೆ. ನಮ್ಮನ್ನು ಪುಶ್ ಮಾಡುವವರು ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೆಹಲಿ ಭೇಟಿ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಭೇಟಿಯಲ್ಲಿ ವಿಶೇಷವೇನೂ ಇಲ್ಲ. ಮುಖ್ಯಮಂತ್ರಿಗಳ ಜೊತೆ ದೆಹಲಿಗೆ ಹೋಗಿದ್ದೆವು, ರಾಷ್ಟ್ರಪತಿಗಳನ್ನು ಭೇಟಿ ಮಾಡಲಾಯಿತು. ದೆಹಲಿಗೆ ಹೋದ ವೇಳೆ ವರಿಷ್ಠರನ್ನು ಭೇಟಿ ಮಾಡುವುದು ಸಾಮಾನ್ಯ, ಭೇಟಿ ವೇಳೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆ ಆಗಿಲ್ಲ. ಎಂದರು.

-ಬಾಕ್ಸ್‌-

ಜಲಸಂಪನ್ಮೂಲ ಅನುದಾನ

ತಾರತಮ್ಯ ಸಿಎಂ ಗಮನಕ್ಕಿದೆ

ಜಲಸಂಪನ್ಮೂಲ ಇಲಾಖೆಯಿಂದ ಅನುದಾನ ಸಿಗುತ್ತಿಲ್ಲ, ಆಯ್ದ ಶಾಸಕರಿಗೆ ಮಾತ್ರ ಹೆಚ್ಚು ಅನುದಾನ ಸಿಗುತ್ತಿದೆ ಎಂದು ಶಾಸಕರು ಆರೋಪ ಮಾಡಿರುವ ವಿಷಯ ಈಗಾಗಲೇ ಮುಖ್ಯಮಂತ್ರಿಗಳ ಗಮನಕ್ಕೆ ಬಂದಿದೆ. ಈ ಬಗ್ಗೆ ಸಿದ್ದರಾಮಯ್ಯ ಈ ಸಮಸ್ಯೆ ಬಗೆಹರಿಸಲಿದ್ದಾರೆ ಎಂದು ಇದೇ ವೇಳೆ ಸತೀಶ್ ಜಾರಕಿಹೊಳಿ ತಿಳಿಸಿದರು.

ಜಲಸಂಪನ್ಮೂಲ ಇಲಾಖೆಯಿಂದ ಅನುದಾನ ದೊರೆಯುತ್ತಿಲ್ಲ, ತಮ್ಮ ಕ್ಷೇತ್ರದ ಬಸವೇಶ್ವರ ನೀರಾವರಿ ಯೋಜನೆ ಬಗ್ಗೆ ಹತ್ತಾರು ಬಾರಿ ಹೇಳಿದರೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಏನೂ ಕ್ರಮ ಕೈಗೊಂಡಿಲ್ಲ ಎಂದು ಶಾಸಕ ರಾಜು ಕಾಗೆ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಮೊದಲಿನಿಂದ ನೀರಾವರಿ ಸಮಸ್ಯೆ ಬಗ್ಗೆ ಅವರು ಹೇಳುತ್ತಿದ್ದಾರೆ. ಜಲಸಂಪನ್ಮೂಲ ಇಲಾಖೆಯಲ್ಲಿ ಅನುದಾನದ ಕೊರತೆ ಇಲ್ಲ. ಇಲಾಖೆಗೆ ಈ ವರ್ಷ 26 ಸಾವಿರ ಕೋಟಿ ನೀಡಲಾಗಿದೆ. ಅದೇ ರೀತಿ ಬಾಕಿ ಬಿಲ್​ಗಳು ಕೂಡ ಇವೆ. ಯಾವ ಸರ್ಕಾರ ಬಂದರೂ ಮೂರು ವರ್ಷದಷ್ಟು ಬಿಲ್ ಬಾಕಿ ಇದ್ದೇ ಇರುತ್ತವೆ ಎಂದರು.

ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಶಾಸಕರನ್ನು ಕರೆದು ಮಾತನಾಡಿ ಅವರಿಗೆ ಸಮಾಧಾನ ಮಾಡಬೇಕು. ಕೆಲ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಸಿಕ್ಕಿರಬಹುದು. ಹಾಗಾಗಿ ಈ ವರ್ಷ ಆಗದಿದ್ದರೆ ಮುಂದಿನ ವರ್ಷವಾದರೂ ಹೆಚ್ಚಿನ ಅನುದಾನ ಕೊಡಬೇಕಾಗುತ್ತದೆ. ಹೀಗಾಗಿ ರಾಜು ಕಾಗೆ ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ