- ಸಿಟಿಜನ್ಸ್ ಫಾರ್ ಸೋಶಿಯಲ್ ಜಸ್ಟೀಸ್ ನಿಂದ ತುರ್ತು ಪರಿಸ್ಥಿತಿ: ಒಂದು ಕರಾಳ ನೆನಪು ಕಾರ್ಯಕ್ರಮ
ತುರ್ತು ಪರಿಸ್ಥಿತಿ ಘೋಷಣೆ, ಪ್ರಜಾತಂತ್ರ ವ್ಯವಸ್ಥೆ ಕತ್ತನ್ನು ಹಿಚುಕಿದ, ಸಂವಿಧಾನದ ಹತ್ಯೆ ಮಾಡಿರುವ ದಿನ ಎಂದು ಉಡುಪಿ- ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.
ನಗರದ ರಂಗಣ್ಣನವರ ಛತ್ರದಲ್ಲಿ ಸಿಟಿಜನ್ಸ್ ಫಾರ್ ಸೋಶಿಯಲ್ ಜಸ್ಟೀಸ್ ನಿಂದ ಗುರುವಾರ ಆಯೋಜಿಸಲಾಗಿದ್ದ ತುರ್ತು ಪರಿಸ್ಥಿತಿ - ಒಂದು ಕರಾಳ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತುರ್ತು ಪರಿಸ್ಥಿತಿ ಅತ್ಯಂತ ಘೋರವಾದ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ಘಟನೆಯಾಗಿದೆ ಎಂದರು.ಬಡವರ ಕೇರಿಗಳಿಗೆ ನುಗ್ಗಿ ಗಂಡಸರ ಸಂತಾನಹರಣ ಮಾಡಿಸುವಂತಹ ಘೋರ ಕೃತ್ಯ ಮಾಡಿದರು. ಸುಮಾರು ಒಂದು ಕೋಟಿ ಜನರಿಗೆ ಬಲವಂತವಾಗಿ ಸಂತಾನಹರಣ ಮಾಡಿದರು. ಕರ್ನಾಟಕದಲ್ಲಿ ಐದು ಜನ ಜೈಲಿನಲ್ಲಿ ಸಾವನ್ನಪ್ಪಿದರು. ಭಾರತದಲ್ಲಿ 2 ಸಾವಿರಕ್ಕೂ ಹೆಚ್ಚು ಮಂದಿ ಜೈಲಿನಲ್ಲಿಯೇ ಸತ್ತರು. ಅಧಿಕಾರವನ್ನು ಉಳಿಸಿಕೊಳ್ಳಲು ತುರ್ತು ಪರಿಸ್ಥಿತಿ ಹೇರಿದರು. ಪ್ರಜಾಪ್ರಭುತ್ವದ ದೇಗುಲವಾಗಿರುವ ಪಾರ್ಲಿಮೆಂಟ್, ವಿಧಾನಸಭೆ, ವಿಧಾನಪರಿಷತ್ ಆಳುವವರ ಆಟದ ಅಂಗಳವಾದವು ಎಂದು ಹೇಳಿದರು.
ಪ್ರಧಾನ ಭಾಷಣ ಮಾಡಿದ ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಚನ್ನಬಸಪ್ಪ 1975 ರ ಕರಾಳ ದಿನಗಳು ಇಂದಿನ ಯುವ ಪೀಳಿಗೆಗೆ ಗೊತ್ತಿಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನ ಯಾವ ಯಾವ ಹಂತದಲ್ಲಿ ಕಗ್ಗೊಲೆ ಮಾಡಬಹುದು ಎಂಬುದನ್ನು ಆಗಿನ ಪ್ರಧಾನ ಮಂತ್ರಿ ಇಂದಿರಾಗಾಂಧಿಯವರು ಕಾಂಗ್ರೆಸ್ ನಾಯಕರಿಗೆ ಹೇಳಿಕೊಟ್ಟಿದ್ದಾರೆ ಎಂದರು.
ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ನೆರೆ ರಾಷ್ಟ್ರಗಳು ಯುದ್ಧ ಘೋಷಣೆ ಮಾಡಿಲ್ಲ, ಭೂಕಂಪ ಪ್ರಳಯ ನೆರೆ ಪ್ರಾಕೃತಿಕ ವಿಕೋಪಗಳು ಸಹ ತಲೆದೋರಿಲ್ಲ, ಆದರೂ ತುರ್ತು ಪರಿಸ್ಥಿತಿ ಹೇರಿದರು. ಇಂದಿರಾಗಾಂಧಿ ಅವರು ಆಯ್ಕೆ ಸಂಬಂಧ ಅಲಹಾಬಾದ್ ನ್ಯಾಯಾಲಯ ತೀರ್ಪು ನೀಡಿತು. ಗುಜರಾತ್‌ನಲ್ಲಿ ಕಾಂಗ್ರೆಸ್ ವಿರುದ್ಧ ಜನತಾ ತೀರ್ಪು ಬಂದಿತ್ತು. ಒಂದೆಡೆ ಜನತಾ ತೀರ್ಪು, ಇನ್ನೊಂದೆಡೆ ನ್ಯಾಯಾಲಯದ ತೀರ್ಪು. ಹೀಗಾಗಿ ಜನ ಆಕ್ರೋಶ, ವಿದ್ಯಾರ್ಥಿಗಳು ಹೋರಾಟಕ್ಕೆ ಇಳಿದರು. ಇಂದಿರಾಗಾಂಧಿಯವರು ದೇಶದ ರಕ್ಷಣೆಗೆ ಅಲ್ಲ, ತನ್ನ ಖುರ್ಚಿ ರಕ್ಷಣೆಗಾಗಿ ತುರ್ತು ಪರಿಸ್ಥಿತಿ ಹೇರಿದರು ಎಂದರು.
ಪ್ರಧಾನಮಂತ್ರಿ, ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಲೋಕಸಭೆ ಅಧ್ಯಕ್ಷರನ್ನು ಯಾವುದೇ ನ್ಯಾಯಾಲಯ ಪ್ರಶ್ನಿಸುವಂತಿಲ್ಲ. ಪೂರ್ವಾನ್ವಯವಾಗುವಂತೆ, ಸಂವಿಧಾನಕ್ಕಿಂತ ತಾವು ದೊಡ್ಡವರೆಂದು ಇಂದಿರಾಗಾಂಧಿ ಭಾವಿಸಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ನಿಂದ ಕ್ಷಮಾಪಣೆ ಬರುತ್ತದೆ ಎಂದಿದ್ದೇವೆ. ಆದರೆ, ಬರಲಿಲ್ಲ, ಹುಟ್ಟು ಗುಣ ಸುಟ್ಟರೂ ಹೋಗುವುದಿಲ್ಲ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ನಗರಾಧ್ಯಕ್ಷ ಪುಷ್ಪರಾಜ್ ಸ್ವಾಗತಿಸಿದರು. ಬಿಜೆಪಿ ರೈತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಸಿ. ಕಲ್ಮರುಡಪ್ಪ ಕಾರ್ಯಕ್ರಮ ನಿರೂಪಿಸಿದರು.26 ಕೆಸಿಕೆಎಂ 4