ಹಳ್ಳಿ, ಸಣ್ಣಪಟ್ಟಣದಲ್ಲಿ ಸ್ಮಾರ್ಟ್‌ ಮೀಟರ್‌ ಕಡ್ಡಾಯಕ್ಕೆ ಬ್ರೇಕ್‌ - ಒತ್ತಾಯ ಮಾಡದಂತೆ ಬೆಸ್ಕಾಂ ಸೂಚನೆ

KannadaprabhaNewsNetwork | Updated : Mar 07 2025, 07:49 AM IST

ಸಾರಾಂಶ

ಬೆಸ್ಕಾಂ ವ್ಯಾಪ್ತಿಯಲ್ಲಿ ಬರುವ 8 ಜಿಲ್ಲೆಗಳ ಗ್ರಾಮೀಣ ಹಾಗೂ ಸಣ್ಣ ಪಟ್ಟಣ ಪ್ರದೇಶಗಳಲ್ಲಿ ಎಲ್‌ಟಿ ಗ್ರಾಹಕರಿಗೆ ಸ್ಮಾರ್ಟ್‌ ಮೀಟರ್‌ ಪಡೆಯಲು ಒತ್ತಾಯ ಮಾಡದಂತೆ ಬೆಸ್ಕಾಂ ಸೂಚನೆ ನೀಡಿದೆ.

 ಬೆಂಗಳೂರು : ಬೆಸ್ಕಾಂ ವ್ಯಾಪ್ತಿಯಲ್ಲಿ ಬರುವ 8 ಜಿಲ್ಲೆಗಳ ಗ್ರಾಮೀಣ ಹಾಗೂ ಸಣ್ಣ ಪಟ್ಟಣ ಪ್ರದೇಶಗಳಲ್ಲಿ ಎಲ್‌ಟಿ ಗ್ರಾಹಕರಿಗೆ ಸ್ಮಾರ್ಟ್‌ ಮೀಟರ್‌ ಪಡೆಯಲು ಒತ್ತಾಯ ಮಾಡದಂತೆ ಬೆಸ್ಕಾಂ ಸೂಚನೆ ನೀಡಿದೆ. ಇದರಿಂದಾಗಿ ಶೇ.400ರಿಂದ ಶೇ.800ರಷ್ಟು ಅಧಿಕ ದರ ತೆತ್ತು ಸ್ಮಾರ್ಟ್‌ ಮೀಟರ್‌ ಖರೀದಿಸುವ ಆತಂಕದಿಂದ ಅಲ್ಲಿನ ಜನರು ಪಾರಾಗಿದ್ದಾರೆ. ಮೀಟರ್‌ ದರ ಏರಿಕೆ ಬಗ್ಗೆ ‘ಕನ್ನಡಪ್ರಭ’ ಮಾತ್ರ ಮಾ.5ರಂದು ವರದಿ ಮಾಡಿತ್ತು.

ಸ್ಮಾರ್ಟ್‌ ಮೀಟರ್‌ ತಂತ್ರಾಂಶದ ಜತೆ ‘ನಾನ್‌- ಆರ್‌ಎಪಿಡಿಆರ್‌ಪಿ’ (ಪುನಾರಚಿತ ವೇಗವರ್ಧಿತ ವಿದ್ಯುತ್‌ ಅಭಿವೃದ್ಧಿ ಹಾಗೂ ಸುಧಾರಣಾ ಕಾರ್ಯಕ್ರಮಕ್ಕೆ ಒಳಪಡದ) ಪ್ರದೇಶದ ತಂತ್ರಾಂಶವು ಸಂಯೋಜನೆಗೊಳ್ಳದ ಹಿನ್ನೆಲೆಯಲ್ಲಿ ಗ್ರಾಮೀಣ ಹಾಗೂ ಸಣ್ಣ ಪಟ್ಟಣ ಪ್ರದೇಶಗಳಲ್ಲಿ ಸ್ಮಾರ್ಟ್‌ ಮೀಟರ್‌ ಪಡೆಯಲು ಒತ್ತಾಯಿಸಬಾರದು ಎಂದು ತಿಳಿಸಲಾಗಿದೆ.

ಈ ಬಗ್ಗೆ ಬೆಸ್ಕಾಂ ಗ್ರಾಹಕ ವ್ಯವಹಾರಗಳ ವಿಭಾಗದ ಪ್ರಧಾನ ವ್ಯವಸ್ಥಾಪಕ ಎಂ.ಎಲ್‌. ರಾಜೋಜಿ ರಾವ್ ಅವರು, ಆರ್‌ಎಪಿಡಿಆರ್‌ಪಿ ಅಲ್ಲದ ಪ್ರದೇಶಗಳಲ್ಲಿ ಸ್ಮಾರ್ಟ್‌ ಮೀಟರ್‌ ಸಾಫ್ಟ್‌ವೇರ್ ಇನ್ನೂ ಸಂಯೋಜನೆಗೊಂಡಿಲ್ಲ. ಹೀಗಾಗಿ ಪ್ರಧಾನ ಕಚೇರಿಯಿಂದ ಸೂಚನೆ ಬರುವವರೆಗೆ ಈ ವ್ಯಾಪ್ತಿಯಲ್ಲಿ ಸ್ಮಾರ್ಟ್‌ ಮೀಟರ್‌ ಪಡೆಯುವಂತೆ ಒತ್ತಾಯ ಮಾಡಬೇಡಿ. ಬದಲಿಗೆ ಹಾಲಿ ಇರುವ ವ್ಯವಸ್ಥೆಯಡಿಯೇ ನೋಂದಣಿ ಮಾಡಿ ಸಂಪರ್ಕ ನೀಡಿ ಎಂದು ಕ್ಷೇತ್ರದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇದರಿಂದ ತಂತ್ರಾಂಶ ಸಿದ್ಧತೆ ಮಾಡಿಕೊಳ್ಳದೆಯೇ ಫೆ.15 ರಿಂದ ಬೆಸ್ಕಾಂ ವ್ಯಾಪ್ತಿಯಲ್ಲಿ ಸ್ಮಾರ್ಟ್‌ ಮೀಟರ್ ಕಡ್ಡಾಯ ಮಾಡಿರುವುದು ಸಾಬೀತಾದಂತಾಗಿದೆ.

ಏನಿದು ನಾನ್‌-ಆರ್‌ಎಡಿಪಿಆರ್‌ಪಿ?:

ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್‌ ಸರಬರಾಜು ವ್ಯವಸ್ಥೆಯನ್ನು ಕೇಂದ್ರದ ಯೋಜನೆಯಡಿ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಆರ್‌ಎಡಿಪಿಆರ್‌ಪಿ ಅಡಿ ನಗರ, ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರ ಸೇರಿ 25 ನಗರ ಹಾಗೂ ಪಟ್ಟಣಗಳ ವ್ಯಾಪ್ತಿಯಲ್ಲಿ ವಿದ್ಯುತ್‌ ಸರಬರಾಜು ಮಾಡಲಾಗುತ್ತಿದೆ. ಈ ಪ್ರದೇಶಗಳ ವಿದ್ಯುತ್‌ ಸರಬರಾಜು, ನಿರ್ವಹಣೆ ಹಾಗೂ ಬಿಲ್ಲಿಂಗ್‌ಗೆ ಪ್ರತ್ಯೇಕ ಸಾಫ್ಟ್‌ವೇರ್‌ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ನಗರ, ಪಟ್ಟಣ ಪ್ರದೇಶ ಅಲ್ಲದ ಸಣ್ಣ ಪಟ್ಟಣ ಹಾಗೂ ಗ್ರಾಮೀಣ ಭಾಗವನ್ನು ನಾನ್‌-ಆರ್‌ಎಡಿಪಿಆರ್‌ಪಿ ಪ್ರದೇಶ ಎಂದು ಪರಿಗಣಿಸಲಾಗುತ್ತದೆ.

Share this article