ಕೊಳ್ಳೇಗಾಲ : ಶ್ವಾಸಕೋಶಗಳ ಪುನಶ್ಚೇತನಕ್ಕಾಗಿ ಪ್ರಾತ್ಯಕ್ಷಿಕೆ ಸಹಕಾರಿ : ಡಾ.ಮಧುಸೂಧನ್

KannadaprabhaNewsNetwork | Updated : Mar 07 2025, 12:38 PM IST

ಸಾರಾಂಶ

ಕೊಳ್ಳೇಗಾಲದ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ವಿಜ್ಞಾನ ದಿನಾಚರಣೆ, ಹೃದಯ ಶ್ವಾಸಕೋಶ ಪುನಃಶ್ಚೇತನ ಕಾರ್ಯಕ್ರಮದಲ್ಲಿ ಡಾ.ಉಮಾಶಂಕರ್ ಮಾತನಾಡಿದರು. ಡಾ.ಮಧುಸೂಧನ್. ಪ್ರಾಂಶುಪಾಲೆ ಜಯಲಕ್ಷ್ಮಿ ಇನ್ನಿತರರಿದ್ದರು.

 ಕೊಳ್ಳೇಗಾಲ : ಪಟ್ಟಣದ ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೃದಯ ಶ್ವಾಸಕೋಶಗಳ ಪುನಃಶ್ಚೇತನ ಕಾರ್ಯಕ್ರಮ, ರಾಷ್ಟ್ರೀಯ ವಿಜ್ಞಾನ ದಿನಾಚರಣೆಯು ರೋಟರಿ ಸಂಸ್ಥೆ ವತಿಯಿಂದ ಆಚರಿಸಲಾಯಿತು. ರೋಟರಿ ಸಂಸ್ಥೆಯ ನಿಕಟಪೂರ್ವ ಸಹಾಯಕ ರಾಜ್ಯಪಾಲ ಡಾ.ಆರ್ ಉಮಾಶಂಕರ್ ಮಾತನಾಡಿ, ಯುವ ಪೀಳಿಗೆ ವಿದ್ಯಾರ್ಥಿ ದೆಸೆಯಿಂದಲೇ ಉತ್ತಮ ಜೀವನಶೈಲಿ ರೂಢಿಸಿಕೊಳ್ಳಬೇಕು, ಇದರಿಂದಾಗಿ ಮುಂದಿನ ದಿನಗಳಲ್ಲಿ ಆರೋಗ್ಯಕರವಾಗಿ ಉತ್ತಮ ಬದುಕು ನಡೆಸಲು ಸಹಕಾರಿಯಾಗಲಿದೆ ಎಂದರು.

ಪ್ರಾಂಶುಪಾಲೆ ಡಾ.ಜಯಲಕ್ಷ್ಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವಿಜ್ಞಾನ ದಿನಾಚರಣೆ ಆಚರಿಸಿದರೆ ಸಾಲದು ವಿದ್ಯಾರ್ಥಿಗಳು ತಮ್ಮ ಬದುಕಿನುದ್ದಕ್ಕೂ ಮೂಢನಂಬಿಕೆಗಳನ್ನು ದೂರ ಸರಿಸುವ ಪಣ ತೊಡಬೇಕು, ಯುವ ಪೀಳಿಗೆ ಹೊಸ ಆವಿಷ್ಕಾರಗಳ ಮೂಲಕ ಸಾಧಕನೆಗೂ ಮುಂದಾಗಬೇಕು ಎಂದರು. ಪ್ರಾತ್ಯಕ್ಷಿತೆಯಿಂದ ಜೀವ ಉಳಿವು:

ಸಂಪನ್ಮೂಲ ವ್ಯಕ್ತಿ ಡಾ.ಎನ್ ಮಧುಸೂಧನ್ ಮಾತನಾಡಿ, ಹೃದಯ ಹಾಗೂ ಶ್ವಾಸಕೋಶಗಳ ಪುನಶ್ಚೇತನ ಪ್ರಾತ್ಯಕ್ಷಿತೆ (ಸಿಪಿಆರ್) ಎಂಬುದು ಜೀವ ರಕ್ಷಕ ವಿಧಾನ, ಇದರ ಬಗ್ಗೆ ಹೆಚ್ಚು ಅರಿವಿದ್ದರೆ ಮಾನವನ ಜೀವ ಉಳಿಸಲು ಸಹಕಾರಿಯಾಗಲಿದೆ, ಈ ವಿಧಾನ ಅರಿತುಕೊಂಡಲ್ಲಿ ತುರ್ತು ಸಂದರ್ಭಗಳಲ್ಲಿ ಜೀವವನ್ನು ಉಳಿಸಲು ಸಹಾಯವಾಗಲಿದೆ. ವಿದ್ಯಾರ್ಥಿಗಳು ಇದರ ಸದ್ಬಳಕೆ ಮಾಡಿಕೊಂಡು ತುರ್ತು ಸಂದರ್ಭಗಳಲ್ಲಿ ಜೀವ ಉಳಿವಿಗೆ ಸಹಕರಿಸಬೇಕು, ಪೈಪೋಟಿ ಯುಗದಲ್ಲಿ ವೈಜ್ಞಾನಿಕ ಮನೋಭಾವದ ಜೊತೆ ನೂತನ ವಿಧಾನಗಳನ್ನು ಅರಿಯಬೇಕು, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿ ಸಮೂಹ ಹೊಸ ಹೊಸ ಸಾಧನೆಗೆ ತಮ್ಮನ್ನು ತೊಡಗಿಸಿಕೊಂಡು ಸತ್ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ರಸಾಯನ ಶಾಸ್ತ್ರದ ಉಪನ್ಯಾಸಕ ಮಹೇಶ್, ರೋಟರಿ ಮಿಡ್ ಟೌನ್ ಅಧ್ಯಕ್ಷ ಲೋಕೇಶ್, ಮಧುವನ ಅರಸು ಇನ್ನಿತರರಿದ್ದರು.

ಆಧುನಿಕ ಉನ್ನತೀಕರಣಕ್ಕೆ ವಿಜ್ಞಾನದ ಕೊಡುಗೆಗಳು ಸಾಕಷ್ಟಿವೆ. ಪರಿಸರ ಮಾಲಿನ್ಯ ತಡೆಗಟ್ಟುವಿಕೆ ಹಾಗೂ ಜಾಗತಿಕ ತಾಪಮಾನ ಕಡಿಮೆಗೊಳಿಸುವುದು ವಿಜ್ಞಾನದ ಇಂದಿನ ಸವಾಲುಗಳಾಗಿವೆ.

-ಡಾ.ಅಶೋಕ್ ಪ್ಯಾಟಿ ಸಸ್ಯಶಾಸ್ತ್ರ ಅಧ್ಯಾಪಕ, ಶ್ರೀ ಮಹದೇಶ್ವರ ಕಾಲೇಜು

ಸರಳ ಜೀವನ, ಸಾವಯವ ಕೃಷಿ, ಪೌಷ್ಟಿಕ ಆಹಾರ ಆರೋಗ್ಯಕರ ಜೀವನದ ಸೋಪಾನವಾಗಿವೆ. ವಿದ್ಯಾರ್ಥಿ ಸಮೂಹ ವಿಜ್ಞಾನದ ಬಗ್ಗೆ ಸಾಕಷ್ಟು ಅರಿತು ಸಾಧಕರಾಗಬೇಕು, ಒತ್ತಡದ ಜೀವನದ ನಡುವೆಯೂ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.- ಡಾ.ಕೇಶವನ್ ಪ್ರಸಾದ್, ಜನಪದ ವಿದ್ವಾಂಸ 

ನಾಡಿದ್ದು ಕಣ್ಣಿನ, ಹೃದಯ ಉಚಿತ ತಪಾಸಣೆ ಶಿಬಿರ

ಕೊಳ್ಳೇಗಾಲ: ಎಚ್.ಕೆ ಟ್ರಸ್ಟ್, ಕೊಯಮತ್ತೂರು ಕಣ್ಣಿನ, ಮೈಸೂರಿನ ನಾರಾಯಣ ಆಸ್ಪತ್ರೆ ರೋಟರಿ ಮಿಡ್ ಟೌನ್ ಸಹಯೋಗದೊಂದಿಗೆ ವಿಶ್ವಚೇತನ ವಿದ್ಯಾಸಂಸ್ಥೆಗಳ ಆವರಣದಲ್ಲಿ ನೇತ್ರ ನಿರಂತರ ಕಣ್ಣಿನ ತಪಾಸಣಾ, ಹೃದಯ ತಪಾಸಣಾ ಶಿಬಿರವು ಮಾ.9ರ ಭಾನುವಾರ ಬೆಳಗ್ಗೆ ಜರುಗಲಿದೆ ಎಂದು ಸಂಸ್ಥೆಯ ಸಂಯೋಜಕ ರಾಜೇಶ್ ತಿಳಿಸಿದ್ದಾರೆ. ಮಾ.9ರಂದು ಬೆಳಗ್ಗೆ 8ಗಂಟೆಯಿಂದ ಮದ್ಯಾಹ್ನ 1ಗಂಟೆತನಕ ತಪಾಸಣೆ ನಡೆಯಲಿದ್ದು ಶಿಬಿರದಲ್ಲಿ ಕಣ್ಣಿಗೆ ಸಂಬಂಧಿಸಿದ, ಹೃದಯ ಸಂಬಂಧಿ ಕಾಯಿಲೆಗಳು, ರಕ್ತದೊತ್ತಡ, ಇಸಿಜಿ, ಇಕೋ, ಜಿಆರ್‌ಬಿ ಎಸ್, ಐ ಬ್ರೆಸ್ಟ್, ಪ್ಯಾಪ್ ಸ್ಮಿಯರ್, ವೈದ್ಯರ ಸಮಾಲೋಚನೆ ಎಲ್ಲಾ ಉಚಿತವಾಗಿರುವುದರಿಂದ ಸಾರ್ವಜನಿಕರು ಆರೋಗ್ಯ ತಪಾಸಣಾ ಹಾಗೂ ಕಣ್ಣಿನ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು. ಅರವಿಂದ ಆಸ್ಪತ್ರೆ, ಮೈಸೂರಿನ ನಾರಾಯಣ ಆಸ್ಪತ್ರೆಯ ತಜ್ಞ ವೈದ್ಯರು ಪಾಲ್ಗೊಳ್ಳಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದ್ದಾರೆ.

Share this article