ಸಮಾಜ ಎಷ್ಟೇ ಮುಂದುವರಿದರೂ ಜಾತಿ-ಧರ್ಮಗಳ ಸಂಘರ್ಷಗಳಿಂದ ರಕ್ಷಿಸಿಕೊಳ್ಳಲು ಆಗುತ್ತಿಲ್ಲ

KannadaprabhaNewsNetwork |  
Published : Nov 19, 2024, 12:45 AM IST
ಮ | Kannada Prabha

ಸಾರಾಂಶ

ಪ್ರಸ್ತುತ ಸಮಾಜ ಎಷ್ಟೇ ಮುಂದುವರಿದರೂ ಜಾತಿ-ಧರ್ಮಗಳ ಸಂಘರ್ಷಗಳಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತನಗರಿವಿಲ್ಲದಂತೆ ಸಮಾಜ ವಿಘಟನೆಯತ್ತ ಸಾಗುತ್ತಿದ್ದು, ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿವೆ. ದಾರ್ಶನಿಕರ ಚಿಂತನೆಗಳನ್ನು ಭವಿಷ್ಯತ್ತಿನ ದಿನಗಳಿಗೆ ಕೊಂಡೊಯ್ಯುವ ಕೆಲಸ ಅನಿವಾರ್ಯವಾಗಿ ಮಾಡಬೇಕಾಗಿದೆ ಎಂದು ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದಶ್ರೀ ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ಯಾಡಗಿ: ಪ್ರಸ್ತುತ ಸಮಾಜ ಎಷ್ಟೇ ಮುಂದುವರಿದರೂ ಜಾತಿ-ಧರ್ಮಗಳ ಸಂಘರ್ಷಗಳಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತನಗರಿವಿಲ್ಲದಂತೆ ಸಮಾಜ ವಿಘಟನೆಯತ್ತ ಸಾಗುತ್ತಿದ್ದು, ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿವೆ. ದಾರ್ಶನಿಕರ ಚಿಂತನೆಗಳನ್ನು ಭವಿಷ್ಯತ್ತಿನ ದಿನಗಳಿಗೆ ಕೊಂಡೊಯ್ಯುವ ಕೆಲಸ ಅನಿವಾರ್ಯವಾಗಿ ಮಾಡಬೇಕಾಗಿದೆ ಎಂದು ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದಶ್ರೀ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕಿನ ಕಾಗಿನೆಲೆಯ ಕನಕಗುರು ಪೀಠದ ಆಶ್ರಯದಲ್ಲಿ ಸೋಮವಾರ ಭಕ್ತಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅರಸನಾಗಿದ್ದ ಕನಕದಾಸರು ಯುದ್ಧ ಪರಂಪರೆಯಿಂದ ಸಮಾಜವನ್ನು ತಿದ್ದಲು ಸಾಧ್ಯವಿಲ್ಲ ಎಂಬುದನ್ನ ಅರಿತು, ಹಿಂಸೆ ದಾರಿಯಿಂದ ಅಹಿಂಸೆ ಹಾದಿ ತುಳಿದರು. ಜಗತ್ತಿನಲ್ಲಿ ಮಾನವ ಧರ್ಮವೊಂದೇ ಅಂತಿಮ ಎನ್ನುವ ಸಾರ್ವಕಾಲಿಕ ಸತ್ಯ ಅರಿತು ವೈಭವೋಪೇತ ಜೀವನಕ್ಕೆ ಕೊನೆ ಹಾಡಿ ತಾವು ಬದಲಾಗುವ ಮೂಲಕ ಏಕಾಂಗಿಯಾಗಿ ಹೋರಾಟ ನಡೆಸುವ ಮೂಲಕ ಸಮಾಜದಲ್ಲಿದ್ದ ಮೌಢ್ಯಗಳನ್ನು ತೊಡೆದು ಹಾಕುವುದರಲ್ಲಿ ಯಶಸ್ಸು ಸಾಧಿಸಿದ್ದಾರೆ ಎಂದರು.

ಮೌಢ್ಯಗಳನ್ನು ಮೆಟ್ಟಿ ನಿಲ್ಲಬೇಕಾಗಿದೆ: ಶಾಸಕ ಬಸವರಾಜ ಶಿವಣ್ಣವನರ ಮಾತನಾಡಿ, ಕನಕದಾಸರ ಚಿಂತನೆಗಳು ಇಂದಿಗೂ ಪ್ರಸ್ತುತ, ಮಾನವನಲ್ಲಿ ಮನುಷ್ಯತ್ವವೇ ಮೂಲ ಧರ್ಮ ಎಂದು ಪ್ರತಿಪಾದಿಸಿದ ಅವರು, ಸಮಾಜದಲ್ಲಿ ಸಮಾನತೆ ತರಲು ಹಾಗೂ ಜಾತಿ, ಮತ ಹಾಗೂ ಪಂಥ ಹಾಗೂ ಮೌಢ್ಯಗಳನ್ನು ಮೆಟ್ಟಿ ನಿಂತಲ್ಲಿ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂಬುದನ್ನು ತೋರಿಸಿದರು. ಕನಕದಾಸ ಚಿಂತನೆಗಳು, ತತ್ವಗಳು ವರ್ತಮಾನದಲ್ಲಿ ಅತ್ಯಂತ ಅತ್ಯವಶ್ಯವಾಗಿವೆ ಎಂದರು.

ಸಮಾಜದ ಮೇಲೆ ಬೆಳಕು ಚೆಲ್ಲುತ್ತಿವೆ:ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಭಕ್ತಶ್ರೇಷ್ಠ ಕನಕದಾಸರ ಸಾಮಾಜಿಕ ನ್ಯಾಯದ ಸಮೀಕರಣ ಸರ್ವಕಾಲಕ್ಕೂ ಅನ್ವಯವಾಗಲಿದೆ. ಅವರ ನುಡಿಗಳಲ್ಲಿ ಮಾನವೀಯ ಸಂದೇಶಗಳು ಸಮಾಜದ ಮೇಲೆ ಹೆಚ್ಚು ಬೆಳಕನ್ನು ಚೆಲ್ಲಿದ್ದು, ಇದರಿಂದ ದಾರ್ಶನಿಕರ ಸನ್ಮಾರ್ಗಗಳು ಪ್ರಸ್ತುತ ಸಮಾಜಕ್ಕೆ ಅವಶ್ಯವಿದೆ. ಇತ್ತೀಚೆಗೆ ಕೇವಲ ಅಧಿಕಾರದಲ್ಲಿದ್ದವರನ್ನು ನೆನೆಸಿಕೊಳ್ಳಲಾಗುತ್ತಿದೆ. ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ದಾರ್ಶನಿಕರ ಮಾತುಗಳನ್ನು ಮರೆಯುತ್ತಿದ್ದಾರೆ. ಸಾಮಾಜಿಕ ನ್ಯಾಯದಡಿ ಶೋಷಿತ ವರ್ಗದ ಜನರಿಗೆ ಅವರ ಸಂದೇಶಗಳು ಅವಶ್ಯವಿದೆ ಎಂದರು.

ಇದಕ್ಕೂ ಮುನ್ನ ಗ್ರಾಮದೆಲ್ಲೆಡೆ ಕನಕದಾಸರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಲಾಯಿತಲ್ಲದೇ, ರೇವಣಸಿದ್ದೇಶ್ವರರ ಮೂರ್ತಿ ರಥೋತ್ಸವ ಕಾರ‍್ಯಕ್ರಮ ವಿಜೃಂಭಣೆಯಿಂದ ನಡೆಯಿತು. ವೇದಿಕೆಯಲ್ಲಿ ಎಸ್.ಎಫ್.ಎನ್.ಗಾಜಿಗೌಡ್ರ, ಸದಾನಂದ ಪಾಟೀಲ, ರಾಜೇಂದ್ರ ಹಾವೇರಣ್ಣವರ, ಶಂಕ್ರಣ್ಣ ಮಾತನವರ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು, ಪ್ರಾಚಾರ‍್ಯ ಬೀರಪ್ಪ ಸ್ವಾಗತಿಸಿ, ವಂದಿಸಿದರು.

PREV

Recommended Stories

ರಾಜ್ಯದಲ್ಲಿ ದ್ವಿಭಾಷಾ ನೀತಿಗೆ ಶಿಕ್ಷಣ ಆಯೋಗ ಶಿಫಾರಸು
ರೈತರಿಗೆ ಸರ್ಕಾರದ ಗುಡ್ ನ್ಯೂಸ್