ಜಾತಿ ಯಾವುದೇ ಇರಲಿ, ಹಿಂದೂ ಎಂದು ಹೆಮ್ಮೆಯಿಂದ ಹೇಳಿಕೊಳ್ಳಿ: ಹಾರಿಕಾ ಮಂಜುನಾಥ

KannadaprabhaNewsNetwork |  
Published : Feb 20, 2026, 02:45 AM IST
ಮುಂಡಗೋಡ: ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ೩೦೬ನೇ ಜಯಂತ್ಯೋತ್ಸವ ಪ್ರಯುಕ್ತ ಸಂಚಲನಾ ಸಮಿತಿ ವತಿಯಿಂದ ಹಿಂದು ಸಮಾವೇಶ ನಡೆಯಿತು.  | Kannada Prabha

ಸಾರಾಂಶ

ಮುಂಡಗೋಡ ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಪ್ರಯುಕ್ತ ಸಂಚಲನಾ ಸಮಿತಿ ವತಿಯಿಂದ ಹಿಂದೂ ಸಮಾವೇಶ ಆಯೋಜಿಸಲಾಗಿತ್ತು.

ಮುಂಡಗೋಡ: ಸುಮಾರು ೧೦೦ ಕೋಟಿ ಜನಸಂಖ್ಯೆ ಹೊಂದಿರುವ ನಮ್ಮ ಹಿಂದುಗಳ ಪರಿಚಯ ಕೇಳಿದರೆ ಧರ್ಮಕ್ಕಿಂತ ಮೊದಲು ಜಾತಿ ಹೆಸರು ಮುಂದೆ ಬರುವುದು ನಮ್ಮ ಹಿಂದು ಧರ್ಮದ ದೌರ್ಭಾಗ್ಯವೇ ಸರಿ ಎಂದು ಯುವ ವಾಗ್ಮಿ ಹಾರಿಕಾ ಮಂಜುನಾಥ ಹೇಳಿದರು.

ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಪ್ರಯುಕ್ತ ಸಂಚಲನಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಹಿಂದೂ ಸಮಾವೇಶದಲ್ಲಿ ಮಾತನಾಡಿದ ಅವರು, ಜಾತಿ ಯಾವುದೇ ಇರಲಿ ಧರ್ಮದ ವಿಷಯ ಬಂದಾಗ ಹಿಂದೂ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕು. ನಮ್ಮ ಜಾತಿ, ಮನೆಯ ದೇವರ ಕೋಣೆಯೊಳಗೆ ಮಾತ್ರ ಸೀಮಿತವಾಗಿರಬೇಕು. ಯಾರು ಯಾವುದೇ ರಾಜಕೀಯ ಪಕ್ಷದ ಕಾರ್ಯಕರ್ತರಾಗಿರಲಿ, ಆದರೆ ಧರ್ಮ ಎಂಬುದು ಬಂದಾಗ ನಾವೆಲ್ಲ ಹಿಂದೂಗಳು ಎಂಬ ಭಾವನೆ ಪ್ರತಿಯೊಬ್ಬರಲ್ಲಿ ಬರಬೇಕು. ಪ್ರತಿ ಮನೆಯಲ್ಲಿ ಒಬ್ಬೊಬ್ಬ ಶಿವಾಜಿ ಮಹಾರಾಜ ಹುಟ್ಟಬೇಕಾದರೆ ಪ್ರತಿಯೊಬ್ಬ ತಾಯಂದಿರು ವೀರಮಾತಾ ಜೀಜಾಬಾಯಿಯಾಗಬೇಕು. ಈ ಬಗ್ಗೆ ತಾಯಂದಿರು ಜಾಗ್ರತರಾಗಬೇಕು. ಮಕ್ಕಳಿಗೆ ಯಾವ ಇತಿಹಾಸದ ಪರಿಚಯ ಮಾಡದಿದ್ದರೂ ಪರವಾಗಿಲ್ಲ. ಕನಿಷ್ಠ ಪಕ್ಷ ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸ ಮಾತ್ರ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಪರಿಚಯ ಮಾಡಿಕೊಡಬೇಕು ಎಂದು ಹೇಳಿದರು.

ಶಿವಾಜಿ ಮಹಾರಾಜರೊಬ್ಬರು ಇಲ್ಲದಿದ್ದರೆ ನಮ್ಮ ಹಿಂದೂ ಧರ್ಮದ ಪರಿಸ್ಥಿತಿ ಏನಾಗುತ್ತಿತ್ತು ಎಂಬುದನ್ನು ಒಂದು ಬಾರಿ ಯೋಚನೆ ಮಾಡಬೇಕಿದೆ. ಅನ್ಯ ಧರ್ಮೀಯರಿಂದ ನಮಗೆ ಭಯವಿಲ್ಲ, ಬದಲಾಗಿ ಹಿಂದೂ ಧರ್ಮದಲ್ಲಿಯೇ ಹುಟ್ಟಿ ಹಿಂದೂ ಧರ್ಮವನ್ನು ವಿರೋಧಿಸುತ್ತಾರಲ್ಲ, ಅವರಿಂದಲೇ ನಮ್ಮ ಧರ್ಮಕ್ಕೆ ಅಪಾಯವಿದೆ ಎಂದು ವೀರಸಾವರ್ಕರ ಅಂದೇ ಹೇಳಿದ್ದಾರೆ. ಪ್ರತಿಯೊಬ್ಬರೂ ಜಾಗ್ರತರಾದರೆ ನಮ್ಮ ಸನಾತನ ಹಿಂದೂ ಧರ್ಮವನ್ನು ಯಾರೂ ಅಲುಗಾಡಿಸಲಾಗುವುದಿಲ್ಲ. ಜೀವಂತ ಪ್ರಾಚೀನವಾದ ಏಕೈಕವಾದ ಸನಾತನ ಹಿಂದು ಧರ್ಮವಾಗಿದೆ. ಪ್ರತಿ ಮನೆಯಲ್ಲಿ ಒಬ್ಬೊಬ್ಬ ಶಿವಾಜಿ ಮಹಾರಾಜ ಹುಟ್ಟಬೇಕಾದರೆ ಪ್ರತಿಯೊಬ್ಬ ತಾಯಂದಿರು ವೀರಮಾತಾ ಜೀಜಾಬಾಯಿಯಾಗಬೇಕು. ಈ ಬಗ್ಗೆ ತಾಯಂದಿರು ಜಾಗ್ರತರಾಗಬೇಕಿದ್ದು, ಛತ್ರಪತಿ ಶಿವಾಜಿ ಕಟ್ಟಿದ ಹಿಂದೂ ಸಾಮ್ರಾಜ್ಯವನ್ನು, ಹಿಂದೂ ಧರ್ಮದಲ್ಲಿ ಹುಟ್ಟಿದ ನಾವು ನಮ್ಮ ಪರಂಪರೆ, ಸಂಸ್ಕೃತಿ ಸಂಪ್ರದಾಯವನ್ನು ಉಳಿಸಬೇಕು ಎಂದು ಹೇಳಿದರು.

ಅಗಡಿ ಅಕ್ಕಿಮಠದ ಶ್ರೀ ಗುರುಲಿಂಗ ಸ್ವಾಮಿಗಳು ಸಾನ್ನಿಧ್ಯವಹಿಸಿ ಮಾತನಾಡಿದರು. ಹಿಂದೂಗಳಿಗೆ ಕೇವಲ ಮಂತ್ರ ಹೇಳುವುದು ಮಾತ್ರ ಗೊತ್ತು ಎಂದು ಕೆಲವರು ಭಾವಿಸಿರಬಹುದು. ಆದರೆ ನಮ್ಮ ಮೇಲೆ ಯಾರಾದರೂ ಆಕ್ರಮಣ ಮಾಡಲು ಪ್ರಯತ್ನಿಸಿದರೆ ನಾವು ಕೂಡ ಯಾರಿಗೂ ಕಮ್ಮಿ ಇಲ್ಲ ಎಂಬುದನ್ನು ತೋರಿಸಬೇಕಾಗುತ್ತದೆ ಎಂದರು.

ಇದಕ್ಕೂ ಮುನ್ನ ಮಾಜಿ ಶಾಸಕ ವಿ.ಎಸ್. ಪಾಟೀಲ ಹಾಗೂ ಜಿಪಂ ಮಾಜಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಗುಡ್ಡಪ್ಪ ಕಾತೂರ, ರಾಜಶೇಖರ ಹಿರೇಮಠ, ವಿಷ್ಣು ಜಾಧವ, ಶಂಭುಲಿಂಗ ಕೀರ್ತೆಪ್ಪನವರ, ಬಾಬಣ್ಣ ಕಶಿಬಾಯಿನವರ, ಚೇತನ ಕಲಾಲ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ಬಸ್‌ ನಿಲ್ದಾಣ ನಡುವೆ ಸಂಪರ್ಕ ಸಮಸ್ಯೆ
ಖಾಸಗಿ ಶಾಲಾ- ಕಾಲೇಜುಗಳಲ್ಲಿ ಡೊನೇಷನ್‌ ಹಾವಳಿ ತಡೆಗೆ ಒತ್ತಾಯ