ಇನ್ಮುಂದೆ ವಿಪತ್ತಿನಲ್ಲಿ ಸಾವು ಸಂಭವಿಸಕೂಡದು: ಕೃಷ್ಣ ಬೈರೇಗೌಡ ತಾಕೀತು

KannadaprabhaNewsNetwork |  
Published : Jun 27, 2024, 01:04 AM IST
ಸಭೆಯಲ್ಲಿ ಮಾತನಾಡುತ್ತಿರುವ ಸಚಿವ ಕೃಷ್ಣ ಬೈರೇಗೌಡ | Kannada Prabha

ಸಾರಾಂಶ

ಉಳ್ಳಾಲದಲ್ಲಿ ಮನೆ ಮೇಲೆ ತಡೆಗೋಡೆ ಬಿದ್ದು ನಾಲ್ವರು ಸಾವಿಗೀಡಾದ ಪ್ರಕರಣ ನಡೆದ ಹಿನ್ನೆಲೆಯಲ್ಲಿ ಜಿಲ್ಲೆಗೆ ತುರ್ತು ಭೇಟಿ ನೀಡಿದ ಅವರು ಸ್ಥಳ ಪರಿಶೀಲನೆ ನಡೆಸಿ ರಾತ್ರಿಯೇ ಜಿಲ್ಲೆಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸದಂತೆ ಪಂಚಾಯಿತಿ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಬೇಕು. ಸಮಸ್ಯೆ ಉಂಟಾಗುವ ಮೊದಲೇ ಈ ಟಾಸ್ಕ್ ಫೋರ್ಸ್ ಅಧಿಕಾರಿಗಳು ಅಂತಹ ಸೂಕ್ಷ್ಮ ಸ್ಥಳಗಳಲ್ಲಿ‌ ಇದ್ದು ಪರಿಸ್ಥಿತಿ ನಿರ್ವಹಣೆ ಮಾಡಬೇಕು, ಜಿಲ್ಲೆಯಲ್ಲಿ ಇನ್ಮುಂದೆ ಇಂತಹ ಯಾವ ಸಾವೂ ಸಂಭವಿಸಬಾರದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಾಕೀತು ಮಾಡಿದ್ದಾರೆ.

ಉಳ್ಳಾಲದಲ್ಲಿ ಮನೆ ಮೇಲೆ ತಡೆಗೋಡೆ ಬಿದ್ದು ನಾಲ್ವರು ಸಾವಿಗೀಡಾದ ಪ್ರಕರಣ ನಡೆದ ಹಿನ್ನೆಲೆಯಲ್ಲಿ ಜಿಲ್ಲೆಗೆ ತುರ್ತು ಭೇಟಿ ನೀಡಿದ ಅವರು ಸ್ಥಳ ಪರಿಶೀಲನೆ ನಡೆಸಿ ರಾತ್ರಿಯೇ ಜಿಲ್ಲೆಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದರು.

ಪ್ರತಿ ಪಂಚಾಯತಿ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಪ್ರಾಣಾಪಾಯವಾಗಬಹುದಾದ ಸ್ಥಳಗಳ ಅರಿವು ಸ್ಥಳೀಯ ಅಧಿಕಾರಿಗಳು, ಸಿಬ್ಬಂದಿಗೆ ಇರುತ್ತದೆ. ದುರ್ಘಟನೆ ನಡೆದ ಮೇಲೆ ಸ್ಥಳಕ್ಕೆ ಹೋಗುವುದಲ್ಲ. ದುರ್ಘಟನೆ ನಡೆಯುವ ಮೊದಲೇ ಅಂತಹ ಸ್ಥಳಗಳ ಮೇಲೆ ನಿಗಾ ವಹಿಸಬೇಕು. ಅಪಾಯದಲ್ಲಿರುವ ಮನೆಮಂದಿಯನ್ನು ಬಲವಂತವಾಗಿ ಆದರೂ ಸ್ಥಳಾಂತರಿಸಬೇಕು. ಯಾರಿಗೂ ಪ್ರಾಣಾಪಾಯ ಆಗಬಾರದು. ಒಂದು ವೇಳೆ ಇಂಥ ದುರ್ಘಟನೆ ಮರುಕಳಿಸಿದರೆ ಲೋಪ ತೋರುವ ಅಧಿಕಾರಿಗಳು ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಭೂಕುಸಿತ, ಕಡಲ ಕೊರೆತ ಉಂಟಾಗುವ ಸ್ಥಳಗಳ ಅರಿವು ಸ್ಥಳೀಯ ಅಧಿಕಾರಿಗಳಿಗೆ ಇದ್ದೇ ಇರುತ್ತದೆ. ಜೋರು ಮಳೆ ಬಂದಾಗ ಅಂತಹ ಸ್ಥಳಗಳಿಗೆ ತೆರಳಿ ಅಲ್ಲಿಯ ಜನರನ್ನು ಎಚ್ಚರಿಸಿ. ಮನೆಗಳು ಅಪಾಯದಲ್ಲಿ ಇರುವುದು ಕಂಡು ಬಂದರೆ ಪೊಲೀಸ್ ಬಲ ಪ್ರಯೋಗಿಸಿಯಾದರೂ ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಿ ಎಂದು ಕೃಷ್ಣ ಭೈರೇಗೌಡ ಸೂಚಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನು ಮುಂದೆ ಸಾವು ನೋವು ಸಂಭವಿಸಿದರೆ ಅದನ್ನು ಸಹಿಸಲಾಗದು. ಮಳೆಗಾಲ ಆರಂಭದಲ್ಲೇ ಇಂತಹ ಅನಾಹುತ ಸಂಭವಿಸಿದರೆ ಇನ್ನು ಮಳೆಗಾಲದುದ್ದಕ್ಕೂ ಪರಿಸ್ಥಿತಿ ಹೇಗಿರಬೇಡ? ಅಧಿಕಾರಿಗಳು ಒಳ್ಳೆ ಮಾತಿಗೆ ಕೇಳಲ್ಲ ಅಂತಾದರೆ ಅದಕ್ಕೆ ತಕ್ಕ ಬೆಲೆಯನ್ನು ತೆರುತ್ತೀರಿ. ಇಂಥದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿ ಮನೆಗಳನ್ನು ಕಟ್ಟುವಾಗ ಕನಿಷ್ಠ ಸೇಫ್ಟಿ ಕ್ರಮಗಳನ್ನು ಅನುಸರಿಸಬೇಕು. ನದಿ ನೀರಿನ ಅಪಾಯದ ಮಟ್ಟಕ್ಕಿಂತ ಕೆಳಭಾಗದಲ್ಲಿ ಮನೆ ಕಟ್ಟಬಾರದು ಎಂಬಿತ್ಯಾದಿ ನಿಯಮಗಳನ್ನು ಕಡ್ಡಾಯಗೊಳಿಸಿ ಜಾರಿಗೊಳಿಸಿ ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ವಿಪತ್ತು ನಿರ್ವಹಣಾ ಇಲಾಖೆ ಕಾರ್ಯದರ್ಶಿ ರಶ್ಮಿ ಮಹೇಶ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯತಿ ಸಿಇಒ ಡಾ. ಆನಂದ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಆನಂದ್ ಸಿಎಲ್, ಡಿಸಿಪಿ ಸಿದ್ಧಾರ್ಥ್ ಗೊಯೆಲ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ