ಕನ್ನಡಪ್ರಭ ವಾರ್ತೆ ಗುಡಿಬಂಡೆ
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಂಸದರ ಜನಸ್ಪಂದನಾ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರಿ ಇಲಾಖೆಗಳಿಗೆ ಕೆಲಸ- ಕಾರ್ಯಗಳಿಗಾಗಿ ಬರುವಂಥವರು ಬಡವರೇ ಆಗಿರುತ್ತಾರೆ. ಬಡವರ ಕೆಲಸಗಳನ್ನು ಮಾಡಿಕೊಟ್ಟರೆ ಪುಣ್ಯ ಸಿಗುತ್ತದೆ. ಜನರ ಕೆಲಸಗಳನ್ನು ಮಾಡಿಕೊಡದೇ ನಾಳೆ ಬನ್ನಿ, ನಾಡಿದ್ದು ಬನ್ನಿ ಎಂದು ಹೇಳಿದರೆ ಅವರ ಹೊಟ್ಟೆಯ ಮೇಲೆ ಹೊಡೆದಂತಾಗುತ್ತದೆ. ಕೆಲಸದ ನಿಮಿತ್ತ ಬರುವಂಥವರಲ್ಲಿ ಜಾತಿ ಕಾಣಬೇಡಿ, ಅವನು ಯಾವ ಪಕ್ಷದವನು ಎಂದು ನೋಡಬೇಡಿ. ಯಾರೇ ಆಗಲಿ, ಅವರು ನಮ್ಮ ಭಾರತೀಯರೇ, ಅವರ ಕೆಲಸಗಳನ್ನು ಮಾಡಿಕೊಡುವುದು ಸರ್ಕಾರಿ ಅಧಿಕಾರಿಗಳ ಕರ್ತವ್ಯವಾಗಿದೆ. ಎಲ್ಲಾ ಅಧಿಕಾರಿಗಳು ಜನಸ್ನೇಹಿಯಾಗಿ ಕೆಲಸ ಮಾಡಿದಾಗ ಅಭಿವೃದ್ಧಿ ಸಾಧ್ಯವಾಗುತ್ತದೆ. ಆಂಧ್ರದ ಗಡಿಯಲ್ಲಿರುವ ಗುಡಿಬಂಡೆ ಅಭಿವೃದ್ಧಿ ವಂಚಿತವಾಗಿದೆ ಎಂಬೆಲ್ಲಾ ಮಾತಿದೆ. ಹಾಗಾಗಿ ಗೋಲ್ಡನ್ ಗುಡಿಬಂಡೆ ಮಾಡುವ ಶಕ್ತಿ ಅಧಿಕಾರಿಗಳಾದ ತಮ್ಮಲ್ಲಿದೆ. ತಾವು ಮನಸ್ಸು ಮಾಡಿದರೆ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾಗಬೇಕು ಎಂದರು.
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಬಳಿಕ ಸಾಕಷ್ಟು ಜನಪರ ಕೆಲಸಗಳು ನಡೆಯುತ್ತಿವೆ. ಹಿಂದೆ ಮಹಿಳೆಯರು ಸೂರ್ಯ ಮುಳುಗುವ ತನಕ ಶೌಚಾಲಯಕ್ಕೆ ಹೋಗಲು ಕಾಯಬೇಕಿತ್ತು. ಅದನ್ನು ಮನಗಂಡ ನಮ್ಮ ಪ್ರಧಾನಿಗಳು ದೇಶದಾದ್ಯಂತ ೧೫ ಕೋಟಿಗೂ ಅಧಿಕ ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಮಹಿಳೆಯರಿಗೆ ಕಷ್ಟಕರವಾಗಬಾರದೆಂಬ ಉದ್ದೇಶದಿಂದ ಮನೆ ಮನೆಗೂ ಕೊಳಾಯಿ ಮೂಲಕ ನೀರು ಪೂರೈಸುವಂತಹ ಜಲ ಜೀವನ್ ಮಿಷನ್ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದಾರೆ. ಅದೇ ರೀತಿ ಹಿಂದಿನ ನರೇಗಾ ಯೋಜನೆಗೆ ಕೆಲವೊಂದು ಮಾರ್ಪಾಡುಗಳನ್ನು ಮಾಡಿ ವಿಬಿ–ಜಿ ರಾಮ್ ಜಿ ಎಂಬ ಹೆಸರನ್ನು ಇಟ್ಟಿದ್ದಾರೆ. ಈ ಹಿಂದೆ ನರೇಗಾದಲ್ಲಿ ಸಾಕಷ್ಟು ಅವ್ಯವಹಾರ ನಡೆಯುತ್ತಿತ್ತು. ಆದರೆ ವಿಬಿ–ಜಿ ರಾಮ್ ಜಿನ ನಿಯಮಗಳಲ್ಲಿ ಯಾರೂ ತಪ್ಪು ಮಾಡಲು ಸಾದ್ಯವಿಲ್ಲ. ಬಿಡುಗಡೆಯಾದ ಅನುದಾನ ಫಲಾನುಭವಿಗಳ ಕೈಗೆ ಸೇರುತ್ತಿದೆ ಎಂದು ತಿಳಿಸಿದರು.ಸದಾ ರೈತರ ಪರ ಕೆಲಸ ಮಾಡುವಂಥ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ, ರೈತರ ಬೆಳವಣಿಗೆಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಪಿಎಂ ಕಿಸಾನ್ ಯೋಜನೆ, ಪಿಎಂ ಫಸಲ್ ಭಿಮಾ ಯೋಜನೆ ಸಹ ಒಂದಾಗಿದೆ. ಕಡಿಮೆ ಮೊತ್ತದ ಪ್ರೀಮಿಯಂ ಕಟ್ಟಿದರೆ ಸಾಕು ಪ್ರೀಮಿಯಂಗಿಂತ ದೊಡ್ಡ ಮೊತ್ತದ ಹಣ ರೈತರಿಗೆ ಫಸಲ್ ಭಿಮಾ ಯೋಜನೆ ಮೂಲಕ ಸಿಗುತ್ತಿದೆ. ಈ ಯೋಜನೆಯಿಂದ ರೈತರಿಗೆ ತುಂಬಾ ಅನುಕೂಲವಾಗುತ್ತಿದೆ. ನಮ್ಮ ಪಕ್ಷದ ಮುಖಂಡರು ನಾನಾ ಕಾರ್ಯಕ್ರಮಗಳಿಗೆ ಸಾಕಷ್ಟು ಹಣ ಖರ್ಚು ಮಾಡುತ್ತೀರಾ, ತಾವೇ ಮುಂದಿನ ದಿನಗಳಲ್ಲಿ ರೈತರ ಪರವಾಗಿ ವಿಮಾ ಮೊತ್ತವನ್ನು ಪಾವತಿಸುವಂತಹ ಕಾರ್ಯಕ್ರಮ ಮಾಡಬೇಕು ಎಂದರು.
ಸಭೆಯಲ್ಲಿ ವಿವಿಧ ಅಹವಾಲುಗಳನ್ನು ಸ್ವೀಕರಿಸಿದ ಸಂಸದರು, ಒಂದು ವಾರದೊಳಗೆ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಜಲಜೀವನ್ ಮಿಷನ್ ಸೇರಿದಂತೆ ಕೇಂದ್ರ ಸರ್ಕಾರದ ಕೆಲವೊಂದು ಕಾಮಗಾರಿಗಳಲ್ಲಿ ಲೋಪಗಳು ಕಂಡು ಬಂದಿರುವ ಬಗ್ಗೆ ದೂರುಗಳು ಬಂದಿದ್ದು, ಈ ಕುರಿತು ಆದಷ್ಟು ಶೀಘ್ರ ಖುದ್ದು ನಾನೇ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.
-------