ಗ್ರಾಮದಲ್ಲಿ ಯುವಕರು ಉತ್ಸಾಹದಿಂದ ವಾಲಿಬಾಲ್ ಪಂದ್ಯಾವಳಿ ಆಯೋಜಿಸಿರುವುದು ಸಂತಸ ತಂದಿದೆ. ಕ್ರೀಡೆ ಪ್ರತಿಯೊಬ್ಬರ ಜೀವನದ ಪ್ರಮುಖ ಭಾಗವಾಗಬೇಕು. ನಿಯಮಿತವಾಗಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಚಟುವಟಿಕೆಯೊಂದಿಗೆ ಲವಲವಿಕೆ ಹಾಗೂ ಸಕ್ರಿಯ ಮನೋಭಾವ ಹೆಚ್ಚುತ್ತದೆ .
ಚೇಳೂರು: ಕ್ರೀಡೆಯು ಯುವಜನರ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪ್ರಮುಖವಾಗಿದ್ದು, ಸೋಲು- ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾಸ್ಫೂರ್ತಿಯಿಂದ ಮುನ್ನಡೆಯಬೇಕು ಎಂದು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಪುಟ್ಟು ಅಂಜಿನಪ್ಪ ಹೇಳಿದರು.
ತಾಲೂಕಿನ ಚಿಲಕಲನೇರ್ಪು ಗ್ರಾಮದಲ್ಲಿ ತಮ್ಮ ಜನ್ಮದಿನದ ಅಂಗವಾಗಿ ಸ್ಥಳೀಯ ಯುವಕರು ಆಯೋಜಿಸಿದ್ದ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.ಗ್ರಾಮದಲ್ಲಿ ಯುವಕರು ಉತ್ಸಾಹದಿಂದ ವಾಲಿಬಾಲ್ ಪಂದ್ಯಾವಳಿ ಆಯೋಜಿಸಿರುವುದು ಸಂತಸ ತಂದಿದೆ. ಕ್ರೀಡೆ ಪ್ರತಿಯೊಬ್ಬರ ಜೀವನದ ಪ್ರಮುಖ ಭಾಗವಾಗಬೇಕು. ನಿಯಮಿತವಾಗಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಚಟುವಟಿಕೆಯೊಂದಿಗೆ ಲವಲವಿಕೆ ಹಾಗೂ ಸಕ್ರಿಯ ಮನೋಭಾವ ಹೆಚ್ಚುತ್ತದೆ ಎಂದರು.ಗ್ರಾಮಕ್ಕೆ ಆಗಮಿಸಿದ ಪುಟ್ಟು ಅಂಜಿನಪ್ಪ ಅವರನ್ನು ಯುವಕರು ಪಟಾಕಿ ಸಿಡಿಸಿ, ಹೂಮಾಲೆ ಹಾಕಿ ಆತ್ಮೀಯವಾಗಿ ಸ್ವಾಗತಿಸಿದರು. ಬಳಿಕ ಶಾಲು ಹೊದಿಸಿ ಸನ್ಮಾನಿಸಿ, ಕೇಕ್ ಕತ್ತರಿಸಿ ಜನ್ಮದಿನದ ಶುಭಾಶಯ ಕೋರಿದರು. ಪಂದ್ಯಾವಳಿಗೆ ಚಾಲನೆ ನೀಡಿದ ಅಂಜಿನಪ್ಪ ಸ್ವತಃ ವಾಲಿಬಾಲ್ ಆಡುವ ಮೂಲಕ ಆಟಗಾರರನ್ನು ಪ್ರೋತ್ಸಾಹಿಸಿದರು.
ಪಂದ್ಯಾವಳಿಯಲ್ಲಿ ಚಿಲಕಲನೇರ್ಪು ಗ್ರಾಮದ ತಂಡ ಉತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದು ₹20 ಸಾವಿರ ನಗದು ಬಹುಮಾನ ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಏನಿಗದಲೆ ಗ್ರಾಮದ ತಂಡ ದ್ವಿತೀಯ ಸ್ಥಾನ ಪಡೆದು ₹10 ಸಾವಿರ ನಗದು ಬಹುಮಾನ ಪಡೆಯಿತು. ವಿಜೇತ ತಂಡಗಳ ಆಟಗಾರರಿಗೆ ಆಯೋಜಕರ ವತಿಯಿಂದ ಬಹುಮಾನ ಹಾಗೂ ಟ್ರೋಫಿ ವಿತರಿಸಲಾಯಿತು.ಶಿಡ್ಲಘಟ್ಟ ರಾಜಕುಮಾರ್, ಬಳುವನಹಳ್ಳಿ ಮೂರ್ತಿ, ಮುಖಂಡರಾದ, ಶ್ರೀರಾಮರೆಡ್ಡಿ, ಕೆ.ಎಸ್. ಪ್ರಸಾದ್ ರೆಡ್ಡಿ, ಸುಧಾಕರ್, ಕೆ. ಎನ್. ರಾಮಾಂಜನೇಯ, ಜಿ.ಪಿ. ಹರಿಕೃಷ್ಣ, ಮಣಿಕಂಠ, ವೆಂಕಟೇಶ್, ರಾಘವೇಂದ್ರ, ವೆಂಕಟರಮಣ, ಚೇತನ್, ಜೆ.ಎ. ಅನಿಲ್ ಕುಮಾರ್, ಗೋವಿಂದಪ್ಪ, ಕ್ರೀಡಾಪಟುಗಳು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದರು.