ಗದಗ: ಮುಡಾ ಸೈಟು ಹಂಚಿಕೆ ಹಗರಣವನ್ನು ಸಿಬಿಐ ಮೂಲಕ ತನಿಖೆ ನಡೆಸಲಿ, ಯಾವುದೇ ತಪ್ಪು ಮಾಡಿಲ್ಲ ಎಂದರೆ ಭಯಪಡುವ ಅಗತ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಒಂದು ಪ್ರಕರಣದ ವಿಚಾರಣೆ ಬೇರೆ, ತನಿಖೆ ಮಾಡುವುದು ಬೇರೆ. ಮುಡಾ ಹಗರಣ ತನಿಖೆಗೆ ಒಪ್ಪಿಸಬೇಕು ಅಂತ ಒತ್ತಾಯ ಮಾಡುತ್ತೇನೆ. ಸಂಪೂರ್ಣವಾಗಿ ಮುಡಾದಲ್ಲಿ ಎಕ್ಸೆಂಜ್ ಸೈಟ್ ಗಳು ಯಾವ್ಯಾವು ಇವೆ. ಯಾವ ಸಂದರ್ಭದಲ್ಲಿ ಯಾರಿಗೆ ಸೈಟ್ ನೀಡಿದ್ದೀರಿ ಎನ್ನುವ ಬಗ್ಗೆ ಸಂಪೂರ್ಣ ತನಿಖೆ ಆಗಲಿ. ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಲಿ. ಯಾವುದೇ ಹಗರಣ ಇಲ್ಲ ಎಂದರೆ ಯಾಕೆ ಭಯ ಪಡಬೇಕು.
ಈ ಹಗರಣದ ಕುರಿತು ಬಹಳ ಸ್ಪಷ್ಟವಾಗಿ ಮಾಧ್ಯಮಗಳು ತೋರಿಸಿಕೊಟ್ಟಿವೆ. ಪ್ರಕರಣದ ಕುರಿತು ಸಿಎಂ ಸಿದ್ದರಾಮಯ್ಯ ಬೇಕಾದ್ದು ಹೇಳಲಿ, ಬದಲಿ ನಿವೇಶನ ಯಾವ ಯಾವ ಲೇಔಟ್ ನಲ್ಲಿ ಪಡೆದುಕೊಳ್ಳಬೇಕು ಎನ್ನುವ ಕಾನೂನು ಸ್ಪಷ್ಟವಾಗಿ ಉಲ್ಲಂಘನೆ ಆಗಿದೆ. ಯಾವ ಕಾನೂನು ಉಲ್ಲಂಘನೆ ಆಗಿದೆ ಅಂತ ನಮ್ಮ ಪಕ್ಷದ ನಾಯಕರು ಓದಿ ಹೇಳಿದ್ದಾರೆ.50:50 ಯಾವ ಲೇಔಟ್ ನಲ್ಲಿ ನೀಡಬೇಕು ಅಲ್ಲಿ ನೀಡಿಲ್ಲ. ಮೇಲ್ನೋಟಕ್ಕೆ ನಿಯಮ ಉಲ್ಲಂಘನೆಯಾಗಿದ್ದು ಸ್ಪಷ್ಟವಾಗಿದೆ. ಯಾವ ಸಂದರ್ಭದಲ್ಲಿ ಸೈಟ್ ಪಡೆದುಕೊಂಡರು. ಯಾವ ರೀತಿ ಪಡೆದುಕೊಂಡರು ಎನ್ನುವ ಪ್ರಶ್ನೆ ಇದೆ ಎಂದು ಹೇಳಿದರು.
ಇನ್ನು ವಾಲ್ಮೀಕಿ ನಿಗಮದ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರ ಬಂಧನ ವಿಚಾರ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವಾಲ್ಮೀಕಿ ಹಗರಣ ಇಡಿ ಸಂಸ್ಥೆ ತನಿಖೆ ಮಾಡುತ್ತಿದೆ. ಮೊದಲು ಮಾಜಿ ಸಚಿವ ನಾಗೇಂದ್ರ ಪಾತ್ರ ಇಲ್ಲ ಅಂತಾ ಕ್ಲೀನ್ ಚಿಟ್ ಕೊಟ್ಟರು. ಈಗ ನಾಗೇಂದ್ರ ಪಾತ್ರ ಇರುವುದು ಸ್ಪಷ್ಟವಾಗಿದೆ, ಈಗ ನಾಗೇಂದ್ರ ಬಂಧನವಾಗಿದ್ದಾರೆ.ಶಾಸಕ ಹಾಗೂ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅವರ ಪಾತ್ರ ಇಲ್ಲ ಎಂದರು. ಈಗ ಅದು ಕೂಡಾ ಸಾಬೀತಾಗಿದೆ. ಈ ಪ್ರಕರಣದಲ್ಲಿ ಬಗೆದಷ್ಟು ಹೆಚ್ಚಿಗೆ ಸಿಗುತ್ತಿದೆ, ಬರುವ ದಿನದಲ್ಲಿ ಹಣಕಾಸು ಇಲಾಖೆಯ ಪಾತ್ರ ಸ್ಪಷ್ಟವಾಗುತ್ತದೆ. ಮುಂದಿನ ತನಿಖೆಯನ್ನು ಇಡಿ ಅವರು ತಾವೇ ಮಾಡುತ್ತಾರೆ ಎಂದರು.
ಇನ್ನು ಪ್ರವಾಸೋದ್ಯಮ ಇಲಾಖೆ ನಡೆದ ಹಗರಣದ ಕುರಿತು ಕೇಳಿದ ಪ್ರಶ್ನೆಗೆ ಆ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದರು.